ADVERTISEMENT

ಆಸ್ಟ್ರೇಲಿಯಾ ಏಕದಿನ ಎದುರಿನ ಸರಣಿ: ಭಾರತ ತಂಡಕ್ಕೆ ಶುಭಮನ್ ಗಿಲ್ ನಾಯಕ

ಆಸ್ಟ್ರೇಲಿಯಾ ಎದುರಿನ ಸರಣಿಗೆ ಮರಳಿದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 12:57 IST
Last Updated 4 ಅಕ್ಟೋಬರ್ 2025, 12:57 IST
<div class="paragraphs"><p>ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್&nbsp;</p></div>

ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ 

   

ಅಹಮದಾಬಾದ್: ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಮರಳಿದ್ದಾರೆ. ಆದರೆ ತಂಡದ ನಾಯಕತ್ವವನ್ನು ಶುಭಮನ್ ಗಿಲ್ ಅವರಿಗೆ ನೀಡಲಾಗಿದೆ. ಮುಂಬೈನ ಬ್ಯಾಟರ್ ಶ್ರೇಯಸ್ ಅಯ್ಯರ್ ಉಪನಾಯಕರಾಗಿದ್ದಾರೆ. 

ಭಾರತದ ಕ್ರಿಕೆಟ್ ಕ್ಷೇತ್ರವು ಪರಿವರ್ತನೆಯ ಘಟ್ಟದಲ್ಲಿದ್ದು ಹೊಸ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಅಜಿತ್ ಅಗರ್ಕರ್ ಮುಂದಾಳತ್ವದ ಆಯ್ಕೆ ಸಮಿತಿಯು ಈ ಹೆಜ್ಜೆ ಇಟ್ಟಿದೆ. 

ADVERTISEMENT

ಶನಿವಾರ ನಡೆದ ಸಭೆಯಲ್ಲಿ 15 ಆಟಗಾರರ ತಂಡವನ್ನು ಪ್ರಕಟಿಸಲಾಯಿತು. ಮೂರು ಏಕದಿನ ಪಂದ್ಯಗಳ ಸರಣಿ ಮತ್ತು ಐದು ಟಿ20 ಪಂದ್ಯಗಳ ಸರಣಿಗಳಿಗೆ ತಂಡಗಳನ್ನು ಆಯ್ಕೆ ಮಾಡಲಾಯಿತು. ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಫಿಫ್ಟಿ–50 ಸರಣಿಗೆ ಮರಳಿದ್ದಾರೆ.  

ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರೇ ನಾಯಕತ್ವ ವಹಿಸುವರು. ಈಚೆಗಷ್ಟೇ ಅವರ ನಾಯಕತ್ವದಲ್ಲಿ ತಂಡವು ಏಷ್ಯಾ ಕಪ್ ಜಯಿಸಿತ್ತು. ಗಿಲ್ ಉಪನಾಯಕರಾಗಿದ್ದಾರೆ. ವಿಕೆಟ್‌ಕೀಪರ್ –ಬ್ಯಾಟರ್ ರಿಷಭ್ ಪಂತ್ ಅವರಿನ್ನೂ ಗಾಯದಿಂದ ಪೂರ್ಣ ಚೇತರಿಸಿಕೊಂಡಿಲ್ಲ. ಆದ್ದರಿಂದ ಧ್ರುವ ಜುರೇಲ್ ಅವಕಾಶ ಗಿಟ್ಟಿಸಿದ್ದಾರೆ. ಏಕದಿನ ತಂಡದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರು ಪ್ರಥಮ ವಿಕೆಟ್‌ಕೀಪರ್ ಆಗಿದ್ದಾರೆ.  ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಕೂಡ ಸ್ಥಾನ ಪಡೆದಿದ್ದಾರೆ.

ರೋಹಿತ್ ಮತ್ತು ವಿರಾಟ್ ಅವರು ಈಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೋದ ವರ್ಷ ಟಿ20 ಮಾದರಿಗೂ ನಿವೃತ್ತಿ ಘೋಷಿಸಿದ್ದರು.  

ತಂಡಗಳು ಇಂತಿವೆ

ಏಕದಿನ ಕ್ರಿಕೆಟ್: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧಕೃಷ್ಣ, ಧ್ರುವ ಜುರೇಲ್ (ವಿಕೆಟ್‌ಕೀಪರ್). 

ಟಿ20 ಕ್ರಿಕೆಟ್: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ನಿತೀಶ್‌ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜೀತೇಶ್ ಶರ್ಮಾ (ವಿಕೆಟ್‌ಕೀಪರ್), ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್.

ವೇಳಾಪಟ್ಟಿ

ಏಕದಿನ ಪಂದ್ಯಗಳು: ಪರ್ತ್ (ಅ.19), ಅಡಿಲೇಡ್ (ಅ.23) ಮತ್ತು ಸಿಡ್ನಿ (ಅ.25)

ಟಿ20 ಪಂದ್ಯಗಳು: ಸಿಡ್ನಿ (ಅ.29), ಮೆಲ್ಬರ್ನ್ (ಅ.31), ಹೋಬರ್ಟ್ (ನ.2), ಗೋಲ್ಡ್ ಕಾಸ್ಟ್ (ನ.6) ಮತ್ತು ಬ್ರಿಸ್ಬೇನ್ (ನ.8)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.