ADVERTISEMENT

IND vs SL: ಭಾರತ 303/9 ಡಿಕ್ಲೇರ್; ಲಂಕಾ ಗೆಲುವಿಗೆ 447 ರನ್ ಗುರಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 16:14 IST
Last Updated 13 ಮಾರ್ಚ್ 2022, 16:14 IST
ಶ್ರೇಯಸ್ ಅಯ್ಯರ್
ಶ್ರೇಯಸ್ ಅಯ್ಯರ್    

ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡವು ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 303 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.

ಈ ಮೂಲಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಲಂಕಾ ಗೆಲುವಿಗೆ 447 ರನ್‌ಗಳ ಸವಾಲಿನ ಗುರಿ ಒಡ್ಡಿದೆ.

ಬಳಿಕ ಉತ್ತರ ನೀಡಲಾರಂಭಿಸಿರುವ ಶ್ರೀಲಂಕಾ ಎರಡನೇ ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದ್ದು, ಸಂಕಷ್ಟದಲ್ಲಿದೆ. ಲಹಿರು ತಿರಿಮಣ್ಣೆ (0) ಅವರನ್ನು ಜಸ್‌ಪ್ರೀತ್ ಬೂಮ್ರಾ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸಿದರು.

ADVERTISEMENT

ಕ್ರೀಸಿನಲ್ಲಿರುವ ನಾಯಕ ದಿಮುತ್ ಕರುಣಾರತ್ನೆ (10*) ಹಾಗೂ ಕುಶಾಲ್ ಮೆಂಡಿಸ್ (16*) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಲಂಕಾ ಗೆಲುವಿಗೆ ಇನ್ನೂ 419 ರನ್ ಗಳಿಸಬೇಕಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ (50) ಹಾಗೂ ಶ್ರೇಯಸ್ ಅಯ್ಯರ್ (67) ಆಕರ್ಷಕ ಅರ್ಧಶತಕಗಳನ್ನು ಬಾರಿಸುವ ಮೂಲಕ ತಂಡಕ್ಕೆ ನೆರವಾದರು.

ಮಾಜಿ ನಾಯಕ ಕಪಿಲ್ ದೇವ್ ದಾಖಲೆ ಮುರಿದ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗದ ಅರ್ಧಶತಕ ಗಳಿಸಿದರು. ಇನ್ನೊಂದೆಡೆ ಅಯ್ಯರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಗಳ ಸಾಧನೆ ಮಾಡಿದ್ದಾರೆ.

ನಾಯಕ ರೋಹಿತ್ ಶರ್ಮಾ (46) ಹಾಗೂ ಹನುಮ ವಿಹಾರಿ (35) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಆದರೆ ವಿರಾಟ್ ಕೊಹ್ಲಿ ( 13) ಮಗದೊಮ್ಮೆ ನಿರಾಸೆ ಅನುಭವಿಸಿದರು. ಸ್ಥಳೀಯ ಹೀರೊ ಮಯಂಕ್ ಅಗರವಾಲ್ (22) ಅವರಿಗೂ ಮಿಂಚಲು ಸಾಧ್ಯವಾಗಲಿಲ್ಲ.

ಇನ್ನುಳಿದಂತೆ ಮೊಹಮ್ಮದ್ ಶಮಿ (16*), ರವಿಚಂದ್ರನ್ ಅಶ್ವಿನ್ (13) ಹಾಗೂ ಅಕ್ಷರ್ ಪಟೇಲ್ (9) ರನ್ ಗಳಿಸಿದರು.

ಲಂಕಾ ಪರ ಪ್ರವೀಣ್ ಜಯವಿಕ್ರಮ ನಾಲ್ಕು ಹಾಗೂ ಲಸಿತ್ ಎಂಬುಲದೆನಿಯಾ ಮೂರು ವಿಕೆಟ್ ಕಬಳಿಸಿದರು.

ಈ ಮೊದಲು ಜಸ್‌ಪ್ರೀತ್ ಬೂಮ್ರಾ ದಾಳಿಗೆ (24ಕ್ಕೆ 5 ವಿಕೆಟ್) ಸಿಲುಕಿದ ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್ನಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ಮುನ್ನಡೆ ಗಳಿಸಿತು.

ಮೊದಲ ದಿನದಾಟದಲ್ಲಿ ಶ್ರೇಯಸ್ ಅಯ್ಯರ್ ಅರ್ಧಶತಕದ(92) ನೆರವಿನಿಂದ ಭಾರತ ತಂಡವು 252 ರನ್ ಪೇರಿಸಲು ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.