ADVERTISEMENT

ಲೆಜೆಂಡ್ಸ್ ಲೀಗ್ ಕ್ರಿಕೆಟ್ ಫೈನಲ್: ಟೇಲರ್, ಜಾನ್ಸನ್ ಅಬ್ಬರದ ಅರ್ಧಶತಕ

ಮಿಂಚಿದ ಆ್ಯಷ್ಲೆ ನರ್ಸ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 16:20 IST
Last Updated 5 ಅಕ್ಟೋಬರ್ 2022, 16:20 IST
ರಾಸ್ ಟೇಲರ್  ಬ್ಯಾಟಿಂಗ್ ವೈಖರಿ  –ಪಿಟಿಐ ಚಿತ್ರ
ರಾಸ್ ಟೇಲರ್  ಬ್ಯಾಟಿಂಗ್ ವೈಖರಿ  –ಪಿಟಿಐ ಚಿತ್ರ   

ಜೈಪುರ: ಮಧ್ಯಮ ಕ್ರಮಾಂಕ ಬ್ಯಾಟರ್‌ಗಳಾದ ರಾಸ್ ಟೇಲರ್ ಹಾಗೂ ಮಿಚೆಲ್ ಜಾನ್ಸನ್ ಅವರ ಅಮೋಘ ಆಟದಿಂದಾಗಿ ಇಂಡಿಯಾ ಕ್ಯಾಪಿಟಲ್ಸ್ ತಂಡವು ಲೆಜೆಂಡ್ಸ್ ಲೀಗ್ ಟಿ20 ಕ್ರಿಕೆಟ್ ಫೈನಲ್‌ನಲ್ಲಿ ದೊಡ್ಡ ಮೊತ್ತ ಪೇರಿಸಿತು.

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್‌ನಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಕಾಪಿಟಲ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 211 ರನ್‌ ಗಳಿಸಿತು.

ಟಾಸ್ ಗೆದ್ದ ಬಿಲ್ವಾರಾ ಕಿಂಗ್ಸ್ ತಂಡದ ನಾಯಕ ಇರ್ಫಾನ್ ಪಠಾಣ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಸ್ಪಿನ್ನರ್‌ಗಳಾದ ಮಾಟಿ ಪನೇಸರ್ ಹಾಗೂ ರಾಹುಲ್ ಶರ್ಮಾ ಅವರ ದಾಳಿಗೆ ಇಂಡಿಯಾ ಕಾಪಿಟಲ್ಸ್‌ ಆರಂಭದಲ್ಲಿಯೇ ಕುಸಿಯಿತು. ಗಂಭೀರ್, ಡವೇನ್ ಸ್ಮಿತ್, ಹ್ಯಾಮಿಲ್ಟನ್ ಮಸಕಜಾ ಹಾಗೂ ರಾಮದಿನ್ ಔಟಾದಾಗ ತಂಡದ ಮೊತ್ತವು 4.3 ಓವರ್‌ಗಳಲ್ಲಿ 21 ರನ್‌ಗಳಷ್ಟೇ ಆಗಿತ್ತು.

ADVERTISEMENT

ಈ ಹಂತದಲ್ಲಿ ಜೊತೆಗೂಡಿದ ನ್ಯೂಜಿಲೆಂಡ್‌ ಆಟಗಾರ ಟೇಲರ್ (82; 41ಎ, 4X4, 6X8) ಹಾಗೂ ಆಸ್ಟ್ರೇಲಿಯಾ ಆಲ್‌ರೌಂಡರ್ ಜಾನ್ಸನ್ (62; 35ಎ, 4X7, 6X3) ಐದನೇ ವಿಕೆಟ್ ಜೊತೆಯಾಟದಲ್ಲಿ 126 ರನ್ ಸೇರಿಸಿದರು.

15ನೇ ಓವರ್‌ನಲ್ಲಿ ಜಾನ್ಸನ್ ವಿಕೆಟ್ ಗಳಿಸಿದ ಬ್ರೆಸನನ್ ಜೊತೆಯಾಟ ಮುರಿದರು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಕಾಲಿಟ್ಟ ಆ್ಯಷ್ಲೆ ನರ್ಸ್ ಬಿರುಸಿನ ಆಟವಾಡಿದರು. 19 ಎಸೆತಗಳಲ್ಲಿ 42 ರನ್‌ ಗಳಿಸಿ ತಂಡದ ಮೊತ್ತವು ಇನ್ನೂರರ ಗಡಿ ದಾಟಲು ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಇಂಡಿಯಾ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 7ಕ್ಕೆ 211 (ರಾಸ್ ಟೇಲರ್ 82, ಮಿಚೆಲ್ ಜಾನ್ಸನ್ 62, ಆ್ಯಷ್ಲೆ ನರ್ಸ್ ಔಟಾಗದೆ 42, ರಾಹುಲ್ ಶರ್ಮಾ 30ಕ್ಕೆ4, ಮಾಂಟಿ ಪನೇಸರ್ 13ಕ್ಕೆ2, ಟಿಮ್ ಬ್ರೆಸ್ನನ್ 11ಕ್ಕೆ1) ವಿವರ ಅಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.