ADVERTISEMENT

ಸರಣಿ ಜಯದ ಮೇಲೆ ವಿರಾಟ್ ಕಣ್ಣು

ಭಾರತ– ಆಸ್ಟ್ರೇಲಿಯಾ 2ನೇ ಟಿ20 ಪಂದ್ಯ ಇಂದು: ಆತಿಥೇಯರಿಗೆ ಸೇಡು ತೀರಿಸಿಕೊಳ್ಳುವ ಛಲ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 19:08 IST
Last Updated 5 ಡಿಸೆಂಬರ್ 2020, 19:08 IST
ರಾಹುಲ್ --–ರಾಯಿಟರ್ಸ್ ಚಿತ್ರ
ರಾಹುಲ್ --–ರಾಯಿಟರ್ಸ್ ಚಿತ್ರ   

ಸಿಡ್ನಿ: ಕಂಕಷನ್ ನಿಯಮದ ಕುರಿತ ಚರ್ಚೆ ಇನ್ನೂ ತಣ್ಣಗಾಗಿಲ್ಲ. ಇದರ ನಡುವೆಯೇ ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯನ್ನು ಜಯಿಸುವ ಕನಸಿನಲ್ಲಿ ವಿರಾಟ್ ಕೊಹ್ಲಿ ಪಡೆಯು ತೇಲುತ್ತಿದೆ. ‌‌

ಭಾನುವಾರ ಇಲ್ಲಿ ನಡೆಯಲಿರುವ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗಲಿವೆ. ಶುಕ್ರವಾರ ಕ್ಯಾನ್‌ಬೆರಾದಲ್ಲಿನ ಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವು 11 ರನ್‌ಗಳಿಂದ ಜಯಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತದ ರವೀಂದ್ರ ಜಡೇಜ ಭರ್ಜರಿ ಆಟವಾಡಿದ್ದರು. ಆದರೆ, ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಚೆಂಡು ಅವರ ಹೆಲ್ಮೆಟ್‌ಗೆ ಅಪ್ಪಳಿಸಿತ್ತು. ಆದ್ದರಿಂದ ಕಂಕಷನ್ ನಿಯಮದಡಿಯಲ್ಲಿ ಅವರು ಫೀಲ್ಡಿಂಗ್‌ಗೆ ಬರಲಿಲ್ಲ. ಅವರ ಬದಲಿಗೆ ಅವಕಾಶ ಪಡೆದ ಬದಲಿ ಆಟಗಾರ ಯಜುವೇಂದ್ರ ಚಾಹಲ್ ತಂಡದ ರೂವಾರಿಯಾಗಿದ್ದರು.

ಇದೀಗ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿದ್ದು. ಸರಣಿಯ ಎರಡೂ ಪಂದ್ಯಗಳಲ್ಲಿ ಅವರು ಆಡುವುದಿಲ್ಲ. ಅವರ ಬದಲಿಗೆ ಮಧ್ಯಮವೇಗಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆ ದಿದ್ದಾರೆ. ಹೀಗಾಗಿ ಏಳನೇ ಕ್ರಮಾಂಕದ ಬ್ಯಾಟಿಂಗ್ ದುರ್ಬಲಗೊಂಡಂತಾಗಿದೆ.

ADVERTISEMENT

ಭಾರತವು ಕಂಕಷನ್‌ನಲ್ಲಿ ’ಸಮ–ಸಮ‘ ಆಟಗಾರನ ಬದಲಾವಣೆ ಮಾಡಿಲ್ಲವೆಂಬ ಅಸಮಾಧಾನದಲ್ಲಿರುವ ಆತಿಥೇಯ ತಂಡವು ಸೇಡು ತೀರಿಸಿಕೊಳ್ಳಲು ಕಾದಿದೆ. ಡೇವಿಡ್ ವಾರ್ನರ್ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ಆದರೆ, ಆ್ಯರನ್ ಫಿಂಚ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಆಲ್‌ರೌಂಡರ್ ಮೋಯಿಸಸ್ ಹೆನ್ರಿಕ್ಸ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರು ದೊಡ್ಡ ಮೊತ್ತ ಕಲೆಹಾಕುವ ನಿಪುಣರು.

ಪದಾರ್ಪಣೆ ಪಂದ್ಯದಲ್ಲಿಯೇ ಭರ ವಸೆ ಮೂಡಿಸಿದ್ದ ಟಿ. ನಟರಾಜನ್, ಶಾರ್ದೂಲ್ ಠಾಕೂರ್, ಸ್ಪಿನ್ನರ್ ಚಾಹಲ್ ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಛಲದಲ್ಲಿದ್ದಾರೆ. ಈ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಶಮಿ ’ಅಭ್ಯಾಸ‘ ಪಂದ್ಯಕ್ಕೆ ತೆರಳಬಹುದು.

ಆತಿಥೇಯರ ಬೌಲಿಂಗ್ ಬಲಿಷ್ಠ ವಾಗಿದೆ. ಜೋಶ್ ಹ್ಯಾಜಲ್‌ವುಡ್, ಆ್ಯಡಂ ಜಂಪಾ, ಮಿಚೆಲ್ ಸ್ಟಾರ್ಕ್, ಹೆನ್ರಿಕ್ಸ್ ಭಾರತದ ಬ್ಯಾಟಿಂಗ್ ಪಡೆಗೆ ಸವಾಲೊಡ್ಡಬಲ್ಲರು. ಹೋದ ಪಂದ್ಯ ದಲ್ಲಿ ಕೆ.ಎಲ್. ರಾಹುಲ್ ಅರ್ಧಶತಕ ಹೊಡೆದಿದ್ದರು. ಮನೀಷ್ ಪಾಂಡೆ ಮತ್ತು ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ಸಿಕ್ಕರೆ, ಸಾಮರ್ಥ್ಯ ಸಾಬೀತು ಪಡಿಸಬೇಕು. ಶಿಖರ್ ಧವನ್, ನಾಯಕ ವಿರಾಟ್ ಕೊಹ್ಲಿ ಕೂಡ ಅನುಭವದ ಆಟ ಆಡಿದರೆ ತಂಡದ ಬಲ ಹೆಚ್ಚುತ್ತದೆ.

ಸಿಡ್ನಿಯಲ್ಲಿ ಹೋದ ವಾರ ಆಡಿದ್ದ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ತಂಡವು ನಿರಾಶೆ ಅನುಭವಿಸಿತ್ತು. ಈಗ ಸರಣಿ ಗೆಲುವಿನ ಅವಕಾಶವನ್ನು ಇಲ್ಲಿಯೇ ಸಾಕಾರಗೊಳಿಸಿಕೊಳ್ಳುವ ಛಲದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.