ADVERTISEMENT

ಆತಿಥೇಯ ಆಸ್ಟ್ರೇಲಿಯಾ ಎದುರಿನ ಟೆಸ್ಟ್: ಸರಣಿಗೆ ‘ಪಿಂಕ್‌ ಬಾಲ್‘ ನಾಂದಿ

ಮೊದಲ ಪಂದ್ಯ; ರಾಹುಲ್‌, ಶುಭಮನ್‌ಗೆ ಇಲ್ಲ ಸ್ಥಾನ

ಪಿಟಿಐ
Published 16 ಡಿಸೆಂಬರ್ 2020, 20:43 IST
Last Updated 16 ಡಿಸೆಂಬರ್ 2020, 20:43 IST
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ –ಎಎಫ್‌ಪಿ ಚಿತ್ರ   
""
""
""

ಅಡಿಲೇಡ್: ಪ್ರಬುದ್ಧ ನಾಯಕ ವಿರಾಟ್ ಕೊಹ್ಲಿ ಮತ್ತು ಅವರು ಮುನ್ನಡೆಸುವ ಬಲಿಷ್ಠ ಭಾರತ ತಂಡ ಪ್ರಬಲ ಎದುರಾಳಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಿದ್ದು ನಾಲ್ಕು ಪಂದ್ಯಗಳ ಹಣಾಹಣಿಯ ಮೊದಲ ಮುಖಾಮುಖಿ ಗುರುವಾರ ಇಲ್ಲಿ ಆರಂಭವಾಗಲಿದೆ. ಹಗಲು ರಾತ್ರಿ ನಡೆಯಲಿರುವ ‘ಪಿಂಕ್‌ ಬಾಲ್‌ ಟೆಸ್ಟ್‌’ನಲ್ಲಿ ಗೆದ್ದು ಕೊರೊನಾ ಕಾಲದ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯವಾಗಿಸಲು ಭಾರತ ತಂಡ ಪ್ರಯತ್ನಿಸಲಿದ್ದು ಗೆಲುವಿನೊಂದಿಗೆ ಅಭಿಯಾನ ಆರಂಭಿಸಲು ಆತಿಥೇಯರು ಶ್ರಮಿಸಲಿದ್ದಾರೆ.

ವಿರಾಟ್ ಕೊಹ್ಲಿ ಅವರ ಅತ್ಯಮೋಘ ಬ್ಯಾಟಿಂಗ್, ಸ್ಟೀವ್ ಸ್ಮಿತ್ ಸ್ಥಿರ ಪ್ರದರ್ಶನ, ಚೇತೇಶ್ವರ್ ಪೂಜಾರ ಅವರ ಕ್ರೀಸ್‌ನಲ್ಲಿ ನೆಲೆಯೂರುವ ಸಾಮರ್ಥ್ಯ ಮುಂತಾದವುಗಳ ಜೊತೆ ಯುವ ಆಟಗಾರ ಮಾರ್ನಸ್ ಲಾಬುಶೇನ್ ಮೋಡಿಗೆ ಸಾಕ್ಷಿಯಾಗಲು ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ. ತಾನು ಒಂದು ಋತುವಿನಲ್ಲಿ ಮಾತ್ರ ಮಿಂಚಿ ಮಾಯವಾದ ನಕ್ಷತ್ರವಲ್ಲ ಎಂಬುದನ್ನು ಸಾಬೀತು ಮಾಡಲು ಲಾಬುಶೇನ್‌ಗೆ ಇದೊಂದು ಅವಕಾಶವೂ ಹೌದು.

ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಲು ಬೌಲರ್‌ಗಳು ವೇಗ ಮತ್ತು ಸ್ಪಿನ್ ಅಸ್ತ್ರಗಳನ್ನು ಮೊನಚುಗೊಳಿಸಿದ್ದಾರೆ. ಜೋಶ್ ಹ್ಯಾಜಲ್‌ವುಡ್‌, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಅವರ ಯಾರ್ಕರ್‌ಗಳು, ಪ್ಯಾಟ್ ಕಮಿನ್ಸ್ ಅವರ ಬೌನ್ಸರ್‌ಗಳ ಕರಾಮತ್ತು ನೋಡುವುದಕ್ಕೂ ಕ್ರಿಕೆಟ್ ಜಗತ್ತು ಕಾಯುತ್ತಿದೆ. ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ತಂಡಕ್ಕೆ ಲಭ್ಯವಿಲ್ಲ. ಸ್ಫೋಟಕ ಶೈಲಿಯ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರ ಉಪಸ್ಥಿತಿ ಆಸ್ಟ್ರೇಲಿಯಾ ಪಾಳಯದಲ್ಲೂ ಇಲ್ಲ. ಆದರೂ ಉಭಯ ತಂಡಗಳು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿಕೊಂಡಿವೆ. ತವರಿನಲ್ಲಿ ಹೆಚ್ಚು ಪಿಂಕ್ ಬಾಲ್ ಪಂದ್ಯಗಳನ್ನು ಆಡಿರುವ ಆಸ್ಟ್ರೇಲಿಯಾ ಸಹಜವಾಗಿ ಭರವಸೆಯಲ್ಲಿದೆ.

ADVERTISEMENT
ಟಿಮ್ ಪೇನ್ –ರಾಯಿಟರ್ಸ್ ಚಿತ್ರ

ಹಗಲು ರಾತ್ರಿ ಟೆಸ್ಟ್ ಪಂದ್ಯಗಳಿಗೆ ಅದರದೇ ಆದ ವೈಶಿಷ್ಟ್ಯಗಳಿವೆ. ಸಂಜೆ ವರೆಗೆ ಬ್ಯಾಟ್ಸ್‌ಮನ್‌ಗಳಿಗೆ ನೆಲೆಯೂರಲು ಸಾಧ್ಯವಾಗುತ್ತದೆ. ಹೊತ್ತು ಮುಳುಗಿದ ನಂತರ ಬೌಲರ್‌ಗಳು ಪಾರಮ್ಯ ಮೆರೆಯು‌ತ್ತಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಅವಕಾಶ ಇರುವುದರಿಂದ ಭಾರತ ತಂಡಕ್ಕೆ ಅಂತಿಮ 11 ಆಯ್ಕೆ ಮಾಡಲು ಹೆಚ್ಚು ಕಷ್ಟ ಆಗಲಿಲ್ಲ. ಆದರೆ ಶುಭಮನ್ ಗಿಲ್ ಮತ್ತು ಕೆ.ಎಲ್‌.ರಾಹುಲ್ ಅವರಿಗೆ ವಿಶ್ರಾಂತಿ ನೀಡಿ ಫಾರ್ಮ್‌ನಲ್ಲಿಲ್ಲದ ಪೃಥ್ವಿ ಶಾಗೆ ಇನಿಂಗ್ಸ್ ಆರಂಭಿಸುವ ಜವಾಬ್ದಾರಿ ವಹಿಸಿರುವುದು ಚರ್ಚೆಗೆ ಕಾರಣವಾಗಿದೆ.

‘ಕೆ.ಎಲ್‌.ರಾಹುಲ್ ಅತ್ಯುತ್ತಮ ಆಟಗಾರ ನಿಜ. ಆದರೆ ಸದ್ಯ ಸಮತೋಲನದ ತಂಡಕ್ಕೆ ಯಾರು ಬೇಕೋ ಅವರನ್ನು ಆರಿಸಲಾಗಿದೆ. ಆಫ್‌ ಬ್ರೇಕ್ ಬೌಲಿಂಗ್ ಕೂಡ ಮಾಡಬಲ್ಲ ಆಟಗಾರ ಆಗಿರುವುದರಿಂದ ಹನುಮ ವಿಹಾರಿ ಅವರಿಗೆ ಅವಕಾಶ ನೀಡಲಾಗಿದೆ’ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು. ಸ್ಫೋಟಕ ಬ್ಯಾಟಿಂಗ್ ಮಾಡಬಲ್ಲವರಾದರೂ ಸ್ಥಿರತೆ ಕಾಪಾಡಿಕೊಳ್ಳಲು ವಿಫಲರಾಗುತ್ತಿರುವ ರಿಷಭ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ಅವರ ಕೈಗೆ ವಿಕೆಟ್ ಕೀಪಿಂಗ್ ಗ್ಲೌಸ್ ನೀಡಲು ತಂಡ ನಿರ್ಧರಿಸಿದೆ. ಅಭ್ಯಾಸ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿರುವ ಉಮೇಶ್ ಯಾದವ್ ಅವರಿಗೂ ಅವಕಾಶ ಲಭಿಸಿದೆ. ಅಜಿಂಕ್ಯ ರಹಾನೆ ಕೂಡ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಭಾರತ ತಂಡ ಇದೆ.

ಮಂಗಳವಾರ ಸಂಜೆ ಪಿಂಕ್ ಬಾಲ್‌ನಲ್ಲಿ ಅಭ್ಯಾಸ ಮಾಡಿದ ಭಾರತದ ಬ್ಯಾಟ್ಸ್‌ಮನ್‌ಗಳು ತಂಗರಸು ನಟರಾಜನ್ ಅವರ ಒಳಗೆ ನುಗ್ಗಿಬಂದ ಎಸೆತಗಳನ್ನು ಎದುರಿಸಲು ಪರದಾಡಿದರು. ಹೀಗಿರುವಾಗ, ಪಿಂಕ್ ಬಾಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿರುವ ಮಿಷೆಲ್ ಸ್ಟಾರ್ಕ್ ಅವರನ್ನು ಕೊಹ್ಲಿ ಪಡೆ ಹೇಗೆ ನಿಭಾಯಿಸಲಿದೆ ಎಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.

*
ಟೆಸ್ಟ್ ಕ್ರಿಕೆಟ್‌ನಲ್ಲಿ ಪೃಥ್ವಿ ಶಾ ಉತ್ತಮ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ಅವರಿಗೆ ಇದು ಮೊದಲ ಟೆಸ್ಟ್‌. ಆದ್ದರಿಂದ ಅವರು ಯಾವ ಮಟ್ಟದಲ್ಲಿ ಸಾಮರ್ಥ್ಯ ಪ್ರದರ್ಶಿಸುತ್ತಾರೆ ಎಂಬುದನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದೇವೆ

–ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.