ADVERTISEMENT

ಎಲ್ಲರನ್ನೂ ಒತ್ತಡಕ್ಕೆ ಸಿಲುಕಿಸಲು ಶ್ರೇಷ್ಠ ವೇಗಿಯನ್ನೇ ದಂಡಿಸಿದೆ: ತಿಲಕ್ ವರ್ಮಾ

ಪಿಟಿಐ
Published 26 ಜನವರಿ 2025, 6:59 IST
Last Updated 26 ಜನವರಿ 2025, 6:59 IST
<div class="paragraphs"><p>ತಿಲಕ್‌ ವರ್ಮಾ ಹಾಗೂ ಇಂಗ್ಲೆಂಡ್ ಆಟಗಾರರು</p></div>

ತಿಲಕ್‌ ವರ್ಮಾ ಹಾಗೂ ಇಂಗ್ಲೆಂಡ್ ಆಟಗಾರರು

   

ಪಿಟಿಐ ಚಿತ್ರಗಳು

ಚೆನ್ನೈ: ಇಂಗ್ಲೆಂಡ್‌ ಎದುರಿನ ಟಿ20 ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ ತಿಲಕ್‌ ವರ್ಮಾ, ತಮ್ಮ ಇನಿಂಗ್ಸ್‌ ಕುರಿತು ಮಾತನಾಡಿದ್ದಾರೆ.

ADVERTISEMENT

ಇಂಗ್ಲೆಂಡ್‌ನ ಶ್ರೇಷ್ಠ ವೇಗಿಯ ಎದುರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದು ಹಾಗೂ ಅದರಿಂದ ಇತರ ಬೌಲರ್‌ಗಳ ಮೇಲೂ ಒತ್ತಡ ಹೇರುವುದು ತಮ್ಮ ಯೋಜನೆಯಾಗಿತ್ತು ಎಂದು ಹೇಳಿದ್ದಾರೆ.

ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗೆ 165 ರನ್‌ ಕಲೆಹಾಕಿತ್ತು. ಗುರಿ ಬೆನ್ನತ್ತಿದ ಭಾರತ, 10 ಓವರ್‌ ಮುಗಿಯುವುದರೊಳಗೆ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡು 79 ರನ್‌ ಕಲೆಹಾಕಿತ್ತು. ಈ ಹಂತದಲ್ಲಿ ಸಮಯೋಚಿತ ಆಟವಾಡಿದ ತಿಲಕ್‌, ಕೆಳ ಕ್ರಮಾಂಕದ ಬ್ಯಾಟರ್‌ಗಳೊಂದಿಗೆ ಸೇರಿ ತಂಡವನ್ನು ಜಯದತ್ತ ಮುನ್ನಡೆಸಿದರು.

ಒಟ್ಟು 55 ಎಸೆತಗಳನ್ನು ಎದುರಿಸಿದ ಅವರು, 72 ರನ್ ಗಳಿಸಿ ಔಟಾಗದೆ ಉಳಿದರು. ಅವರು ಸಿಡಿಸಿದ ಐದರಲ್ಲಿ ನಾಲ್ಕು ಸಿಕ್ಸರ್‌ಗಳು, ಆಂಗ್ಲರ ಪಡೆಯ ಮುಂಚೂಣಿ ವೇಗಿ ಜೋಫ್ರಾ ಆರ್ಚರ್‌ ಅವರ ಬೌಲಿಂಗ್‌ನಲ್ಲೇ ಬಂದವು. ಹೀಗಾಗಿ, ಆರ್ಚರ್‌ 4 ಓವರ್‌ಗಳಲ್ಲಿ 60 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಅವರು ಕೋಲ್ಕತ್ತದಲ್ಲಿ ನಡೆದ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 21 ರನ್‌ ಬಿಟ್ಟುಕೊಟ್ಟು 2 ವಿಕೆಟ್‌ ಉರುಳಿಸಿದ್ದರು.

‌ಆರ್ಚರ್‌ ಎದುರು ಬೀಸಾಟವಾಡಿದ ಕುರಿತು ಪಂದ್ಯದ ಬಳಿಕ ತಿಲಕ್‌ ಮಾತನಾಡಿದ್ದಾರೆ. 'ಎದುರಾಳಿ ತಂಡದ ಇತರ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಲುವಾಗಿ, ಅವರ ಅತ್ಯುತ್ತಮ ಬೌಲರ್‌ ಅನ್ನು ಗುರಿಯಾಗಿಸಿ ಆಡಲು ಬಯಸುತ್ತೇನೆ. ಒಂದು ತುದಿಯಲ್ಲಿ ವಿಕೆಟ್‌ ಬೀಳುತ್ತಿದ್ದಾಗ, ಆ ತಂಡದ ಮುಂಚೂಣಿ ವೇಗಿಗಳನ್ನು ದಂಡಿಸಲು ನೋಡುತ್ತೇನೆ' ಎಂದಿದ್ದಾರೆ.

ಮುಂದುವರಿದು, 'ಅದರಲ್ಲಿ ನಾನು ಯಶಸ್ವಿಯಾದರೆ, ಇತರ ಬ್ಯಾಟರ್‌ಗಳಿಗೂ ಸುಲಭವಾಗಿ ರನ್‌ ಗಳಿಸಲು ಸಾಧ್ಯವಾಗುತ್ತದೆ. ಹಾಗಾಗಿ, ಆರ್ಚರ್‌ ಎದುರು ಆಕ್ರಮಣಕಾರಿಯಾಗಿ ಆಡಲು ಮುಂದಾದೆ. ನಾನು ಪ್ರಯೋಗಿಸಿದ ಹೊಡೆತಗಳನ್ನು ನೆಟ್ಸ್‌ನಲ್ಲಿ ಅಭ್ಯಾಸ ಮಾಡಿ, ಮಾನಸಿಕವಾಗಿ ಸಜ್ಜಾಗಿದ್ದೆ. ಅದರಿಂದಾಗಿ, ಒಳ್ಳೆ ಫಲಿತಾಂಶ ಸಿಕ್ಕಿತು' ಎಂದು ವಿವರಿಸಿದ್ದಾರೆ.

ಆರ್ಚರ್‌ ಹಾಕಿದ ಇನಿಂಗ್ಸ್‌ನ 5ನೇ ಓವರ್‌ ಹಾಗೂ 16ನೇ ಓವರ್‌ನಲ್ಲಿ ತಿಲಕ್‌ ವರ್ಮಾ, ತಲಾ ಎರಡು ಸಿಕ್ಸರ್‌ ಹಾಗೂ ಒಂದೊಂದು ಬೌಂಡರಿ ಬಾರಿಸಿದ್ದರು.

2–0 ಮುನ್ನಡೆ
ಸರಣಿಯ ಮೊದಲ ಪಂದ್ಯದಲ್ಲೂ ಗೆಲುವು ಸಾಧಿಸಿದ್ದ ಭಾರತ 5 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯವು, ರಾಜ್‌ಕೋಟ್‌ನಲ್ಲಿ ಮಂಗಳವಾರ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.