ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯ ಡ್ರಾ ಆದರೆ ಇಬ್ಬರಿಗೂ ಪ್ರಶಸ್ತಿ

ರಾಯಿಟರ್ಸ್
Published 28 ಮೇ 2021, 12:20 IST
Last Updated 28 ಮೇ 2021, 12:20 IST
ಐಸಿಸಿ
ಐಸಿಸಿ   

ನವದೆಹಲಿ: ಇದೇ ಮೊದಲ ಬಾರಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯ ಡ್ರಾ ಅಥವಾ ಟೈ ಆದರೆ ಎರಡೂ ತಂಡಗಳಿಗೆ ಪ್ರಶಸ್ತಿಯನ್ನು ಹಂಚಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಶುಕ್ರವಾರ ತಿಳಿಸಿದೆ.

2019ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ಟೈ ಆಗಿತ್ತು. ಸೂಪರ್ ಓವರ್‌ ನಂತರವೂ ಫಲಿತಾಂಶ ಹೊರಬರಲಿಲ್ಲ. ಹೀಗಾಗಿ ಬೌಂಡರಿ ಕೌಂಟ್‌ಗೆ (ಬೌಂಡರಿ ಲೆಕ್ಕ ಹಾಕಿ ವಿಜೇತರನ್ನು ನಿರ್ಣಯಿಸುವುದು) ಮೊರೆ ಹೋಗಲಾಗಿತ್ತು. ಇಂಗ್ಲೆಂಡ್‌ಗೆ ಪ್ರಶಸ್ತಿ ಸಂದಿತ್ತು. ಈ ಟೂರ್ನಿಯ ನಂತರ ಬೌಂಡರಿ ಕೌಂಟ್ ನಿಯಮವನ್ನು ಐಸಿಸಿ ಕೈಬಿಟ್ಟಿದೆ.

‘ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಸಂಬಂಧಿಸಿದ ‘ಪ್ಲೇಯಿಂಗ್ ಕಂಡೀಷನ್ಸ್‌’ ನಿರ್ಧರಿಸಲಾಗಿದೆ. ಪಂದ್ಯ ಫಲಿತಾಂಶವಿಲ್ಲದೆ ಮುಗಿದರೆ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುವುದು’ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ADVERTISEMENT

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜೂನ್ 18ರಿಂದ ನಡೆಯಲಿರುವ ಪಂದ್ಯದಲ್ಲಿ ಡ್ಯೂಕ್ ಚೆಂಡು ಬಳಸಲಾಗುವುದು. ಯಾವುದೇ ಕಾರಣದಿಂದ ದಿನದಾಟ ಪೂರ್ತಿ ನಿಂತುಹೋದರೆ ಐದು ದಿನಗಳ ಪೂರ್ತಿ ಆಟ ನಡೆಯುವಂತೆ ಮಾಡುವುದಕ್ಕಾಗಿ ಕಾಯ್ದಿರಿಸಿದ ದಿನವೂ ಇರುತ್ತದೆ. ಆದರೆ ಫಲಿತಾಂಶಕ್ಕಾಗಿ ಹೆಚ್ಚುವರಿ ದಿನವನ್ನು ಬಳಸುವ ಚಿಂತನೆ ಇಲ್ಲ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.