ADVERTISEMENT

NZ vs SA: ಎರಡೂ ಇನಿಂಗ್ಸ್‌ಗಳಲ್ಲಿ ಕೇನ್ ವಿಲಿಯಮ್ಸನ್ ಶತಕ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2024, 11:01 IST
Last Updated 6 ಫೆಬ್ರುವರಿ 2024, 11:01 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ಚಿತ್ರ ಕೃಪೆ: X/@BLACKCAPS)

ಮೌಂಟ್‌ ಮಾಂಗಾನೂಯಿ (ನ್ಯೂಜಿಲೆಂಡ್‌),: ಅನುಭವಿ ಬ್ಯಾಟರ್‌ ಕೇನ್‌ ವಿಲಿಯಮ್ಸನ್, ಮೊದಲ ಟೆಸ್ಟ್‌ ಪಂದ್ಯದಲ್ಲಿ ಎರಡನೇ ಶತಕವನ್ನು ಬಾರಿಸಿದ್ದು, ಆತಿಥೇಯ ನ್ಯೂಜಿಲೆಂಡ್ ತಂಡ, ಮೂರನೇ ದಿನವಾದ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಬಿಗಿಹಿಡಿತ ಸಾಧಿಸಿದೆ.

ADVERTISEMENT

ರನ್‌ಯಂತ್ರ ವಿಲಿಯಮ್ಸನ್ ಆಕರ್ಷಕ 109 ರನ್ (132 ಎಸೆತ, 4x12, 6x1) ಗಳಿಸಿದ ನಂತರ ಎದುರಾಳಿ ತಂಡದ ನಾಯಕ ಹಾಗೂ ಎಡಗೈ ಸ್ಪಿನ್ನರ್‌ ನೀಲ್‌ ಬ್ರಾಂಡ್‌ ಬೌಲಿಂಗ್‌ನಲ್ಲಿ ಸ್ಟಂಪ್ಡ್‌ ಆದರು. ದಿನದಾಟದ ಕೊನೆಗೆ ನ್ಯೂಜಿಲೆಂಡ್ 4 ವಿಕೆಟ್‌ಗೆ 179 ರನ್ ಗಳಿಸಿದೆ. ಒಟ್ಟಾರೆ ಮುನ್ನಡೆಯನ್ನು 528 ರನ್‌ಗಳಿಗೆ ಏರಿಸಿದೆ.

ವಿಲಿಯಮ್ಸನ್ ಮೊದಲ ಇನಿಂಗ್ಸ್‌ನಲ್ಲಿ 118 ರನ್ ಹೊಡೆದಿದ್ದರು. ಇದು ಟೆಸ್ಟ್‌ನಲ್ಲಿ ಅವರ 31ನೇ ಶತಕ. ಆದರೆ 34 ವರ್ಷದ ಆಟಗಾರ ಒಂದೇ ಟೆಸ್ಟ್‌ನಲ್ಲಿ ಎರಡು ಶತಕ ಬಾರಿಸಿದ್ದು ಇದೇ ಮೊದಲ ಸಲ. ಮೊದಲ ಇನಿಂಗ್ಸ್‌ನಂತೆ ಎರಡನೇ ಇನಿಂಗ್ಸ್‌ನಲ್ಲೂ ಅವರಿಗೆ ಒಮ್ಮೆ ಅದೃಷ್ಟದ ಬಲವಿತ್ತು. ಎಡ್ವರ್ಡ್‌ ಮೂರ್‌, ಎರಡೂ ಬಾರಿ ಕ್ಯಾಚ್ ನೆಲಕ್ಕೆ ಹಾಕಿದ ಫೀಲ್ಡರ್‌.

ಪ್ರಮುಖ ಆಟಗಾರರಿಲ್ಲದ ಪ್ರವಾಸಿ ತಂಡ, ಹದಗೆಡುತ್ತಿರುವ ಪಿಚ್‌ನಲ್ಲಿ ಭಾರಿ ಮೊತ್ತ ಬೆನ್ನಟ್ಟಬೇಕಾದ ಸ್ಥಿತಿಗೆ ತಲುಪಿದೆ.

ಇದಕ್ಕೆ ಮೊದಲು ನ್ಯೂಜಿಲೆಂಡ್‌ನ 511 ರನ್‌ಗಳಿಗೆ ಉತ್ತರವಾಗಿ, ಎರಡನೇ ದಿನದಾಟ ಮುಗಿದಾಗ 4 ವಿಕೆಟ್‌ಗೆ 80 ರನ್ ಗಳಿಸಿದ್ದ ಪ್ರವಾಸಿ ತಂಡ ಮಂಗಳವಾರ 162 ರನ್‌ಗಳಿಗೆ ಆಲೌಟ್‌ ಆಯಿತು. ಕೀಗನ್ ಪೀಟರ್ಸನ್ ಅತ್ಯಧಿಕ 45 ರನ್ ಗಳಿಸಿದರು. 13 ಟೆಸ್ಟ್‌ ಆಡಿರುವ ಅವರು ಹಾಲಿ ತಂಡದ ಅನುಭವಿ ಆಟಗಾರ ಎನಿಸಿದ್ದಾರೆ.

ಸ್ಕೋರುಗಳು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌: 511, ದಕ್ಷಿಣ ಆಫ್ರಿಕಾ: 72.5 ಓವರುಗಳಲ್ಲಿ 162 (ಡೇವಿಡ್ ಬೆಡ್ಡಿಂಗಮ್ 32, ಕೀಗನ್ ಪೀಟರ್ಸನ್ 45; ‌ಮ್ಯಾಟ್ ಹೆನ್ರಿ 31ಕ್ಕೆ3, ಕೈಲ್ ಜೇಮಿಸನ್ 35ಕ್ಕೆ2, ಮಿಚೆಲ್ ಸ್ಯಾಂಟ್ನರ್ 34ಕ್ಕೆ3, ರಚಿನ್ ರವೀಂದ್ರ 16ಕ್ಕೆ2); ಎರಡನೇ ಇನಿಂಗ್ಸ್‌: ನ್ಯೂಜಿಲೆಂಡ್: 43 ಓವರುಗಳಲ್ಲಿ 4 ವಿಕೆಟ್‌ಗೆ 179 (ಡೆವಾನ್ ಕಾನ್ವೆ 29, ಕೇನ್ ವಿಲಿಯಮ್ಸನ್ 109; ನೀಲ್ ಬ್ರಾಂಡ್ 52ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.