ADVERTISEMENT

Asia Cup: ಸ್ಪಿನ್ ದಾಳಿಗೆ ತತ್ತರಿಸಿದ ಭಾರತ; ಶ್ರೀಲಂಕಾಕ್ಕೆ 214 ರನ್ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2023, 14:15 IST
Last Updated 12 ಸೆಪ್ಟೆಂಬರ್ 2023, 14:15 IST
<div class="paragraphs"><p>ಶ್ರೀಲಂಕಾ ಆಟಗಾರರ ಸಂಭ್ರಮ</p></div>

ಶ್ರೀಲಂಕಾ ಆಟಗಾರರ ಸಂಭ್ರಮ

   

ಚಿತ್ರಕೃಪೆ: @OfficialSLC

ಕೊಲೊಂಬೊ: ಏಷ್ಯಾಕಪ್ ಏಕದಿನ ಕ್ರಿಕೆಟ್‌ ಟೂರ್ನಿಯ ಸೂಪರ್‌ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿನ್ನೆಯಷ್ಟೇ ಅಬ್ಬರಿಸಿದ್ದ ಭಾರತದ ಬ್ಯಾಟರ್‌ಗಳು ಇಂದು ಶ್ರೀಲಂಕಾದ ಸ್ಪಿನ್‌ ದಾಳಿ ಎದುರು ತತ್ತರಿಸಿದರು.

ADVERTISEMENT

ಇಲ್ಲಿನ ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯಿತಾದರೂ ಸಾಧಾರಣ ಮೊತ್ತಕ್ಕೆ ಕುಸಿಯಿತು.

ಇನಿಂಗ್ಸ್‌ ಆರಂಭಿಸಿದ ನಾಯಕ ರೋಹಿತ್‌ ಶರ್ಮಾ (53) ಹಾಗೂ ಶುಭಮನ್ ಗಿಲ್‌ (19) ಮೊದಲ ವಿಕೆಟ್‌ಗೆ ಕೇವಲ 11.1 ಓವರ್‌ಗಳಲ್ಲಿ 80 ರನ್‌ ಗಳಿಸಿ ಭದ್ರ ಅಡಿಪಾಯ ಹಾಕಿಕೊಟ್ಟರು. ಹೀಗಾಗಿ ಭಾರತ ತಂಡ ಶಿಖರವೇರುವ ಲೆಕ್ಕಾಚಾರದಲ್ಲಿತ್ತು. ಅದಕ್ಕೆ ಲಂಕನ್ನರು ಅವಕಾಶ ನೀಡಲಿಲ್ಲ.

ಕುಸಿದ ಭಾರತ
ಆತಿಥೇಯ ತಂಡದ ಸ್ಪಿನ್ನರ್‌ಗಳ ಎದುರು ಟೀಂ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪಡೆ ಮಂಕಾಯಿತು.

ತಂಡದ ಮೊತ್ತ 80 ರನ್‌ ಆಗಿದ್ದಾಗ ಗಿಲ್‌ ಔಟಾದರು. ಬಳಿಕ ಬಂದ ವಿರಾಟ್‌ ಕೊಹ್ಲಿ ಆಟ ಕೇವಲ 3 ರನ್‌ಗಳಿಗೆ ಕೊನೆಗೊಂಡಿತು. ಮಳೆಯಿಂದಾಗಿ ಪಾಕಿಸ್ತಾನ ವಿರುದ್ಧ ಎರಡು ದಿನ (ಭಾನುವಾರ, ಸೋಮವಾರ) ನಡೆದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು ನಿರಾಸೆ ಮೂಡಿಸಿದರು. ಇವರಿಬ್ಬರ ವಿಕೆಟ್ ಪತನದ ಬೆನ್ನಲ್ಲೇ ರೋಹಿತ್ ಶರ್ಮಾ ಸಹ ಔಟಾದರು. ಈ ಮೂವರಿಗೂ ದುನಿತ್‌ ವೆಲ್ಲಲಗೆ ಪೆವಿಲಿಯನ್ ದಾರಿ ತೋರಿದರು.

ನಾಲ್ಕನೇ ವಿಕೆಟ್ ಪಾಲುದಾರಿಕೆಯಲ್ಲಿ ಅರ್ಧಶತಕದ ಜೊತೆಯಾಟವಾಡಿದ ಇಶಾನ್‌ ಕಿಶನ್‌ ಮತ್ತು ಕೆ.ಎಲ್‌.ರಾಹುಲ್‌ ಜೋಡಿಯನ್ನು ಬೇರ್ಪಡಿಸುವ ಮೂಲಕ ವೆಲ್ಲಲಗೆ ಮತ್ತೆ ಪೆಟ್ಟು ಕೊಟ್ಟರು. 39 ರನ್‌ ಗಳಿಸಿದ್ದ ರಾಹುಲ್‌, ವೆಲ್ಲಲಗೆ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚ್‌ ನೀಡಿ ಕ್ರೀಸ್‌ ತೊರೆದರು.

ರಕ್ಷಣಾತ್ಮಕವಾಗಿ ಆಡುತ್ತಿದ್ದ ಕಿಶನ್‌ (33), ರವೀಂದ್ರ ಜಡೇಜ (4) ಜಸ್‌ಪ್ರೀತ್‌ ಬೂಮ್ರಾ (5) ಹಾಗೂ ಕುಲದೀಪ್ ಯಾದವ್ (0) ಚರಿತ ಅಸಲಂಕಗೆ ವಿಕೆಟ್‌ ಒಪ್ಪಿಸಿದರು.

ಅಕ್ಷರ್ ಪಟೇಲ್‌ ಮತ್ತು ಮೊಹಮದ್ ಸಿರಾಜ್‌ ಹತ್ತನೇ ವಿಕೆಟ್‌ ಪಾಲುದಾರಿಕೆಯಲ್ಲಿ 27 ರನ್ ಸೇರಿಸಿದರು. ಹೀಗಾಗಿ ಭಾರತ ತಂಡ 49.1 ಓವರ್‌ಗಳಲ್ಲಿ 213 ರನ್‌ ಗಳಿಸಿ ಸರ್ವಪತನ ಕಂಡಿತು.

ಭಾರತ ತಂಡದ ಎಲ್ಲ ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಪಡೆದುಕೊಂಡರು. ವೆಲ್ಲಲಗೆ 10 ಓವರ್‌ಗಳಲ್ಲಿ 40 ರನ್‌ ನೀಡಿ 5 ವಿಕೆಟ್‌ ಕಿತ್ತರು. ಅವರಿಗೆ ಸಾಥ್‌ ನೀಡಿದ ಅಸಲಂಕ, 9 ಓವರ್‌ಗಳಲ್ಲಿ ಕೇವಲ 18ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದರು. ಇನ್ನೊಂದು ವಿಕೆಟ್ ಮಹೀಶ ತೀಕ್ಷಣ ಪಾಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.