ADVERTISEMENT

ಟಿ–20 ರ‍್ಯಾಂಕಿಂಗ್‌: ಎರಡನೇ ಸ್ಥಾನ ಉಳಿಸಿಕೊಂಡ ಭಾರತ

ಪಿಟಿಐ
Published 3 ಮೇ 2021, 12:05 IST
Last Updated 3 ಮೇ 2021, 12:05 IST
ಭಾರತ ಕ್ರಿಕೆಟ್ ತಂಡದ ಆಟಗಾರರು– ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡದ ಆಟಗಾರರು– ಪಿಟಿಐ ಚಿತ್ರ   

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ಭಾರತ ತಂಡವು ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಸೋಮವಾರ ವಾರ್ಷಿಕ ಕ್ರಮಾಂಕಗಳನ್ನು ಪ್ರಕಟಿಸಲಾಗಿದ್ದು, ಏಕದಿನ ಮಾದರಿಯಲ್ಲಿ ಕೊಹ್ಲಿ ಬಳಗವು ಮೂರನೇ ಸ್ಥಾನಕ್ಕೆ ಕುಸಿದಿದೆ.

ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್‌ಗಿಂತ (277) ಭಾರತ ಐದು ರೇಟಿಂಗ್ ಪಾಯಿಂಟ್ಸ್‌ ಹಿಂದೆ ಇದೆ. ನ್ಯೂಜಿಲೆಂಡ್‌ ತಂಡವು ಪ್ರಗತಿ ಸಾಧಿಸಿದ್ದು, ಐದನೇ ಸ್ಥಾನದಿಂದ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದೆ. ವೆಸ್ಟ್ ಇಂಡೀಸ್‌, ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ ತಂಡಗಳ ಎದುರಿನ ಸರಣಿ ವಿಜಯಗಳು ಕಿವೀಸ್ ತಂಡದ ಪಾಯಿಂಟ್ಸ್ ಏರಿಕೆಗೆ ಕಾರಣವಾಗಿದೆ. ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಐದಕ್ಕೆ ಜಾರಿದೆ.

ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಒಂದು ಸ್ಥಾನ ಬಡ್ತಿ ಪಡೆದಿದ್ದು, ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿವೆ. ವೆಸ್ಟ್ ಇಂಡೀಸ್ 10ನೇ ಸ್ಥಾನಕ್ಕೆ ಕುಸಿದಿದೆ.

ADVERTISEMENT

ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತ ಒಂದು ಸ್ಥಾನ ಕುಸಿತ ಕಂಡಿದ್ದು, ಮೂರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಮವಾಗಿ ಮೊದಲ ಮತ್ತು ಎರಡನೇ ಕ್ರಮಾಂಕದಲ್ಲಿವೆ. ಕಿವೀಸ್ ತಂಡವು ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ ಸದ್ಯ ನಾಲ್ಕನೇ ಸ್ಥಾನದಲ್ಲಿದೆ.

ಕಳೆದ 12 ತಿಂಗಳುಗಳಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ಹಾಗೂ ಭಾರತದ ಎದುರು 1–2ರಿಂದ ಸರಣಿಗಳನ್ನು ಸೋತಿತ್ತು. ಐರ್ಲೆಂಡ್‌ ವಿರುದ್ಧದ ಒಂದು ಏಕದಿನ ಪಂದ್ಯದಲ್ಲೂ ನಿರಾಸೆ ಅನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.