ADVERTISEMENT

ಗೆಲ್ಲೋ ಪಂದ್ಯದಲ್ಲಿ ಸೋಲು, ಮೈದಾನದಲ್ಲೇ ಲಂಕಾ ನಾಯಕನ ವಿರುದ್ಧ ಕೋಚ್ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜುಲೈ 2021, 6:25 IST
Last Updated 22 ಜುಲೈ 2021, 6:25 IST
ದಸುನ್ ಶನಕ
ದಸುನ್ ಶನಕ   

ಕೊಲಂಬೊ: ಭಾರತ ವಿರುದ್ಧ ಕೊಲಂಬೊದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಗೆಲುವಿನ ಹಂತದಲ್ಲಿ ಎಡವಿ ಬಿದ್ದಿರುವ ಶ್ರೀಲಂಕಾ ಸೋಲಿನ ಆಘಾತಕ್ಕೊಳಗಾಗಿದೆ.

ಇದರಿಂದ ತೀವ್ರ ಆಕ್ರೋಶಗೊಂಡಿರುವ ಕೋಚ್ ಮಿಕಿ ಅರ್ಥರ್, ಮೈದಾನದಲ್ಲೇ ನಾಯಕ ದಸುನ್ ಶನಕ ವಿರುದ್ಧ ಗರಂ ಆಗಿರುವ ವಿಡಿಯೊ ವೈರಲ್ ಆಗಿದೆ.

276 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ಒಂದು ಹಂತದಲ್ಲಿ 18 ಓವರ್‌ಗಳಲ್ಲೇ 116 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಬಳಿಕ 35.1 ಓವರ್‌ಗಳಲ್ಲಿ 193ಕ್ಕೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಚಾಹರ್ ಹಾಗೂ ಭುವನೇಶ್ವರ್ ಕುಮಾರ್ ಮುರಿಯದ ಎಂಟನೇ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿ ಭಾರತಕ್ಕೆಸ್ಮರಣೀಯ ಗೆಲುವು ಒದಗಿಸಿಕೊಟ್ಟಿದ್ದರು.

ರೋಚಕ ಹಂತದಲ್ಲಿ ಪಂದ್ಯವು ಲಂಕಾ ಕೈಯಿಂದ ಜಾರುತ್ತಿದೆ ಎಂಬುದನ್ನು ತಿಳಿದಾಗಲೇ ಡ್ರೆಸ್ಸಿಂಗ್ ಕೊಠಡಿಯಲ್ಲಿ ಹತಾಶರಾಗಿ ಕಂಡುಬಂದ ಕೋಚ್ ಅರ್ಥರ್, ಪಂದ್ಯ ಮುಗಿದ ಬೆನ್ನಲ್ಲೇ ಮೈದಾನಕ್ಕಿಳಿದು ನಾಯಕನ ಜೊತೆಗೆ ವಾಗ್ವಾದಕ್ಕಿಳಿದರು.

ನಾಯಕನ ರಣನೀತಿಯ ಬಗ್ಗೆ ಅಸಮಾಧಾನ ಹೊರಹಾಕುತ್ತಿರುವುದು ದೃಶ್ಯದಲ್ಲಿ ಬಯಲಾಗಿದೆ. ಈ ಸಂದರ್ಭದಲ್ಲಿ ನಾಯಕ ಶನಕ ತಮ್ಮ ಯೋಜನೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಬಿಸಿ ಬಿಸಿ ವಾತವಾರಣಕ್ಕೆ ಕಾರಣವಾಯಿತು.

ಮೈದಾನದಲ್ಲಿ ಕೋಚ್ ಹಾಗೂ ನಾಯಕನ ನಡುವಣ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಲಂಕಾದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ರಸೆಲ್ ಅರ್ನಾಲ್ಡ್, ಈ ಘಟನೆ ಮೈದಾನದಲ್ಲಿ ಸಂಭವಿಸಬಾರದಿತ್ತು. ಏನೇ ಇದ್ದರೂ ಡ್ರೆಸ್ಸಿಂಗ್ ಕೊಠಡಿಯಲ್ಲಿ ಚರ್ಚಿಸಬೇಕು ಎಂದಿದ್ದಾರೆ.

ಚೊಚ್ಚಲ ಅರ್ಧಶತಕ ಬಾರಿಸುವ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ದೀಪಕ್ ಚಾಹರ್ 69 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಈ ಮೂಲಕ ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆಯೇ ಟೀಮ್ ಇಂಡಿಯಾ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.