ADVERTISEMENT

ಯಷ್ಟಿಕಾ ಅರ್ಧಶತಕ, ರಾಧಾ ಮೋಡಿ: ಆಸೀಸ್ ವಿರುದ್ಧ ಭಾರತ ಎ ತಂಡಕ್ಕೆ ಜಯ

ಮಹಿಳಾ ಕ್ರಿಕೆಟ್: ಸರಣಿಯಲ್ಲಿ 1–0 ಮುನ್ನಡೆ

ಪಿಟಿಐ
Published 13 ಆಗಸ್ಟ್ 2025, 13:40 IST
Last Updated 13 ಆಗಸ್ಟ್ 2025, 13:40 IST
ಭಾರತ ಎ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಯಷ್ಟಿಕಾ ಭಾಟಿಯಾ  –ಎಎಫ್‌ಪಿ ಚಿತ್ರ
ಭಾರತ ಎ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಯಷ್ಟಿಕಾ ಭಾಟಿಯಾ  –ಎಎಫ್‌ಪಿ ಚಿತ್ರ   

ಬ್ರಿಸ್ಬೇನ್: ಅರ್ಧಶತಕ ಗಳಿಸಿದ ಯಷ್ಟಿಕಾ ಭಾಟಿಯಾ ಮತ್ತು ನಾಯಕಿ ರಾಧಾಯಾದವ್ ಅವರ ಪರಿಣಾಮಕಾರಿ ದಾಳಿಯ ಬಲದಿಂದ ಭಾರತ ಎ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಗಳಿಸಿತು. 

ಇಯಾನ್ ಹಿಲಿ ಓವಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎ ತಂಡವು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡಿತು. ರಚೆಲ್ ಟ್ರೆನಮ್ಯಾನ್ (51; 62ಎ, 4X6) ಮತ್ತು  ಅನಿಕಾ ಲಿರಾಯ್ಡ್ (ಅಜೇಯ 92; 90ಎ, 4X8, 6X1) ಅವರ ಅಮೋಘ ಬ್ಯಾಟಿಂಗ್ ಬಲದಿಂದ ತಂಡವು 47.5 ಓವರ್‌ಗಳಲ್ಲಿ 214 ರನ್ ಗಳಿಸಿತು. ಭಾರತದ ನಾಯಕಿ, ಸ್ಪಿನ್ನರ್ ರಾಧಾ ಯಾದವ್ (45ಕ್ಕೆ3) ಅವರ ಉತ್ತಮ ಬೌಲಿಂಗ್‌ನಿಂದ ಆತಿಥೆಯ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಏಳು ಬ್ಯಾಟರ್‌ಗಳು ಎರಡಂಕಿ ಕೂಡ ತಲುಪಲಿಲ್ಲ. ಮಧ್ಯಮವೇಗಿ ತಿತಾಸ್ ಸಾಧು ಕೂಡ ಎರಡು ವಿಕೆಟ್ ಪಡೆದರು. 

ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಯಷ್ಟಿಕಾ (59; 70ಎ, 4X7) ಮತ್ತು ಶಫಾಲಿ ವರ್ಮಾ (36;31ಎ, 4X5) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 77 ರನ್ ಸೇರಿಸಿದರು. ಈ ಅಡಿಪಾಯದ ಮೇಲೆ ಧಾರಾ ಗುಜ್ಜರ್ (31; 53ಎ), ರಾಘವಿ ಬಿಷ್ಟ್ (ಔಟಾಗದೇ 25) ಮತ್ತು ರಾಧಾ ಯಾದವ್ (19; 28ಎ) ಅವರು ಗೆಲುವಿನ ಸೌಧ ಕಟ್ಟಿದರು. ಇದರಿಂದಾಗಿ ತಂಡವು 42 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಗೆದ್ದಿತು. 

ADVERTISEMENT

ಸಂಕ್ಷಿಪ್ತ ಸ್ಕೋರು:

ಆಸ್ಟ್ರೇಲಿಯಾ ಎ: 47.5 ಓವರ್‌ಗಳಲ್ಲಿ 214 (ಅನಿಕಾ ಲಿರಾಯ್ಡ್ ಔಟಾಗದೇ 92, ರಚೆಲ್ ಟ್ರೆನ್ಮನ್ 51, ರಾಧಾ ಯಾದವ್ 45ಕ್ಕೆ3, ಮಿನು ಮಣಿ 38ಕ್ಕೆ2)

ಭಾರತ ಎ: 42 ಓವರ್‌ಗಳಲ್ಲಿ 7ಕ್ಕೆ215 (ಯಷ್ಟಿಕಾ ಭಾಟಿಯಾ 59, ಶಫಾಲಿ ವರ್ಮಾ 36, ಧಾರಾ ಗುಜ್ಜರ್ 31, ರಾಘವಿ ಬಿಷ್ಟ್ ಔಟಾಗದೇ 25, ಎಲ್ಲಾ ಹೇವಾರ್ಡ್ 46ಕ್ಕೆ2, ಲೂಸಿ ಹ್ಯಾಮಿಲ್ಟನ್ 36ಕ್ಕೆ2) ಫಲಿತಾಂಶ: ಭಾರತ ಎ ತಂಡಕ್ಕೆ 3 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.