ADVERTISEMENT

IND vs ZIM 1st ODI: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

ಕ್ರಿಕೆಟ್‌: ಚಾಹರ್‌ ಭರ್ಜರಿ ಪುನರಾಗಮನ, ಧವನ್‌– ಗಿಲ್‌ ‘ಜುಗಲ್‌ಬಂದಿ’

ಪಿಟಿಐ
Published 18 ಆಗಸ್ಟ್ 2022, 14:51 IST
Last Updated 18 ಆಗಸ್ಟ್ 2022, 14:51 IST
ಜಿಂಬಾಬ್ವೆಯ ಇನೊಸೆಂಟ್ ಕೈಯಾ ವಿರುದ್ಧ ಔಟ್‌ಗೆ ಮನವಿ ಮಾಡಿದ ದೀಪಕ್‌ ಚಾಹರ್ –ಎಎಫ್‌ಪಿ ಚಿತ್ರ
ಜಿಂಬಾಬ್ವೆಯ ಇನೊಸೆಂಟ್ ಕೈಯಾ ವಿರುದ್ಧ ಔಟ್‌ಗೆ ಮನವಿ ಮಾಡಿದ ದೀಪಕ್‌ ಚಾಹರ್ –ಎಎಫ್‌ಪಿ ಚಿತ್ರ   

ಹರಾರೆ: ವೇಗಿ ದೀಪಕ್ಚಾಹರ್‌ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ತಮ್ಮ ಪುನರಾಗಮನವನ್ನು ಭರ್ಜರಿಯಾಗಿಯೇ ಆಚರಿಸಿಕೊಂಡರೆ, ಶಿಖರ್‌ ಧವನ್‌– ಶುಭಮನ್ ಗಿಲ್‌ ಜೋಡಿಯ ಬ್ಯಾಟಿಂಗ್‌ ಮೋಡಿ ಮಾಡಿತು.

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ ಕ್ರೀಡಾಂಗಣದಲ್ಲಿ ಗುರುವಾರ ಆಟದ ಎಲ್ಲ ವಿಭಾಗಗಳಲ್ಲೂ ಪ್ರಭುತ್ವ ಮೆರೆದ ಭಾರತ ತಂಡ, ಮೊದಲ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಮಣಿಸಿತು.

ಗಾಯದ ಕಾರಣ ಆರು ತಿಂಗಳಿಗೂ ಅಧಿಕ ಸಮಯ ತಂಡದಿಂದ ದೂರವುಳಿದಿದ್ದ ಚಾಹರ್‌ (27ಕ್ಕೆ3), ಶಿಸ್ತಿನ ದಾಳಿ ನಡೆಸಿ ಜಿಂಬಾಬ್ವೆ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ಆತಿಥೇಯ ತಂಡವನ್ನು 40.3 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್‌ ಮಾಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ADVERTISEMENT

ಬಲಿಷ್ಠ ಬ್ಯಾಟಿಂಗ್‌ ಕ್ರಮಾಂಕ ಹೊಂದಿರುವ ಭಾರತಕ್ಕೆ ಈ ಗುರಿ ಸವಾಲಾಗಿ ಪರಿಣಮಿಸಲೇ ಇಲ್ಲ. ಧವನ್‌ (ಔಟಾಗದೆ 81) ಮತ್ತು ಗಿಲ್‌ (ಔಟಾಗದೆ 82) ವಿಕೆಟ್‌ ನಷ್ಟವಿಲ್ಲದೆ ಕೇವಲ 30.5 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ವೆಸ್ಟ್‌ ಇಂಡೀಸ್‌ ವಿರುದ್ದದ ಸರಣಿಯಲ್ಲೂ ಭಾರತಕ್ಕೆ ಉತ್ತಮ ಆರಂಭ ನೀಡಿದ್ದ ಧವನ್‌ ಮತ್ತು ಗಿಲ್‌ ಕಳೆದ ನಾಲ್ಕು ಪಂದ್ಯಗಳಲ್ಲಿ ತಮ್ಮ ಮೂರನೇ ಅರ್ಧಶತಕ ಗಳಿಸಿದರು. ಮೂರನೇ ಬಾರಿ ಶತಕದ ಜತೆಯಾಟ ನೀಡಿದರು.

ಧವನ್‌ ಎಚ್ಚರಿಕೆಯ ಆಟವಾಡಿದರೆ, ಗಿಲ್ ಆಕ್ರಮಣಕಾರಿ ಬ್ಯಾಟಿಂಗ್‌ ಮೂಲಕ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಎಡಗೈ ಬ್ಯಾಟರ್‌ ಧವನ್‌ 113 ಎಸೆತಗಳನ್ನು ಎದುರಿಸಿ 9 ಬೌಂಡರಿ ಹೊಡೆದರು.

72 ಎಸೆತಗಳನ್ನು ಎದುರಿಸಿದ ಗಿಲ್‌ 10 ಬೌಂಡರಿ ಮತ್ತು ವೆಸ್ಲಿ ಮೆಡೆವೆರೆ ಎಸೆತದಲ್ಲಿ ಒಂದು ಸಿಕ್ಸರ್‌ ಸಿಡಿಸಿದರು. ಮೊದಲ 30 ಎಸೆತಗಳವರೆಗೆ ಎಚ್ಚರಿಕೆಯ ಆಟವಾಡಿದ ಅವರು ಪರಿಸ್ಥಿತಿಗೆ ಹೊಂದಿಕೊಂಡ ಬಳಿಕ ಲೀಲಾಜಾಲವಾಗಿ ಬ್ಯಾಟ್‌ ಬೀಸಿದರು.

ಜಿಂಬಾಬ್ವೆ ನಾಯಕ ರೆಗಿಸ್‌ ಚಕಾಬ್ವಾ ಈ ಜತೆಯಾಟ ಮುರಿಯುವ ನಿಟ್ಟಿನಲ್ಲಿ ಎಂಟು ಮಂದಿಯ ಕೈಗೆ ಚೆಂಡು ನೀಡಿದರಾದರೂ, ಯಶಸ್ಸು ಸಿಗಲಿಲ್ಲ.

ಆರಂಭಿಕ ಆಘಾತ: ಟಾಸ್‌ ಗೆದ್ದ ನಾಯಕ ಕೆ.ಎಲ್‌.ರಾಹುಲ್‌, ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಬೆಳಗ್ಗಿನ ಮೋಡ ಕವಿದ ವಾತಾವರಣವು ಸ್ವಿಂಗ್‌ ಬೌಲಿಂಗ್‌ಗೆ ನೆರವು ನೀಡುತ್ತಿತ್ತು.

ಭಾರತದ ಆರಂಭಿಕ ಬೌಲಿಂಗ್‌ ಜೋಡಿ ಚಾಹರ್‌ ಮತ್ತು ಮೊಹಮ್ಮದ್‌ ಸಿರಾಜ್‌ (36ಕ್ಕೆ 1) ಪರಿಸ್ಥಿತಿಯ ಪೂರ್ಣ ಲಾಭ ಪಡೆದರು. ಆ ಬಳಿಕ ಪ್ರಸಿದ್ಧ ಕೃಷ್ಣ (50ಕ್ಕೆ 3) ಹಾಗೂ ಅಕ್ಷರ್‌ ಪಟೇಲ್ (24ಕ್ಕೆ 3) ಕೈಚಳಕ ಮೆರೆದರು.

ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು ಚಾಹರ್‌ಗೆ ವಿಕೆಟ್ ಒಪ್ಪಿಸಿದರೆ, ಅನುಭವಿಗಳಾದ ಸೀನ್‌ ವಿಲಿಯಮ್ಸ್‌ ಮತ್ತು ಸಿಕಂದರ್‌ ರಝಾ ಅವರನ್ನು ಕ್ರಮವಾಗಿ ಸಿರಾಜ್‌ ಮತ್ತು ಪ್ರಸಿದ್ಧ ಕೃಷ್ಣ ಪೆವಿಲಿಯನ್‌ಗೆ ಅಟ್ಟಿದರು. 66 ರನ್‌ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳು ಬಿದ್ದವು.

ರೆಗಿಸ್‌ ಚಕಾಬ್ವಾ (35 ರನ್‌, 51 ಎ) ಮಧ್ಯಮ ಕ್ರಮಾಂಕದಲ್ಲಿ ಮರುಹೋರಾಟ ನಡೆಸಲು ಪ್ರಯತ್ನಿಸಿದರೂ, ಇತರರಿಂದ ತಕ್ಕ ಸಾಥ್‌ ಸಿಗಲಿಲ್ಲ. 110 ರನ್‌ಗಳಿಗೆ ಎಂಟು ವಿಕೆಟ್‌ ಕಳೆದುಕೊಂಡ ಜಿಂಬಾಬ್ವೆ, ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತು.

ಆದರೆ ಬ್ರಾಡ್ ಇವಾನ್ಸ್‌ (33) ಮತ್ತು ರಿಚರ್ಡ್ ಎನ್‌ಗರ್ವಾ (34) ಅವರು ಒಂಬತ್ತನೇ ವಿಕೆಟ್‌ಗೆ ದಾಖಲೆಯ 70 ರನ್‌ ಸೇರಿಸಿದ್ದರಿಂದ ತಂಡದ ಮೊತ್ತ 200ರ ಗಡಿ ಸಮೀಪ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.