ADVERTISEMENT

ಭಾರತ ಟೆಸ್ಟ್ ತಂಡಕ್ಕೆ ಶುಭಮನ್ ಗಿಲ್ ನಾಯಕ; ಪಂತ್ ಉಪ ನಾಯಕ

ಪಿಟಿಐ
Published 24 ಮೇ 2025, 8:50 IST
Last Updated 24 ಮೇ 2025, 8:50 IST
   

ಮುಂಬೈ: ಬ್ಯಾಟಿಂಗ್ ಯುವತಾರೆ ಶುಭಮನ್ ಗಿಲ್ ಅವರನ್ನು ಭಾರತ ಟೆಸ್ಟ್ ಕ್ರಿಕೆಟ್ ತಂಡದ ನೂತನ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 

ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರಕರ್ ಅವರು 18 ಆಟಗಾರರ ತಂಡವನ್ನು ಪ್ರಕಟಿಸಿದರು. ಗಿಲ್ ಈ ತಂಡದ ನಾಯಕರಾಗಿದ್ದಾರೆ. ತಂಡವು ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯುವ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಡಲಿದೆ. 

25 ವರ್ಷ ವಯಸ್ಸಿನ ಗಿಲ್ ಅವರು ಭಾರತ ತಂಡದ ಚುಕ್ಕಾಣಿ ಹಿಡಿದ ಕಿರಿಯ ವಯಸ್ಸಿನ ಐದನೇ ಆಟಗಾರ ನಾಗಿದ್ದಾರೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಪಟೌಡಿ (21 ವರ್ಷ), ಸಚಿನ್ ತೆಂಡೂಲ್ಕರ್ (23 ವರ್ಷ), ಕಪಿಲ್ ದೇವ್ (24 ವರ್ಷ) ಮತ್ತು ರವಿ ಶಾಸ್ತ್ರಿ (25 ವರ್ಷ) ಅವರು ಕಿರಿಯ ವಯಸ್ಸಿನಲ್ಲಿ ನಾಯಕರಾಗಿದ್ದರು. 

ADVERTISEMENT

‘ನಾಯಕತ್ವವನ್ನು ವಹಿಸಲು ಹೋದ ವರ್ಷದಿಂದಲೆ ಶುಭಮನ್ ಅವರತ್ತ ಗಮನ ಹರಿಸಿದ್ದೆವು. ಇದೊಂದು ಬಹಳ ಒತ್ತಡ ಭರಿತವಾದ ಕಾರ್ಯವಾಗಿದೆ. ಶುಭಮನ್ ಉತ್ತಮ ಆಟಗಾರನಾಗಿದ್ದು ಒತ್ತಡ ನಿಭಾಯಿಸುವ ಭರವಸೆ ಇದೆ’ ಎಂದು ಅಜಿತ್ ಅಗರಕರ್ ಹೇಳಿದರು. 

ತಂಡಕ್ಕೆ ವಿಕೆಟ್‌ಕೀಪರ್ ರಿಷಭ್ ಪಂತ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಜೂನ್ 20ರಂದು ಲೀಡ್ಸ್‌ನಲ್ಲಿ ನಡೆಯುವ ಮೊದಲ ಟೆಸ್ಟ್‌ನಲ್ಲಿ ತಂಡವು ಕಣಕ್ಕಿಳಿಯಲಿದೆ.

ಗಿಲ್‌ಗಿಂತ ತುಸು ಹೆಚ್ಚು ಅನುಭವಿ ಯಾಗಿರುವ  27 ವರ್ಷದ ಪಂತ್ ಅವರು 43 ಟೆಸ್ಟ್‌ಗಳನ್ನು ಆಡಿದ್ದಾರೆ. 42.11ರ ಸರಾಸರಿಯಲ್ಲಿ 2948 ರನ್‌ ಪೇರಿಸಿದ್ದಾರೆ. ಕೆಳಕ್ರಮಾಂಕ ದಲ್ಲಿ ಉತ್ತಮ ಬ್ಯಾಟರ್ ಆಗಿರುವ ಅವರು 6 ಶತಕ ಮತ್ತು 15 ಅರ್ಧ ಶತಕಗಳನ್ನು ಗಳಿಸಿದ್ದಾರೆ. 2018ರಲ್ಲಿ ಟೆಸ್ಟ್‌ಗೆ ಪದಾರ್ಪಣೆಮಾಡಿದ್ದರು. 

ಈಚೆಗಷ್ಟೇ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ವಿರಾಟ್ ಕೊಹ್ಲಿ ಕೂಡ ನಿವೃತ್ತರಾಗಿದ್ದರು. ಆದ್ದರಿಂದ ತಂಡಕ್ಕೆ ಹೊಸ ನಾಯಕನನ್ನು ನೇಮಕ ಮಾಡಲಾಯಿತು. ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಮಾತ್ರ ಆಯ್ಕೆಗೆ ಲಭ್ಯರಾಗಿಲ್ಲ.

ಸಾಯಿ, ಅರ್ಷದೀಪ್‌ಗೆ ಅವಕಾಶ: ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ಎಡಗೈ ವೇಗಿ ಅರ್ಷದೀಪ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯವ ಅವಕಾಶ ಲಭಿಸಿದೆ. ಸಾಯಿ ಸುದರ್ಶನ್ ಅವರು ಸದ್ಯ ನಡೆಯುತ್ತಿರುವ ಐಪಿಎಲ್‌ನಲ್ಲಿ 638 ರನ್‌ಗಳನ್ನು ಪೇರಿಸಿದ್ದಾರೆ. 

ಅರ್ಷದೀಪ್‌ ಅವರೂ ಈಚೆಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಆಡಿ ಬಂದಿದ್ದಾರೆ. ಅವರ  ಆ ಅನುಭವವು ತಂಡಕ್ಕೆ ಉಪಯುಕ್ತವಾಗಲಿದೆ. 

ಅಲ್ಲದೇ ಅಭಿಮನ್ಯು ಈಶ್ವರನ್, ಕರುಣ್ ನಾಯರ್ ಮತ್ತು ಎರಡನೇ ವಿಕೆಟ್‌ಕೀಪರ್ ಆಗಿ ಧ್ರುವ ಜುರೇಲ್ ಕೂಡ ಸ್ಥಾನ ಗಳಿಸಿದ್ದಾರೆ. ಫಿಟ್‌ನೆಸ್‌ ಸಮಸ್ಯೆ ಎದುರಿಸುತ್ತಿರುವ ಜಸ್‌ಪ್ರೀತ್ ಬೂಮ್ರಾ ಕೂಡ ತಂಡದಲ್ಲಿದ್ದಾರೆ. ಆದರೆ, ಅವರು ಎಲ್ಲ ಐದು ಪಂದ್ಯಗಳ ಲ್ಲಿಯೂ ಆಡುವುದು ಖಚಿತವಿಲ್ಲ.

ತಂಡ ಇಂತಿದೆ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ರೆಡ್ಡಿ, ರವೀಂದ್ರ ಜಡೇಜ, ಧ್ರುವ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧಕೃಷ್ಣ, ಆಕಾಶ್ ದೀಪ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.