
ಗುವಾಹಟಿ: ದಕ್ಷಿಣ ಆಫ್ರಿಕಾ ತಂಡದ ತಾರಾ ವೇಗಿ ಕಗಿಸೊ ರಬಾಡ ಅಭ್ಯಾಸಕ್ಕೆ ಗೈರು ಹಾಜರಾಗಿದ್ದರು. ಆದರೂ ಶನಿವಾರದಿಂದ ಆರಂಭವಾಗಲಿರುವ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಬೌಲಿಂಗ್ ತರಬೇತುದಾರ ಪಿಯೆಟ್ ಬೋಥಾ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಪ್ರಮುಖ ಬೌಲರ್ ಆಗಿರುವ ರಬಾಡ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ತರಬೇತಿ ನಡೆಸುವಾಗ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಹಾಗಾಗಿ ಅವರು ಕೊಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ತಪ್ಪಿಸಿಕೊಂಡಿದ್ದರು.
‘ಕಗಿಸೊ ರಬಾಡ ಅವರ ಆರೋಗ್ಯದ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಮುಂದಿನ 24 ಗಂಟೆಗಳಲ್ಲಿ ಅವರು ಮುಂದಿನ ಪಂದ್ಯದಲ್ಲಿ ಆಡುತ್ತಾರೋ ಅಥವಾ ಇಲ್ಲವೋ ಎಂಬ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಬೋಥಾ ತಿಳಿಸಿದ್ದಾರೆ.
ಗುವಾಹಟಿಯಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನು ಆಯೋಜಿಸಿದ್ದು, ಉಭಯ ತಂಡಗಳಿಗೂ ಈ ಪಿಚ್ ಅಪರಿಚಿತವಾಗಿದೆ. ‘ಗುವಾಹಟಿ ಪಿಚ್ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಎಂದು ನಮಗೆ ತಿಳಿಸಿದ್ದಾರೆ. ಆದರೆ ಹುಲ್ಲನ್ನು ಯಾವ ಪ್ರಮಾಣದಲ್ಲಿ ಕತ್ತರಿಸಿದ್ದಾರೆ ಎನ್ನುವುದರ ಮೇಲೆ ನಾವು ಆಡುವ 11ರ ತಂಡವನ್ನು ಆಯ್ಕೆ ಮಾಡುತ್ತೇವೆ’ ಎಂದು ಬೋಥಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.