ಮ್ಯಾಂಚೆಸ್ಟರ್: ಶುಭಮನ್ ಗಿಲ್ ನಾಯಕತ್ವದ ಭಾರತ ಬಳಗವು ಭಾನುವಾರ ಸುಪ್ರಸಿದ್ಧ ಮ್ಯಾಂಚೆಸ್ಟರ್ ಫುಟ್‌ಬಾಲ್ ಕ್ಲಬ್ ತಂಡವನ್ನು ಭೇಟಿ ಮಾಡಿತು.
ಉಭಯ ತಂಡಗಳ ಆಟಗಾರರು ಪರಸ್ಪರ ತಮ್ಮ ಪೋಷಾಕುಗಳನ್ನು ವಿನಿಮಯ ಮಾಡಿಕೊಂಡರು. ಕುಶಲೋಪರಿ ನಡೆಸಿದರು ಮತ್ತು ಕೆಲವು ಲಘು ವ್ಯಾಯಾಮಗಳನ್ನು ಮಾಡಿದರು.
‘ಯುನೈಟೆಡ್ ಇನ್ ಮ್ಯಾಂಚೆಸ್ಟರ್’ ಎಂಬ ಒಕ್ಕಣೆಯೊಂದಿಗೆ ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದೆ.
ರೆಡ್ ಡೆವಿಲ್ಸ್ ತಂಡದ ತರಬೇತಿ ಮೈದಾನವಾದ ಕೇರಿಂಗ್‌ಟನ್‌ನಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಅವರು ಫುಟ್‌ಬಾಲ್ ಆಡುತ್ತಿರುವ ಚಿತ್ರಗಳಿವೆ. ‘ಆಡಿದಾಸ್’ ಹಂಚಿಕೊಂಡಿರುವ ಚಿತ್ರದಲ್ಲಿ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅವರು ಯುನೈಟೆಡ್ ತಂಡದ ಖ್ಯಾತನಾಮ ಡಿಫೆಂಡರ್ ಹ್ಯಾರಿ ಮೆಗೈರ್ ಅವರಿಗೆ ಬೌಲಿಂಗ್ ಮಾಡುತ್ತಿರುವ ದೃಶ್ಯವಿದೆ.
ಉಭಯ ತಂಡಗಳ ಮುಖ್ಯ ಕೋಚ್‌ಗಳಾದ ರುಬೇನ್ ಅಮೊರಿಮ್ ಮತ್ತು ಗೌತಮ್ ಗಂಭೀರ್ ಅವರು ಜೊತೆಗೂಡಿ ನಿಂತಿರುವ ಚಿತ್ರವು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಗಿಲ್ ಅವರು ಬ್ರುನೊ ಫರ್ನಾಂಡಿಸ್, ಸಿರಾಜ್ ಅವರು ಅಮದ್ ಡಿಯಾಲೊ, ಜಸ್‌ಪ್ರೀತ್ ಬೂಮ್ರಾ ಅವರು ಮೆಸನ್ ಮೌಟ್ ಮತ್ತು ಹ್ಯಾರಿ ಅವರೊಂದಿಗೆ ಮಾತನಾಡುತ್ತ ನಿಂತಿರುವ ಚಿತ್ರಗಳೂ ಇವೆ.
ಯುನೈಟೆಡ್ ತಂಡದ ಅಧಿಕಾರಿಗಳು ಸ್ವಾಗತ ಕೋರುವುದರೊಂದಿಗೆ ಕಾರ್ಯಕ್ರಮ ಶುರುವಾಯಿತು. ಉಭಯ ತಂಡಗಳ ಆಟಗಾರರು ಸಾಂಕೇತಿಕವಾಗಿ ತಮ್ಮ ಜೆರ್ಸಿಗಳನ್ನು ವಿನಿಮಯ ಮಾಡಿಕೊಂಡರು. ಉಭಯ ತಂಡಗಳ ಕೋಚ್‌ಗಳು ನಾಯಕತ್ವ, ತಂಡದ ಡೈನಾಮಿಕ್ಸ್ ಮತ್ತು ಉನ್ನತ ದರ್ಜೆಯ ಅಥ್ಲೀಟ್‌ಗಳನ್ನು ನಿರ್ವಹಿಸುವ ಕುರಿತ ಸಂವಾದ ನಡೆಸಿದರು.
‘ಎರಡು ವಿಭಿನ್ನ ಕ್ರೀಡೆಗಳ ತಂಡಗಳ ಈ ಮಿಲನವು ಕ್ರೀಡಾ ಕ್ಷೇತ್ರದಲ್ಲಿ ಹೊಸ ಹೆಜ್ಜೆಗುರುತು ಮೂಡಿಸಿದೆ. ಅಡಿದಾಸ್ ಬ್ರ್ಯಾಂಡ್ ಎರಡು ಮಹಾನ್ ತಂಡಗಳನ್ನು ಒಂದು ವೇದಿಕೆಗೆ ಕರೆತಂದಿದೆ’ ಎಂದು ಕ್ರೀಡಾಪೋಷಾಕು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಅನ್ಷುಲ್ ಕಾಂಭೋಜ್ ಅಯ್ಕೆ
ಮ್ಯಾಂಚೆಸ್ಟರ್ (ಪಿಟಿಐ): ಹರಿಯಾಣ ಕ್ರಿಕೆಟ್ ತಂಡದ ವೇಗಿ ಅನ್ಷುಲ್ ಕಾಂಭೋಜ್ ಅವರನ್ನು ಭಾರತ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಮತ್ತು ವೇಗಿ ಆಕಾಶ್ ದೀಪ್ ಅವರು ಗಾಯಗೊಂಡಿದ್ದು ನಾಲ್ಕನೇ ಟೆಸ್ಟ್‌ನಲ್ಲಿ ಆಡುವುದು ಖಚಿತವಿಲ್ಲ. ಆದ್ದರಿಂದ ಅನ್ಷುಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇದೇ 23ರಿಂದ ಟೆಸ್ಟ್ ಆರಂಭವಾಗಲಿದೆ. ಆಕಾಶ್ ದೀಪ್ ಅವರು ತೊಡೆಸಂಧು ನೋವಿನಿಂದ ಚೇತರಿಸಿಕೊಂಡಿಲ್ಲ. ಅವರು ಈ ಸರಣಿಯ ಎರಡು ಟೆಸ್ಟ್‌ಗಳಲ್ಲಿ ಆಡಿದ್ದರು. ಅರ್ಷದೀಪ್ ಸಿಂಗ್ ಅವರಿಗೆ ಇನ್ನೂ ಈ ಸರಣಿಯ ಪಂದ್ಯದಲ್ಲಿ ಆಡುವ ಅವಕಾಶ ಲಭಿಸಿಲ್ಲ. ಈಚೆಗೆ ಅವರು ಅಭ್ಯಾಸ ಮಾಡುವಾಗ ಚೆಂಡು ಬಡಿದಿದ್ದರಿಂದ ಅವರ ಕೈಗೆ ಗಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.