
ಬೆಂಗಳೂರು: ಕೆಳಕ್ರಮಾಂಕದ ಬ್ಯಾಟರ್‌ಗಳಾದ ಮಾನವ್ ಸುತಾರ್ ಮತ್ತು ಅನ್ಷುಲ್ ಕಂಬೋಜ್ ಅವರು ದಕ್ಷಿಣ ಆಫ್ರಿಕಾ ಎ ತಂಡದ ವೇಗಿಗಳ ಬೌನ್ಸರ್ ಭಯವನ್ನು ಮೀರಿನಿಂತರು. ಭಾರತ ಎ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದಲ್ಲಿ ನಡೆದ ‘ಟೆಸ್ಟ್’ ಪಂದ್ಯದ ಕೊನೆಯ ದಿನವಾದ ಭಾನುವಾರ ಮಾನವ್ (ಔಟಾಗದೇ 20) ಮತ್ತು ಅನ್ಷುಲ್ ಕಂಬೋಜ್ (ಔಟಾಗದೇ 37) ಮುರಿಯದ ಎಂಟನೇ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 62 ರನ್‌ಗಳ ಬಲದಿಂದ ಭಾರತ ಎ ತಂಡವು 3 ವಿಕೆಟ್‌ಗಳಿಂದ ಜಯಿಸಿತು. ಪರಿಣತ ಬ್ಯಾಟರ್‌ಗಳು ಅರ್ಧಕ್ಕೆ ಬಿಟ್ಟುಹೋದ ಕೆಲಸವನ್ನು ಇವರಿಬ್ಬರೂ ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾ ಎ ಬೌಲರ್‌ಗಳ ವೇಗ, ಸ್ಪಿನ್ ಮತ್ತು ತಂತ್ರಗಾರಿಕೆಗಳ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತರು.
ಶುಕ್ರವಾರ 275 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ಎ ತಂಡವು ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ಗಳಿಗೆ 119 ರನ್ ಗಳಿಸಿತ್ತು. ಶನಿವಾರ ಮೋಡ ಮುಸುಕಿದ್ದ ವಾತಾವರಣದಲ್ಲಿ ಫ್ಲಡ್‌ಲೈಟ್ ಬೆಳಕಿನಾಟದಲ್ಲಿ ಆತಿಥೇಯರಿಗೆ ಉತ್ತಮ ಆರಂಭವೇ ಸಿಕ್ಕಿತು. ಆದರೆ ಗೆಲುವಿನ ಹತ್ತಿರ ಸಾಗುತ್ತಿದ್ದಂತೆ ಅವಸರಕ್ಕೆ ಬಿದ್ದ ರಿಷಭ್ ಪಂತ್ (90; 113ಎ, 4X11, 6X4), ಅಯುಷ್ ಬಡೋನಿ (34; 47ಎ, 4X4) ಹಾಗೂ ತನುಷ್ ಕೋಟ್ಯಾನ್ (23; 30ಎ, 4X2) ವಿಕೆಟ್ ಚೆಲ್ಲಿದರು. ಮೂವರೂ ಬ್ಯಾಟರ್‌ಗಳು ದಕ್ಷಿಣ ಆಫ್ರಿಕಾ ಎ ತಂಡದ ‘ಶಾರ್ಟ್ ಪಿಚ್ ಎಸೆತಗಳ ತಂತ್ರಗಾರಿಕೆ’ಗೆ ಶರಣಾದರು.
ಟಿಯಾನ್ ವ್ಯಾನ್ ವಿವುರೆನ್ (56ಕ್ಕೆ3) ಮತ್ತು ಲುಥೊ ಸಿಪಾಮ್ಲಾ (37ಕ್ಕೆ1) ಅವರು ಒಂದು ಹಂತದಲ್ಲಿ ಗೆಲುವಿನ ಅವಕಾಶವನ್ನು ತಮ್ಮ ತಂಡದತ್ತ ವಾಲುವಂತೆ ಮಾಡಿದ್ದರು. ವೇಗಿಗಳು ಪ್ರತಿಯೊಂದು ಓವರ್‌ನಲ್ಲಿಯೂ ಇನ್‌ಸ್ವಿಂಗ್, ಕಟರ್ ಮತ್ತು ಕೆಳಮಟ್ಟದ ನೇರ ಎಸೆತಗಳನ್ನು ಹಾಕುವುದರ ಜೊತೆಗೆ ಒಂದೆರಡು ಶಾರ್ಟ್ ಪಿಚ್ ಎಸೆತಗಳನ್ನೂ ಪ್ರಯೋಗಿಸುತ್ತಿದ್ದರು. ಆತಿಥೇಯ ತಂಡವು 215 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು.
ಜಯಕ್ಕಾಗಿ ಇನ್ನೂ 60 ರನ್‌ಗಳು ಅಗತ್ಯವಿದ್ದವು. ಕ್ಲೋಸ್ ಇನ್ ಫೀಲ್ಡಿಂಗ್ ಮೂಲಕ ಪ್ರವಾಸಿ ಬಳಗವು ರಚಿಸಿದ ವ್ಯೂಹವನ್ನು ಮೀರಿ ರನ್ ಗಳಿಸುವುದರ ಜೊತೆಗೆ ವಿಕೆಟ್ ಕೂಡ ಉಳಿಸಿಕೊಳ್ಳುವ ಚಾಣಾಕ್ಷತೆಯನ್ನು ಇಬ್ಬರೂ ಮೆರೆದರು. ಎಡಗೈ ಸ್ಪಿನ್ ಆಲ್‌ರೌಂಡರ್ ಮಾನವ್ ಆರು ಸಿಂಗಲ್, ಒಂದು ಡಬಲ್ ಮತ್ತು ಮೂರು ಬೌಂಡರಿಗಳನ್ನು ಗಳಿಸಿದರು. ವೇಗದ ಬೌಲರ್ ಆಗಿರುವ ಅನ್ಷುಲ್ ಮಾತ್ರ ದಿಟ್ಟತನ ಮೆರೆದರು.
ಅವರು ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸುವ ಮೂಲಕ ಪ್ರವಾಸಿಗರ ಫೀಲ್ಡಿಂಗ್ ಕೋಟೆಯನ್ನು ನುಚ್ಚುನೂರು ಮಾಡಿದರು. ಇಬ್ಬರೂ ಸೇರಿ 86 ಎಸೆತಗಳನ್ನು ಎದುರಿಸಿ ತಮ್ಮ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.
- ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ ಎ: 91.2 ಓವರ್‌ಗಳಲ್ಲಿ 309. ಭಾರತ ಎ: 58 ಓವರ್‌ಗಳಲ್ಲಿ 234. ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 48.1 ಓವರ್‌ಗಳಲ್ಲಿ 199. ಭಾರತ ಎ: 73.1 ಓವರ್‌ಗಳಲ್ಲಿ 7ಕ್ಕೆ277 (ರಿಷಭ್ ಪಂತ್ 90 ಆಯುಷ್ ಬಡೋನಿ 34 ತನುಷ್ ಕೋಟ್ಯಾನ್ 23 ಮಾನವ್ ಸುತಾರ್ ಔಟಾಗದೇ 20 ಅನ್ಷುಲ್ ಕಂಬೋಜ್ ಔಟಾಗದೇ 37 ಟಿಶೆಪೊ ಮೊರೆಕಿ 33ಕ್ಕೆ2 ಟಿಯಾನ್ ವ್ಯಾನ್ ವಿವುರೆನ್ 56ಕ್ಕೆ3) ಫಲಿತಾಂಶ: ಭಾರತ ಎ ತಂಡಕ್ಕೆ 3 ವಿಕೆಟ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ. ಪಂದ್ಯಶ್ರೇಷ್ಠ: ತನುಷ್ ಕೋಟ್ಯಾನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.