ADVERTISEMENT

IND vs ENG ಟೆಸ್ಟ್ ಸರಣಿ: ಭಾರತದ ತಿರುಗೇಟು ತಡೆಗೆ ಸಿದ್ಧತೆ -ಕಾಲಿಂಗ್‌ವುಡ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 16:42 IST
Last Updated 31 ಆಗಸ್ಟ್ 2021, 16:42 IST
ಪಾಲ್ ಕಾಲಿಂಗ್‌ವುಡ್
ಪಾಲ್ ಕಾಲಿಂಗ್‌ವುಡ್   

ಬೆಂಗಳೂರು: ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋತಿರುವ ಭಾರತ ತಂಡವು ಬಹಳಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಆದ್ದರಿಂದ ಮುಂದಿನ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ತಿರುಗೇಟು ನೀಡುವುದು ಖಚಿತ. ಆ ಸವಾಲನ್ನು ಎದುರಿಸಲು ತಮ್ಮ ತಂಡವು ಬಹಳಷ್ಟು ಕಠಿಣ ಅಭ್ಯಾಸ ನಡೆಸುತ್ತಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಸಹಾಯಕ ಕೋಚ್ ಪಾಲ್ ಕಾಲಿಂಗ್‌ವುಡ್ ಹೇಳಿದರು.

ಐದು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1ರ ಸಮಬಲ ಸಾಧಿಸಿವೆ. ಇನ್ನೂ ಎರಡು ಪಂದ್ಯಗಳು ಬಾಕಿಯಿವೆ. ಮೂರನೇ ಪಂದ್ಯದಲ್ಲಿ ಭರತವು 76 ರನ್‌ಗಳಿಂದ ಪರಾಭವಗೊಂಡಿತ್ತು.

‘ಅಭಿಮಾನಿಗಳು ಭಾರತದ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸುವುದು ಸುಲಭ ಮತ್ತು ಸಹಜ. ಆದರೆ ನಮ್ಮ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಪಿಚ್‌ನಲ್ಲಿಯೂ ಚೆಂಡಿನ ಚಲನೆ ಉತ್ತಮವಾಗಿತ್ತು. ಅದನ್ನೂ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಮ್ಮ ಬೌಲರ್‌ಗಳು ಯಶಸ್ವಿಯಾದರು’ ಎಂದು ಪಾಲ್ ಮಂಗಳವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಭಾರತವು ತಿರುಗೇಟು ನೀಡುವ ಛಲದಲ್ಲಿದೆ. ಅವರ ಸವಾಲು ತಡೆಯಲು ನಾವು ಎಲ್ಲ ರೀತಿಯಿಂದ ಸಿದ್ಧತೆ ನಡೆಸಿದ್ದೇವೆ. ಅವರ ತಂಡದಲ್ಲಿ ಶ್ರೇಷ್ಠ ಆಟಗಾರರು ಇದ್ದಾರೆ. ನಾವು ಯಾವುದೇ ರೀತಿಯಲ್ಲಿಯೂ ನಿರ್ಲಕ್ಷಿಸುವಂತಿಲ್ಲ ಮತ್ತು ಅತಿಯಾದ ಆತ್ಮವಿಶ್ವಾಸದಲ್ಲಿ ತೇಲುವಂತೆಯೂ ಇಲ್ಲ’ ಎಂದರು.

‘ಹೆಡಿಂಗ್ಲೆಯಲ್ಲಿ ನಡೆದ ಪಂದ್ಯದಲ್ಲಿ ಡೇವಿಡ್ ಮಲಾನ್ ಮತ್ತು ಹಸೀಬ್ ಹಮೀದ್ ಅವರ ಆಟ ಗಮನ ಸೆಳೆಯಿತು. ನಾಯಕ ಜೋ ರೂಟ್ ಅವರ ಸಾಧನೆ ಬಣ್ಣಿಸಲು ಪದಗಳು ಸಾಲದು. ತಮ್ಮ ಜೀವನಶ್ರೇಷ್ಠ ಫಾರ್ಮ್‌ನಲ್ಲಿ ಅವರಿದ್ದಾರೆ’ ಎಂದು ಪಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.