ADVERTISEMENT

ಭಾರತ ತಂಡದಲ್ಲಿ ಈಗ ‘ವೇಗಿಗಳ ಬಳಗ’: ಬೌಲಿಂಗ್ ಕೋಚ್ ಭರತ್ ಅರುಣ್

ಬೌಲಿಂಗ್ ಕೋಚ್ ಭರತ್ ಅರುಣ್ ವಿವರಣೆ; ಮೂರು ವರ್ಷಗಳ ಪ್ರಯತ್ನ ಫಲ ನೀಡಿದ ಸಂತಸ

ರಾಯಿಟರ್ಸ್
Published 23 ಜನವರಿ 2021, 12:20 IST
Last Updated 23 ಜನವರಿ 2021, 12:20 IST
ಭರತ್ ಅರುಣ್ –ಪಿಟಿಐ ಚಿತ್ರ
ಭರತ್ ಅರುಣ್ –ಪಿಟಿಐ ಚಿತ್ರ   

ನವದೆಹಲಿ: ಭಾರತ ತಂಡದಲ್ಲಿ ಕೊನೆಗೂ ವೇಗದ ಬೌಲರ್‌ಗಳ ಒಂದು ಬಳಗವನ್ನೇ ಸೃಷ್ಟಿಸಲು ಸಾಧ್ಯವಾಗಿದ್ದು, ಅಗತ್ಯಕ್ಕೆ ತಕ್ಕಂತೆ ಬೌಲರ್‌ಗಳನ್ನು ಬದಲಿಸಲು ಮತ್ತು ಬಳಸಲು ಇದರಿಂದ ನೆರವಾಗಲಿದೆ ಎಂದು ಬೌಲಿಂಗ್ ಕೊಚ್‌ ಭರತ್ ಅರುಣ್ ತಿಳಿಸಿದ್ದಾರೆ.

ಮಾಜಿ ಟೆಸ್ಟ್ ಆಟಗಾರನೂ ಆಗಿರುವ ಭರತ್‌ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿ ‘ತಂಡದಲ್ಲಿ ಬೌಲರ್‌ಗಳದ್ದೇ ವಿಭಾಗವೊಂದನ್ನು ಸೃಷ್ಟಿಸಲು ಮೂರು ವರ್ಷಗಳಿಂದ ಪ್ರಯತ್ನಗಳು ನಡೆದಿದ್ದವು. ಈಗ ಅದಕ್ಕೆ ಫಲ ಸಿಕ್ಕಿದೆ’ ಎಂದು ವಿವರಿಸಿದರು.

ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಪ್ರಮುಖ ಬೌಲರ್‌ಗಳೆಲ್ಲ ಗಾಯಗೊಂಡು ಕಣಕ್ಕೆ ಇಳಿಯಲಾಗದ ಪರಿಸ್ಥಿತಿಯಲ್ಲಿ ಭಾರತ ತಂಡ ಯುವ ಬೌಲರ್‌ಗಳ ಮೇಲೆ ಭರವಸೆ ಇರಿಸಿ ಆಡಿಸಿತ್ತು. ಭುವನೇಶ್ವರ್ ಕುಮಾರ್ ಮತ್ತು ಇಶಾಂತ್ ಶರ್ಮಾ ಸರಣಿಗೆ ಮೊದಲೇ ಗಾಯಗೊಂಡಿದ್ದರು. ಸರಣಿಯ ನಡುವೆ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಮತ್ತು ಜಸ್‌ಪ್ರೀತ್ ಬೂಮ್ರಾ ಅವರೂ ಗಾಯಗೊಂಡರು. ನೆಟ್‌ನಲ್ಲಿ ಬೌಲಿಂಗ್ ಮಾಡಲು ತೆರಳಿದ್ದ ವಾಷಿಂಗ್ಟನ್ ಸುಂದರ್ ಮತ್ತು ತಂಗರಸು ನಟರಾಜನ್‌ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು.

ADVERTISEMENT

ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಅಮೋಘ ಸಾಧನೆ ಮಾಡಿದ ತಂಡ ಗೆಲುವು ಸಾಧಿಸಿ ಸರಣಿಯನ್ನು 2–1ರಲ್ಲಿ ತನ್ನದಾಗಿಸಿಕೊಂಡಿತ್ತು. ವೈಯಕ್ತಿಕ ಮೂರನೇ ಪಂದ್ಯ ಆಡಿದ ಮೊಹಮ್ಮದ್ ಸಿರಾಜ್ ಅವರು ವೇಗದ ದಾಳಿಯ ಚುಕ್ಕಾಣಿ ಹಿಡಿದಿದ್ದರು. ತಲಾ ಒಂದೊಂದು ಪಂದ್ಯ ಆಡಿದ ಅನುಭವ ಮಾತ್ರ ಇದ್ದ ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ಕೂಡ ಮಿಂಚಿದ್ದರು. ನಟರಾಜನ್ ಅನುಭವಿ ಆಟಗಾರನಂತೆ ದಾಳಿ ನಡೆಸಿದ್ದರು.

‘ಈಗ ತಂಡದ ಬೆಂಚ್ ಬಲ ಗಟ್ಟಿಯಾಗಿದೆ. ಸಂದರ್ಭಕ್ಕೆ ತಕ್ಕಂತೆ ಕಣಕ್ಕೆ ಇಳಿಸಲು ಸಾಕಷ್ಟು ಆಟಗಾರರು ಇದ್ದಾರೆ. ಇದರಿಂದ ಸ್ಥಿರ ಪ್ರದರ್ಶನ ನೀಡಲು ತಂಡಕ್ಕೆ ಸಾಧ್ಯವಾಗಲಿದೆ. ಹೊಸ ಪೀಳಿಗೆಯ ಬೌಲರ್‌ಗಳು ನಿರೀಕ್ಷೆಗೆ ತಕ್ಕಂತೆ ಆಡುತ್ತಿರುವುದರಿಂದ ಬೌಲಿಂಗ್ ವಿಭಾಗದ ಮೇಲಿನ ಒತ್ತಡ ಕಡಿಮೆಯಾಗಿದೆ. ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಮತ್ತು ಇಂಗ್ಲಂಡ್‌ನಲ್ಲಿ ನಡೆಯಲಿರುವ ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳಿಗೆ ಸಜ್ಜಾಗಲು ಇದು ನೆರವಾಗಲಿದೆ’ ಎಂದು ಭರತ್ ಅಭಿಪ್ರಾಯಪಟ್ಟರು.

‘ತಂಡವು ಪ್ರತಿಭೆಗಳಿಂದ ಶ್ರೀಮಂತವಾಗಿದೆ. ಒಟ್ಟು ಏಳು ವೇಗದ ಬೌಲರ್‌ಗಳು ನಮ್ಮಲ್ಲಿದ್ದು ಪ್ರತಿಯೊಬ್ಬರೂ ಗರಿಷ್ಠ ಸಾಮರ್ಥ್ಯ ತೋರಲು ಯಶಸ್ವಿಯಾದರೆ ತಂಡಕ್ಕೆ ತುಂಬ ಅನುಕೂಲ ಆಗಲಿದೆ’ ಎಂದು ಹೇಳಿದ ಅವರು ‘ಯುವ ಆಟಗಾರರ ಮೇಲೆ ಭರವಸೆ ಇದೆ. ಆದರೂ ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರಂಥ ಬೌಲರ್‌ಗಳು ಸಿದ್ಧಗೊಳ್ಳಬೇಕಾದರೆ ಇನ್ನೂ ಸಮಯಾವಕಾಶ ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.