ADVERTISEMENT

Omicron ಆತಂಕದ ನಡುವೆ ಭಾರತ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ಟೆಸ್ಟ್

ಭಾರತ ’ಎ‘ ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ‘ಅನಧಿಕೃತ’ ಪಂದ್ಯ ಇಂದಿನಿಂದ

ಪಿಟಿಐ
Published 29 ನವೆಂಬರ್ 2021, 15:51 IST
Last Updated 29 ನವೆಂಬರ್ 2021, 15:51 IST
ಪ್ರಿಯಾಂಕ್ ಪಾಂಚಾಲ್
ಪ್ರಿಯಾಂಕ್ ಪಾಂಚಾಲ್   

ಬ್ಲೂಮ್‌ಫೌಂಟೇನ್: ಕೊರೊನಾ ವೈರಸ್‌ನ ಹೊಸ ತಳಿ ಪತ್ತೆಯಾಗಿರುವುದರ ಆತಂಕದ ನಡುವೆಯೇ ಭಾರತ ಮತ್ತು ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಪಂದ್ಯ ಮಂಗಳವಾರದಿಂದ ನಡೆಯಲಿದೆ.

ನಾಲ್ಕು ದಿನಗಳ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಓಮೈಕ್ರಾನ್‌ ತಂದಿರುವ ಆತಂಕದಿಂದಾಗಿ ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು.

ಭಾರತ ‘ಎ’ ತಂಡದ ಆಟಗಾರರು ಬಯೊಬಬಲ್‌ನಲ್ಲಿದ್ದು ಪಂದ್ಯಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡದೇ ಇರಲು ನಿರ್ಧರಿಸಲಾಗಿದೆ. ಇದೆಲ್ಲದರ ನಡುವೆ ಉತ್ತಮ ಆಟವಾಡುವತ್ತ ಗಮನ ನೀಡಲು ಭಾರತ ‘ಎ’ ತಂಡ ಮುಂದಾಗಬೇಕಿದೆ.

ADVERTISEMENT

ಮೊದಲ ಪಂದ್ಯದಲ್ಲಿ ಭಾರತದ ಯುವ ಆಟಗಾರರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಅಭಿಮನ್ಯು ಈಶ್ವರನ್ ಅವರು ಅಮೋಘ ಶತಕ ಸಿಡಿಸಿದ್ದರು. ನಾಯಕ ಪ್ರಿಯಾಂಕ್ ಪಾಂಚಾಲ್ 96 ರನ್ ಗಳಿಸಿ 4 ವಿಕೆಟ್‌ಗಳಿಗೆ 308 ರನ್ ಗಳಿಸಲು ನೆರವಾಗಿದ್ದರು. ಆರಂಭಿಕ ಬ್ಯಾಟರ್ ಪೃಥ್ವಿ ಶಾ 48 ರನ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ‘ಎ’ ತಂಡ ಮೊದಲ ಇನಿಂಗ್ಸ್‌ನಲ್ಲಿ 509 ರನ್ ಗಳಿಸಿತ್ತು.

ನವದೀಪ್ ಸೈನಿ, ಅರ್ಜಾನ್ ನಾಗಸ್ವಲ ಮತ್ತು ಉಮ್ರನ್ ಮಲಿಕ್ ಬೌಲಿಂಗ್‌ನಲ್ಲಿ ಮಿಂಚಿದ್ದರು. ಆದರೆ ರಾಹುಲ್ ಚಾಹರ್‌, ಕೆ.ಗೌತಮ್ ಮತ್ತು ಬಾಬಾ ಅಪರಾಜಿತ್ ಇನ್ನಷ್ಟು ಉತ್ತಮ ಸಾಮರ್ಥ್ಯ ತೋರಬೇಕಾಗಿದೆ. ಪೀಟರ್ ಮಲಾನ್ ಮತ್ತು ಟೋನಿ ಡಿ ಜೊರ್ಜಿ ಅವರನ್ನು ಒಳಗೊಂಡ ದಕ್ಷಿಣ ಆಫ್ರಿಕಾ ‘ಎ’ ತಂಡದ ಬ್ಯಾಟಿಂಗ್ ಬಳಗ ಬಲಿಷ್ಠವಾಗಿದೆ. ಜೆ.ಸ್ಮಿತ್, ಸಿನೆತೆಂಬಾ ಮತ್ತು ಜಾರ್ಜ್ ಲಿಂಡೆ ಅವರನ್ನು ನಿಯಂತ್ರಿಸುವುದಕ್ಕೂ ಭಾರತದ ಬೌಲರ್‌ಗಳು ರಣತಂತ್ರ ಹೂಡಬೇಕಾಗಿದೆ.

ತಂಡಗಳು: ಭಾರತ ‘ಎ’: ಪ್ರಿಯಾಂಕ್ ಪಾಂಚಾಲ್ (ನಾಯಕ), ಪೃಥ್ವಿ ಶಾ, ಹನುಮ ವಿಹಾರಿ, ಅರ್ಜಾನ್ ನಾಗಸ್ವಲ, ದೇವದತ್ತ ಪಡಿಕ್ಕಲ್‌, ಸರ್ಫರಾಜ್ ಖಾನ್, ಅಭಿಮನ್ಯು ಈಶ್ವರನ್, ನವದೀಪ್ ಸೈನಿ, ಕೆ.ಗೌತಮ್‌, ಬಾಬಾ ಅಪರಾಜಿತ್‌, ರಾಹುಲ್ ಚಾಹರ್‌, ಇಶಾನ್ ಪೊರೆಲ್‌, ಸೌರಭ್ ಕುಮಾರ್‌, ಉಮ್ರಾನ್ ಮಲಿಕ್‌, ಉಪೇಂದ್ರ ಯಾದವ್‌.

ದಕ್ಷಿಣ ಆಫ್ರಿಕಾ ‘ಎ’: ಪೀಟರ್ ಮಲಾನ್‌ (ನಾಯಕ), ಡೊಮಿನಿಕ್ ಹೆನ್ರಿಕ್ಸ್‌, ರೇನಾರ್ಡ್‌ ವ್ಯಾನ್‌ ತೊಂಡರ್‌, ಜೇಸನ್‌ ಸ್ಮಿತ್‌, ಟೋನಿ ಡಿ ಜೊರ್ಜಿ, ಸರೆನ್ ಎರ್ವಿ, ಸೆನುರಾನ್ ಮುತುಸಾಮಿ, ಜಾರ್ಜ್ ಲಿಂಡೆ, ಮಾರ್ಕೊ ಜಾನ್ಸೆನ್‌, ಮಿಗೇಲ್ ಪ್ರಿಟೋರಿಯಸ್‌, ಸಿನೆತೆಂಬಾ ಕ್ವೆಶಿಲೆ, ಬ್ಯೂರನ್ ಹೆನ್ರಿಕ್ಸ್‌, ಲುಥೊ ಸಿಪಾಮ್ಲ, ಗ್ಲೆಂಟನ್ ಸ್ಟೂರ್‌ಮನ್‌.

ಆರಂಭ: ಮಧ್ಯಾಹ್ನ 1.30 (ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.