ADVERTISEMENT

IND vs SA 2nd Test: ನಾಯಕ ರಾಹುಲ್ ಫಿಫ್ಟಿ; ಟೀ ವಿರಾಮಕ್ಕೆ ಭಾರತ 146/5

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 16:07 IST
Last Updated 3 ಜನವರಿ 2022, 16:07 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಜೋಹಾನ್ಸ್‌ಬರ್ಗ್: ನಾಯಕ ಕೆ.ಎಲ್. ರಾಹುಲ್ ಅರ್ಧಶತಕದ (50) ಹೊರತಾಗಿಯೂ ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ, ಮೊದಲ ದಿನದ ಟೀ ವಿರಾಮದ ವೇಳೆಗೆ 51 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ.

ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ವಿಕೆಟ್‌ನ ಮತ್ತೊಂದು ತುದಿಯಿಂದ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಾಹುಲ್, ಟೆಸ್ಟ್ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲಿ ಅರ್ಧಶತಕ ಸಾಧನೆ ಮಾಡಿದರು.

ಆದರೆ ಫಿಫ್ಟಿ ಬೆನ್ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು. 133 ಎಸೆತಗಳನ್ನು ಎದುರಿಸಿರುವ ರಾಹುಲ್ ಒಂಬತ್ತು ಬೌಂಡರಿಗಳ ನೆರವಿನಿಂದ 50 ರನ್ ಗಳಿಸಿದರು.

ಹನುಮ ವಿಹಾರಿ (20) ಅವರಿಗೂ ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ರಿಷಭ್ ಪಂತ್ (13*) ಹಾಗೂ ಆರ್. ಅಶ್ವಿನ್ (24*) ಕ್ರೀಸಿನಲ್ಲಿದ್ದಾರೆ.

ಈ ಮೊದಲು ಬೆನ್ನು ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ ಕೆ.ಎಲ್. ರಾಹುಲ್, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ಕನ್ನಡಿಗರಾದ ರಾಹುಲ್ ಹಾಗೂ ಮಯಂಕ್ ಅಗರವಾಲ್ ಮೊದಲ ವಿಕೆಟ್‌ಗೆ 36 ರನ್‌ಗಳ ಜೊತೆಯಾಟ ಕಟ್ಟಿದರು. ಆದರೆ ಈ ಜೊತೆಯಾಟ ಮುರಿದ ಬೆನ್ನಲ್ಲೇ ಭಾರತದ ಕುಸಿತ ಆರಂಭವಾಯಿತು. ಮಯಂಕ್ ಅಗರವಾಲ್ (26), ಚೇತೇಶ್ವರ ಪೂಜಾರ (3) ಹಾಗೂ ಅಜಿಂಕ್ಯ ರಹಾನೆ (0) ನಿರಾಸೆ ಮೂಡಿಸಿದರು.

ದಕ್ಷಿಣ ಆಫ್ರಿಕಾದ ಪರ ಡುವಾನೆ ಒಲಿವಿಯರ್ ಹಾಗೂ ಮಾರ್ಕೊ ಜಾನ್ಸೆನ್ ತಲಾ ಎರಡು ಮತ್ತು ಕಗಿಸೊ ರಬಾಡ ಒಂದು ವಿಕೆಟ್ ಕಿತ್ತು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.