ADVERTISEMENT

IND vs ENG 5th Test: ಇಂಗ್ಲೆಂಡ್‌ಗೆ 374 ರನ್‌ ಗುರಿ

ಏಜೆನ್ಸೀಸ್
Published 2 ಆಗಸ್ಟ್ 2025, 18:55 IST
Last Updated 2 ಆಗಸ್ಟ್ 2025, 18:55 IST
<div class="paragraphs"><p>ಆಕಾಶ್‌ ದೀಪ್‌-&nbsp;ಜೈಸ್ವಾಲ್‌</p></div>

ಆಕಾಶ್‌ ದೀಪ್‌- ಜೈಸ್ವಾಲ್‌

   

ಲಂಡನ್‌: ವೀರರಿಗೆ ಅದೃಷ್ಟದ ಬಲವೂ ಇರುತ್ತದೆ ಎಂಬ ಮಾತಿದೆ. ಅದಕ್ಕೆ ತಕ್ಕಂತೆ ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ತಮ್ಮ ಅದೃಷ್ಟದ ಮೇಲೆ ಸವಾರಿ ಮಾಡಿ ಶನಿವಾರ ಶತಕ ಬಾರಿಸಿದರು. ಫೀಲ್ಡರ್‌ಗಳ ‍ಪ್ರಮಾದ ಐದನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ತಂಡದ ಪಾಲಿಗೆ ದುಬಾರಿಯಾಗುವ ಸಾಧ್ಯತೆಯೂ ಇದೆ.

ಮೂರನೇ ದಿನ ಎರಡು ಸೇರಿದಂತೆ ಒಟ್ಟು ನಾಲ್ಕು ಜೀವದಾನಗಳ ಲಾಭ ಪಡೆದ ಜೈಸ್ವಾಲ್‌, ಇಂಗ್ಲೆಂಡ್‌ ಇದಕ್ಕೆ ದಂಡ ತೆರುವಂತೆ ಮಾಡಿದರು.

ADVERTISEMENT

ಪ್ರತ್ಯಾಕ್ರಮಣದ ಆಟದಲ್ಲಿ ಅವರು 164 ಎಸೆತಗಳಲ್ಲಿ 118 ರನ್ ಬಾರಿಸಿದರು. ಜೈಸ್ವಾಲ್‌ ಬ್ಯಾಟಿಂಗ್‌ ಜೊತೆ ಆಕಾಶ್‌ದೀಪ್‌ (66), ರವೀಂದ್ರ ಜಡೇಜ (53) ಮತ್ತು ವಾಷಿಂಗ್ಟನ್‌ ಸುಂದರ್‌ (53) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ಎರಡನೇ ಇನಿಂಗ್ಸ್‌ನಲ್ಲಿ 396 ರನ್‌ ಗಳಿಸಿ ಆಲೌಟ್‌ ಆಯಿತು.

ಗೆಲುವಿಗೆ 374 ರನ್‌ಗಳ ಸವಾಲಿನ ಗುರಿ ಪಡೆದ ಆತಿಥೇಯ ತಂಡವು ಮೂರನೇ ದಿನದಾಟದ ಮುಕ್ತಾಯಕ್ಕೆ 13.5 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 50 ರನ್‌ ಗಳಿಸಿದೆ. ಗೆಲುವಿಗೆ ಇನ್ನೂ 324 ರನ್‌ ದೂರದಲ್ಲಿದೆ.

ಕೊನೆಯ ಅವಕಾಶದಲ್ಲಿ ತನ್ನ ವೇಗದ ಬೌಲರ್‌ಗಳು ಅಗತ್ಯಕ್ಕೆ ಸ್ಪಂದಿಸಲಿದ್ದು, ಆ್ಯಂಡರ್ಸನ್‌– ತೆಂಡೂಲ್ಕರ್‌ ಟ್ರೋಫಿ ಸರಣಿಯನ್ನು 2–2 ಸಮಮಾಡಿಕೊಳ್ಳುವ ವಿಶ್ವಾಸದಲ್ಲಿ ಭಾರತ ತಂಡವಿದೆ. ಆದರೆ, ಇಂಗ್ಲೆಂಡ್‌ ತಂಡವು ಈ ಪಂದ್ಯವನ್ನು ಗೆದ್ದು ಸರಣಿ ವಶಮಾಡಿಕೊಳ್ಳುವ ಛಲದಲ್ಲಿದೆ.

ಮೂರು ದಿನಗಳಲ್ಲಿ ಮೊದಲ ಬಾರಿ ಬೌಲರ್‌ಗಳಿಗೆ ಪಿಚ್‌ ಹೆಚ್ಚಿನ ನೆರವು ನೀಡಿದಂತೆ ಕಾಣಲಿಲ್ಲ. ಬೆಳಿಗ್ಗೆ ಹದವಾದ ಬಿಸಿಲೂ ಇದ್ದು ಪಿಚ್‌ ಬ್ಯಾಟರ್‌ಗಳಿಗೆ ಅನುಕೂಲವಾಗಿರುವಂತೆ ಕಂಡಿತು. ಆದರೆ ವೇಗಿಗಳು ಕರಾರುವಾಕ್ ಬೌಲಿಂಗ್ ಮಾಡಿದಲ್ಲಿ ಅವರಿಗೂ ಯಶಸ್ಸು ಅಸಾಧ್ಯವಾಗಿರಲಿಲ್ಲ.

ಇಲ್ಲೇ ಇಂಗ್ಲೆಂಡ್ ಹಿನ್ನಡೆ ಕಂಡಿತು. ಯಶಸ್ವಿ ಮತ್ತು ‘ನೈಟ್‌ ವಾಚ್‌ಮನ್‌’ ಆಕಾಶ್‌ ದೀಪ್‌ ಇದರ ಲಾಭ ಪಡೆದರು. ಅದರಲ್ಲೂ ಆಕಾಶ್‌ ಜೀವನಶ್ರೇಷ್ಠ 66 ರನ್‌ (94 ಎಸೆತ) ಹೊಡೆದರು.

ಅನುಭವಿ ಕ್ರಿಸ್‌ ವೋಕ್ಸ್‌ ಮೊದಲ ದಿನ ಗಾಯಾಳಾಗಿ ಹೊರನಡೆದಿದ್ದರು.

ಅವರ ಗೈರಿನಲ್ಲಿ ಇತರ ವೇಗಿಗಳಾದ ಗಸ್‌ ಅಟ್ಕಿನ್ಸನ್‌, ಜೋಶ್ ಟಂಗ್ ಮತ್ತು ಜೆಮಿ ಓವರ್ಟನ್‌ ಅವರು ತಮ್ಮ ಲೈನ್ ಮತ್ತು ಲೆಂಗ್ತ್‌ನಲ್ಲಿ ಎಡವಿದರು. ಇದರಿಂದ ಯಶಸ್ವಿ ಮತ್ತು ಆಕಾಶ್‌ ಬೌಲರ್‌ಗಳನ್ನು ವಿಶ್ವಾಸದಿಂದ ಆಡಿದರು. ಫುಲ್ಲರ್‌ ಲೆಂಗ್ತ್‌ ಎಸೆತಗಳಲ್ಲಿ ಮೊದಲೆರಡು ದಿನ ಇತ್ತಂಡಗಳು ವಿಕೆಟ್‌ಗಳನ್ನು ಪಡೆದಿದ್ದವು. ಆದರೆ ಮೂರನೇ ದಿನ ಕೆಲವು ಎಸೆತಗಳಷ್ಟೇ ಅಪಾಯಕಾರಿಯಾಗಿ ಕಂಡವು.

ಇಂಗ್ಲೆಂಡ್ ಎದುರು ಬ್ಯಾಟಿಂಗ್ ಆಸ್ವಾದಿಸುವ ಜೈಸ್ವಾಲ್‌, ಆ ತಂಡದ ಎದುರು ನಾಲ್ಕನೇ ಮತ್ತು ಒಟ್ಟಾರೆ ಆರನೇ ಶತಕ ದಾಖಲಿಸಿದರು. ಆಕಾಶ್‌ ಸಹ ಬ್ಯಾಟರ್‌ ರೀತಿ ಕುದುರಿಕೊಂಡು ಇಂಗ್ಲೆಂಡ್‌ ಬೌಲರ್‌ಗಳನ್ನು ಹತಾಶ ಗೊಳಿಸಿದರು. ಆಕಾಶ್‌ ಬಾರಿಸಿದ ಪ್ರತಿಯೊಂದು ಬೌಂಡರಿಗೂ, ಸಾಕಷ್ಟು ಸಂಖ್ಯೆಯಲ್ಲಿದ್ದ ಭಾರತೀಯ ಪ್ರೇಕ್ಷಕರಿಂದ ಹರ್ಷೋದ್ಗಾರಗಳು ಕೇಳಿಬಂದವು.

ಇಂಗ್ಲೆಂಡ್ ನಂತರ ಶಾರ್ಟ್‌ ಬಾಲ್‌ಗಳನ್ನು ಪ್ರಯೋಗಿಸತೊಡಗಿತು. ಆದರೆ ಜೈಸ್ವಾಲ್ ಮತ್ತು ಆಕಾಶ್‌ ಅವುಗಳನ್ನು ಕಟ್‌, ಪುಲ್ ಮತ್ತ ಹುಕ್‌ ಮಾಡುವ ಮೂಲಕ ಪ್ರತ್ಯುತ್ತರ ನೀಡಿದರು. ಆಕಾಶ್ ಮುಂದಡಿಯಿಟ್ಟು ಬಾರಿಸಿದ ಪುಲ್‌ ಹೊಡೆತಗಳು ವೀಕ್ಷಕ ವಿವರಣೆ ಮಾಡುತ್ತಿದ್ದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್‌ ಮೆಚ್ಚುಗೆ ಪಡೆದವು. ಈ ಹಂತದಲ್ಲಿ ಇವರಿಬ್ಬರು ಭಾರತ ತಂಡವನ್ನು ಸುರಕ್ಷಿತ ಸ್ಥಿತಿಗೆ ಒಯ್ಯುವಂತೆ ಕಂಡಿತು.

ಈ ವೇಳೆ ಓವರ್ಟನ್‌ ಇಂಗ್ಲೆಂಡ್‌ಗೆ ದಿನದ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಕ್ಯಾಚಿತ್ತ ಆಕಾಶ್‌ಗೆ ನಿರಾಸೆ ಉಂಟಾಯಿತು. ಆದರೆ ತಮ್ಮ ಕೆಲಸವನ್ನು ಉತ್ತಮ ವಾಗಿಯೇ ನಿರ್ವಹಿಸಿದ ಭಾವ ಅವರಲ್ಲಿ ಕಂಡಿತು. ಮೂರನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ಭಾರತವನ್ನು ಅಪಾಯದಿಂದ ಪಾರು ಮಾಡಿತ್ತು.‌

ಈ ಸರಣಿಯಲ್ಲಿ ಹಲವು ಬಾರಿ ಪೆಂಡುಲಮ್‌ನಂತೆ ಮೇಲುಗೈ ಬದಲಾಗುತ್ತಾ ಹೋಗಿದೆ. ಲಂಚ್‌ ನಂತರ ಮೊದಲ ಎಸೆತದಲ್ಲೇ ಶುಭಮನ್ ಗಿಲ್‌ ನಿರ್ಗಮಿಸಿದ್ದರಿಂದ ಇಂಗ್ಲೆಂಡ್‌ ನಿಟ್ಟುಸಿರುಟ್ಟಿತು. ಕನ್ನಡಿಗ ಕರುಣ್‌ ನಾಯರ್‌ ಸರಾಗವಾಗಿ ಆಡಲಿಲ್ಲ. ಆದರೆ ಇನ್ನೊಂದೆಡೆ ಜೈಸ್ವಾಲ್‌ ಶತಕ ಪೂರೈಸಿದರು. ಆದರೆ ಕರುಣ್‌ ಅವರ ವಿಕೆಟ್ ಪಡೆದ ಇಂಗ್ಲೆಂಡ್‌ ಪಂದ್ಯದ ಮೇಲೆ ಮರಳಿ ಹಿಡಿತ ಸಾಧಿಸಿತು.

ಸರಣಿಯಲ್ಲಿ ಕೆಲವು ಅಮೋಘ ಇನಿಂಗ್ಸ್ ಆಡಿರುವ ಜಡೇಜ ಮತ್ತೆ ಎದುರಾಳಿ ತಂಡವನ್ನು ಕಾಡಿದರು. ಸರಣಿಯಲ್ಲಿ ದಾಖಲೆಯ ಆರನೇ ಅರ್ಧಶತಕ ದಾಖಲಿಸಿದ ಜಡೇಜ ಅವರು ಧ್ರುವ ಜುರೇಲ್‌ (34) ಅವರೊಂದಿಗೆ ಏಳನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು.

ಜುರೇಲ್‌ ನಿರ್ಗಮನದ ಬಳಿಕ ಜಡೇಜ ಅವರನ್ನು ಸೇರಿಕೊಂಡ ವಾಷಿಂಗ್ಟನ್‌ ತಂಡದ ಮೊತ್ತವನ್ನು ಮತ್ತಷ್ಟು ಹಿಗ್ಗಿಸಿದರು. ಜಡೇಜ ಔಟಾದ ಬಳಿಕ ವಾಷಿಂಗ್ಟನ್‌ ರನ್‌ ವೇಗವನ್ನು ಹೆಚ್ಚಿಸಿಕೊಂಡರು. ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಪ್ರಸಿದ್ಧಕೃಷ್ಣ ಅವರೊಂದಿಗೆ 39 ರನ್‌ ಸೇರಿಸಿದರು. ಅಷ್ಟೂ ರನ್‌ಗಳು ವಾಷಿಂಗ್ಟನ್‌ ಬ್ಯಾಟ್‌ನಿಂದಲೇ ಬಂದವು. ಹೀಗಾಗಿ, ತಂಡದ ಮೊತ್ತ 400ರ ಸಮೀಪ ಬರಲು ಸಾಧ್ಯವಾಯಿತು. ಜೋಶ್‌ ಟಂಗ್‌ ಐದು ವಿಕೆಟ್‌ ಗೊಂಚಲು ಪಡೆದರೆ, ಅಟ್ಕಿನ್ಸನ್‌ ಮೂರು ವಿಕೆಟ್‌ ಕಬಳಿಸಿದರು.

ಸಿರಾಜ್‌ ಪೆಟ್ಟು: ಜ್ಯಾಕ್‌ ಕ್ರಾಲಿ (14) ಮತ್ತು ಬೆನ್‌ ಡಕೆಡ್‌ (ಔಟಾಗದೇ 34) ಮೊದಲ ವಿಕೆಟ್‌ಗೆ 50 ರನ್‌ ಸೇರಿಸಿ ಇಂಗ್ಲೆಂಡ್‌ ಹೋರಾಟಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ, ದಿನದಾಟದ ಕೊನೆಯ ಎಸೆತದಲ್ಲಿ ಕ್ರಾಲಿ ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್‌ ಸಿರಾಜ್‌ ಪೆಟ್ಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.