ADVERTISEMENT

ಕೊಹ್ಲಿ, ಪಂತ್ ಆಟದ ಸೊಬಗು, ಭಾರತಕ್ಕೆ ಸರಣಿ ಜಯದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 18:01 IST
Last Updated 18 ಫೆಬ್ರುವರಿ 2022, 18:01 IST
   

ಕೋಲ್ಕತ್ತ: ಏಕದಿನ ಸರಣಿಯಲ್ಲಿ ಆಧಿಪತ್ಯ ಸ್ಥಾಪಿಸಿದ ಭಾರತ ತಂಡ ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ20 ಸರಣಿಯಲ್ಲೂ ಪಾರಮ್ಯ ಮೆರೆಯಿತು. ಈಡನ್ ಗಾರ್ಡನ್ ಅಂಗಣದಲ್ಲಿ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಎಂಟು ರನ್‌ಗಳ ಜಯ ಗಳಿಸಿ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿತು.

ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 5 ವಿಕೆಟ್‌ಗಳಿಗೆ 186 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ 3 ವಿಕೆಟ್‌ಗೆ 178 ರನ್ ಗಳಿಸಲಷ್ಟೇ ಸಾಧ್ಯವಾಯಿತು.

59 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಾಗ ಜೊತೆಗೂಡಿದ ನಿಕೋಲಸ್ ಪೂರನ್ (62; 41 ಎಸೆತ, 5 ಬೌಂಡರಿ, 3 ಸಿಕ್ಸರ್‌) ಮತ್ತು ರೋವ್ಮನ್ ಪೊವೆಲ್ (68; 36 ಎ, 4 ಬೌಂ, 5 ಸಿ) ಶತಕದ ಜೊತೆಯಾಟವಾಡಿ ಭರವಸೆ ಮೂಡಿಸಿದರು. 19ನೇ ಓವರ್‌ನಲ್ಲಿ ಪೂರನ್ ವಿಕೆಟ್ ಪಡೆದು ಭುವನೇಶ್ವರ್ ಕುಮಾರ್ ಸಂಭ್ರಮಿಸಿದರು.

ADVERTISEMENT

ಲಯಕ್ಕೆ ಮರಳಿದ ಕೊಹ್ಲಿ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೆಲವು ತಿಂಗಳಿಂದ ರನ್ ಬರ ಅನುಭವಿಸುತ್ತಿದ್ದ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಲಯ ಕಂಡುಕೊಂಡರು. ಅವರೊಂದಿಗೆ ರಿಷಭ್ ಪಂತ್ ಕೂಡ ಮಿಂಚಿದರು. ಅವರಿಬ್ಬರ ಅವರ ಅರ್ಧಶತಕಗಳ ಬಲದಿಂದ ಭಾರತ ಸವಾಲಿನ ಮೊತ್ತ ಕಲೆ ಹಾಕಿತು.

ಎರಡನೇ ಓವರ್‌ನಲ್ಲೇ ಇಶಾ‌ನ್ ಕಿಶನ್‌ ವಿಕೆಟ್ ಕಳೆದುಕೊಂಡರು. ಮಾಜಿ ನಾಯಕ ಕೊಹ್ಲಿ ಜೊತೆಗೂಡಿ ನಾಯಕ ರೋಹಿತ್ ಶರ್ಮಾ ಇನಿಂಗ್ಸ್‌ಗೆ ಬಲ ತುಂಬುವ ಪ್ರಯತ್ನ ಮಾಡಿದರು.

ಇವರಿಬ್ಬರ ಜೊತೆಯಾಟದಲ್ಲಿ 49 ರನ್‌ಗಳು ಸೇರಿದವು. ಅಷ್ಟರಲ್ಲಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ ಬೇಗನೇ ಮರಳಿದರು. ನಂತರ ಕೊಹ್ಲಿ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ಆಟ ರಂಗೇರಿತು. ಮೋಹಕ ಹೊಡೆತಗಳೊಂದಿಗೆ ಕೊಹ್ಲಿ ಮುದ ನೀಡಿದರೆ ರಿಷಭ್ ಪಂತ್ ಸಹಜ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮಾಡಿದರು.

ತಂಡದ ಮೊತ್ತ ಮೂರಂಕಿ ದಾಟಿದ ಸ್ವಲ್ಪ ಹೊತ್ತಿನಲ್ಲೇ ರಾಸ್ಟನ್ ಚೇಸ್ ಎಸೆತದಲ್ಲಿ ಕೊಹ್ಲಿ (52; 41 ಎಸೆತ, 7 ಬೌಂಡರಿ, 1 ಸಿಕ್ಸರ್‌) ಬೌಲ್ಡ್ ಆದರು. ಪಂತ್ (52; 28 ಎ, 7 ಬೌಂ, 1 ಸಿ) ಜೊತೆಗೂಡಿದ ವೆಂಕಟೇಶ್ ಅಯ್ಯರ್ ವೇಗವಾಗಿ ರನ್ ಗಳಿಸಲು ನೆರವಾದರು. ಕೊನೆಯ ಓವರ್‌ನಲ್ಲಿ ಔಟಾಗುವ ಮುನ್ನ ವೆಂಕಟೇಶ್ 76 ರನ್‌ಗಳ ಜೊತೆಯಾಟವಾಡಿದರು.

ಕೀರನ್‌ ಪೊಲಾರ್ಡ್‌ಗೆ ಶತಕದ ಪಂದ್ಯ: ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್ ಈ ಪಂದ್ಯದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಇದು ಅವರ 100ನೇ ಅಂತರರಾಷ್ಟ್ರೀಯ ಟ್ವೆಂಟಿ20 ಪಂದ್ಯವಾಗಿತ್ತು. ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್‌ನ ಮೊದಲ ಆಟಗಾರ ಆಗಿದ್ದಾರೆ
ಅವರು.

ಈ ಹಿಂದಿನ 99 ಪಂದ್ಯಗಳ 81 ಇನಿಂಗ್ಸ್‌ಗಳಲ್ಲಿ ಅವರು1561 ರನ್ ಕಲೆ ಹಾಕಿದ್ದಾರೆ. ಅಜೇಯ 75 ರನ್ ಅವರ ಗರಿಷ್ಠ ಮೊತ್ತವಾಗಿದ್ದು ಆರು ಅರ್ಧಶತಕ ಗಳಿಸಿದ್ದಾರೆ.

99 ಸಿಕ್ಸರ್ ಮತ್ತು 93 ಬೌಂಡರಿ ಸಿಡಿಸಿದ್ದಾರೆ. 42 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.