ADVERTISEMENT

ಮಿಥಾಲಿ ಬಳಗಕ್ಕೆ ಪಿಂಕ್ ಬಾಲ್ ‘ಟೆಸ್ಟ್‌’: ಆಸ್ಟ್ರೇಲಿಯಾ ಎದುರಾಳಿ

ಭಾರತ ತಂಡಕ್ಕೆ ಚೊಚ್ಚಲ ಹಗಲು ರಾತ್ರಿ ಪಂದ್ಯ; ಯಷ್ಟಿಕಾ, ಮೇಘನಾ ಪದಾರ್ಪಣೆ ಸಾಧ್ಯತೆ

ಪಿಟಿಐ
Published 29 ಸೆಪ್ಟೆಂಬರ್ 2021, 12:24 IST
Last Updated 29 ಸೆಪ್ಟೆಂಬರ್ 2021, 12:24 IST
ಜೂಲನ್ ಗೋಸ್ವಾಮಿ –ಪಿಟಿಐ ಚಿತ್ರ
ಜೂಲನ್ ಗೋಸ್ವಾಮಿ –ಪಿಟಿಐ ಚಿತ್ರ   

ಗೋಲ್ಡ್‌ ಕೋಸ್ಟ್‌, ಆಸ್ಟ್ರೇಲಿಯಾ: ಏಕದಿನ ಸರಣಿಯಲ್ಲಿ ಹೋರಾಟದ ಪ್ರದರ್ಶನ ನೀಡಿ ಭರವಸೆಯಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಈಗ ಟೆಸ್ಟ್ ಕ್ರಿಕೆಟ್‌ಗೆ ಸಿದ್ಧವಾಗಿದೆ. ಮಟ್ರಿಕಾನ್ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರಿನ ಏಕೈಕ ಟೆಸ್ಟ್‌ಗುರುವಾರ ಆರಂಭವಾಗಲಿದ್ದು ಭಾರತ ಈ ಮೂಲಕ ಹೊನಲು ಬೆಳಕಿನ ಪಂದ್ಯಕ್ಕೆ ಪದಾರ್ಪಣೆ ಮಾಡಲಿದೆ.

ಭಾರತ 1–2ರಲ್ಲಿ ಸೋತಿರುವ ಏಕದಿನ ಸರಣಿ ಹಿಂದಿನ ಭಾನುವಾರ ಮುಕ್ತಾಯಗೊಂಡಿತ್ತು. ಸೋಮವಾರ ವಿಶ್ರಾಂತಿ ದಿನವಾಗಿತ್ತು. ಎರಡು ದಿನಗಳ ಅಭ್ಯಾಸದ ನಂತರ ಮಿಥಾಲಿ ರಾಜ್ ಸುದೀರ್ಘ ಮಾದರಿಯ ಹಣಾಹಣಿಯಲ್ಲಿ ಕಣಕ್ಕೆ ಇಳಿಯಲಿದ್ದು ‘ಪಿಂಕ್‌ ಬಾಲ್‌’ಗೆ ತಂಡ ಯಾವ ರೀತಿ ಹೊಂದಿಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.

ಆಸ್ಟ್ರೇಲಿಯಾ ಈ ವರೆಗೆ ಒಂದೇ ಒಂದು ಪಿಂಕ್‌ ಬಾಲ್ ಟೆಸ್ಟ್ ಆಡಿದೆ. ಆ ಪಂದ್ಯ 2017ರ ನವೆಂಬರ್‌ನಲ್ಲಿ ನಡೆದಿತ್ತು. ಆ ತಂಡಕ್ಕೂ ಏಕದಿನ ಸರಣಿಯ ನಂತರ ಅಭ್ಯಾಸಕ್ಕೆ ಹೆಚ್ಚು ಅವಕಾಶ ಸಿಗಲಿಲ್ಲ. ಆದರೆ ಅತ್ಯುತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿರುವ ತಂಡ ಉತ್ತಮ ಸಾಮರ್ಥ್ಯ ತೋರುವ ನಿರೀಕ್ಷೆಯಲ್ಲಿದೆ.

ADVERTISEMENT

ಹರ್ಮನ್‌ಪ್ರೀತ್, ರಚೆಲ್ ಹೇನ್ಸ್‌ ಅಲಭ್ಯ

ಆಸ್ಟ್ರೇಲಿಯಾ ವಿರುದ್ಧ 15 ವರ್ಷಗಳ ನಂತರ ಭಾರತ ಟೆಸ್ಟ್ ಪಂದ್ಯ ಆಡುತ್ತಿದೆ. 2006ರಲ್ಲಿ ಕೊನೆಯ ಪಂದ್ಯ ಆಡಿದಾಗ ತಂಡದಲ್ಲಿದ್ದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಈಗಲೂ ತಂಡದ ಬೆನ್ನೆಲುಬು ಆಗಿದ್ದಾರೆ. ಹೆಬ್ಬೆರಳಿಗೆ ಗಾಯವಾಗಿರುವ ಹರ್ಮನ್‌ಪ್ರೀತ್ ಕೌರ್ ಏಕದಿನ ಪಂದ್ಯಗಳಲ್ಲಿ ಆಡಿರಲಿಲ್ಲ. ಟೆಸ್ಟ್ ಪಂದ್ಯಕ್ಕೂ ಅವರು ಲಭ್ಯ ಇರುವುದಿಲ್ಲ ಎಂದು ನಾಯಕಿ ಮಿಥಾಲಿ ರಾಜ್ ತಿಳಿಸಿದ್ದಾರೆ.

ಬ್ಯಾಟರ್‌ ಯಷ್ಟಿಕಾ ಭಾಟಿಯಾ ಮತ್ತು ಮಧ್ಯಮ ವೇಗಿ ಮೇಘನಾ ಸಿಂಗ್ ಟೆಸ್ಟ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಜೂಲನ್ ಗೋಸ್ವಾಮಿ, ಮೇಘನಾ ಮತ್ತು ಪೂಜಾ ವಸ್ತ್ರಕಾರ್ ಅವರನ್ನು ವೇಗದ ದಾಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ದೀಪ್ತಿ ಶರ್ಮಾ ಮತ್ತು ಸ್ನೇಹ್ ರಾಣಾ ಅವರನ್ನು ಆಲ್‌ರೌಂಡರ್‌ಗಳಾಗಿ ಸೇರಿಸಿಕೊಳ್ಳಲಿದ್ದು ವಿಕೆಟ್ ಕೀಪಿಂಗ್ ಜವಾಬ್ದಾರಿ ತಾನಿಯಾ ಭಾಟಿಯಾ ಅವರಿಗೆ ಸಿಗಲಿದೆ.

ಮಂಡಿರಜ್ಜು ಗಾಯಕ್ಕೆ ಒಳಗಾಗಿರುವ ಉಪನಾಯಕಿ ರಚೆಲ್ ಹೇನ್ಸ್ ಅವರು ಪಂದ್ಯಕ್ಕೆ ಅಲಭ್ಯರಾಗಿರುವುದು ಆಸ್ಟ್ರೇಲಿಯಾ ಪಾಳಯದಲ್ಲಿ ಆತಂಕ ಮೂಡಿಸಿದೆ. ಅವರ ಬದಲಿಗೆ ವೇಗದ ದಾಳಿ ನಡೆಸಬಲ್ಲ ಆಲ್‌ರೌಂಡರ್ ಅಥವಾ ಪೂರ್ಣಪ್ರಮಾಣದ ಬ್ಯಾಟರ್ ಆಡುವ ಸಾಧ್ಯತೆ ಇದೆ ಎಂದು ನಾಯಕಿ ಮೆಗ್ ಲ್ಯಾನಿಂಗ್ ತಿಳಿಸಿದ್ದಾರೆ. ಅನಾಬೆಲ್ ಸೂಥರ್ಲೆಂಡ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

ತಂಡಗಳು: ಭಾರತ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂದಾನ, ಶಫಾಲಿ ವರ್ಮಾ, ಪೂನಮ್ ರಾವತ್‌, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಸ್ನೇಹ್‌ ರಾಣಾ, ಯಷ್ಟಿಕಾ ಭಾಟಿಯಾ, ತಾನಿಯ ಭಾಟಿಯಾ (ವಿಕೆಟ್ ಕೀಪರ್‌), ಶಿಖಾ ಪಾಂಡೆ, ಜೂಲನ್ ಗೋಸ್ವಾಮಿ, ಮೇಘನಾ ಸಿಂಗ್‌, ಪೂಜಾ ವಸ್ತ್ರಕಾರ್‌, ರಾಜೇಶ್ವರಿ ಗಾಯಕವಾಡ್‌, ಪೂನಂ ಯಾದವ್, ರಿಚಾ ಘೋಷ್, ಏಕ್ತಾ ಬಿಷ್ಠ್‌.

ಆಸ್ಟ್ರೇಲಿಯಾ: ಮೆಗ್‌ಲ್ಯಾನಿಂಗ್ (ನಾಯಕಿ), ಡಾರ್ಸಿ ಬ್ರೌನ್‌, ಮೈಟ್ಲಾನ್ ಬ್ರೌನ್‌, ಸ್ಟೆಲ್ಲಾ ಕ್ಯಾಂಬೆಲ್‌, ನಿಕೋಲಾ ಕ್ಯಾರಿ, ಹನಾ ಡಾರ್ಲಿಂಗ್ಟನ್, ಆ್ಯಶ್ಲಿ ಗಾರ್ಡನರ್‌, ಅಲಿಸಾ ಹೀಲಿ, ತಹಲಿಯಾ ಮೆಗ್ರಾ, ಸೋಫಿ ಮೋಲಿನೆಕ್ಸ್‌, ಬೇಥ್‌ ಮೂನಿ, ಎಲಿಸ್ ಪೆರಿ, ಜಾರ್ಜಿಯಾ ರೆಡ್‌ಮೇನಿ, ಮೋಲಿ ಸ್ಟ್ರಾನೊ, ಅನಾಬೆಲ್ ಸೂಥರ್ಲೆಂಡ್‌, ತಾಯ್ಲಾ ವೆಮಿನಿಂಕ್‌, ಜಾರ್ಜಿಯಾ ವರೆಹಮ್.

ಆರಂಭ: ಬೆಳಿಗ್ಗೆ 10.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ಸಿಕ್ಸ್‌, ಸೋನಿ ಟೆನ್‌ 3,4

***

ಭಾರತ ತಂಡಕ್ಕೆ ಇದು ಸವಾಲಿನಿಂದ ಕೂಡಿರುವ ಉತ್ತಮ ಅವಕಾಶ. ಮೂರು–ನಾಲ್ಕು ವರ್ಷಗಳಿಂದ ಭಾರತ ಮಹಿಳಾ ತಂಡ ಟೆಸ್ಟ್‌ನಲ್ಲಿ ಗಮನಾರ್ಹ ಸಾಮರ್ಥ್ಯ ತೋರಲಿಲ್ಲ. ಇಂಥ ಸಂದರ್ಭದಲ್ಲಿ ತೀರಾ ಭಿನ್ನ ಮಾದರಿಯ ಹಗಲು ರಾತ್ರಿ ಪಮದ್ಯ ಆಡುವುದು ಸುಲಭ ಸಾಧ್ಯವಲ್ಲ. ಆಸ್ಟ್ರೇಲಿಯಾ ಮಹಿಳೆಯರಿಗೆ ಟೆಸ್ಟ್‌ನಲ್ಲಿ ಉತ್ತಮ ಅನುಭವ ಇದೆ. ಆದರೂ ಉತ್ತಮ ಪ್ರಯತ್ನ ಮಾಡಿದರೆ ಆ ತಂಡವನ್ನು ಮಣಿಸಬಹುದು.

- ಶಾಂತಾ ರಂಗಸ್ವಾಮಿ ಮಾಜಿ ಆಟಗಾರ್ತಿ, ಬಿಸಿಸಿಐ ಅಪೆಕ್ಸ್ ಸಮಿತಿ ಸದಸ್ಯೆ

***

ಬಲಾಬಲ

ಭಾರತ

ಪಂದ್ಯ 37

ಜಯ 5

ಸೋಲು 6

ಡ್ರಾ 26

***

ಆಸ್ಟ್ರೇಲಿಯಾ

ಪಂದ್ಯ 74

ಜಯ 20

ಸೋಲು 10

ಡ್ರಾ 44

ಮುಖಾಮುಖಿ

ಪಂದ್ಯ 9

ಭಾರತ ಗೆಲುವು 0

ಆಸ್ಟ್ರೇಲಿಯಾ ಜಯ 4

ಡ್ರಾ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.