ADVERTISEMENT

IND vs AUS: 3ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುತ್ತಾರಾ ಕೆ.ಎಲ್. ರಾಹುಲ್?

ರಾಯಿಟರ್ಸ್
Published 22 ಫೆಬ್ರುವರಿ 2023, 10:26 IST
Last Updated 22 ಫೆಬ್ರುವರಿ 2023, 10:26 IST
ಕೆ.ಎಲ್. ರಾಹುಲ್?
ಕೆ.ಎಲ್. ರಾಹುಲ್?   

ನವದೆಹಲಿ: ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರು, ಆಸ್ಟ್ರೇಲಿಯಾ ವಿರುದ್ಧ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನುತ್ತಿವೆ ವರದಿಗಳು.

ಸದ್ಯ, ನಡೆಯುತ್ತಿರುವ 4 ಪಂದ್ಯಗಳ ಬಾರ್ಡರ್–ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2–0 ಮುನ್ನಡೆಯಲ್ಲಿದೆ. 3ನೇ ಪಂದ್ಯದಲ್ಲಿ ರಾಹುಲ್ ಬದಲಿಗೆ ಶುಭಮನ್ ಗಿಲ್ ಅವರಿಗೆ ಅವಕಾಶ ನೀಡಬೇಕೆಂಬ ಮಾತುಗಳು ಕೇಳಿಬರುತ್ತಿವೆ.

ಕಳೆದ 10 ಟೆಸ್ಟ್ ಇನಿಂಗ್ಸ್‌ಗಳಲ್ಲಿ ರಾಹುಲ್ ಗಳಿಸಿದ ಗರಿಷ್ಠ ಮೊತ್ತ 23 ರನ್ ಆಗಿದೆ.

ADVERTISEMENT

‘ರಾಹುಲ್ ಅವರ ಆಟದ ಬಗ್ಗೆ ನನಗೆ ಅತ್ಯಂತ ಮೆಚ್ಚುಗೆ ಇದೆ. ಅವರನ್ನು ನಾನು ರೋಲ್ಸ್ ರಾಯ್ಸ್ ರಾಹುಲ್ ಎಂದೇ ಕರೆಯುತ್ತೇನೆ. ಆದರೆ, ಈ ಸಂದರ್ಭ ಅವರಿಗೆ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಈಗ ನಾನು ಆಯ್ಕೆ ಸಮಿತಿಯ ಮುಖ್ಯಸ್ಥನಾಗಿದ್ದರೆ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸುತ್ತಿದ್ದೆ’ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

ರಾಹುಲ್ ವೈಫಲ್ಯದ ಬಗ್ಗೆ ಪ್ರತಿಕ್ರಿಯಿಸಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ‘ಅವರ ಬ್ಯಾಟಿಂಗ್ ಕುರಿತಂತೆ ಹಲವು ಮಾತುಗಳು ಕೇಳಿಬರುತ್ತಿವೆ. ಆದರೆ, ನಾನಾಗಲಿ, ತಂಡದ ಆಡಳಿತ ಮಂಡಳಿಯಾಗಲಿ. ಬ್ಯಾಟರ್ ಸಾಮರ್ಥ್ಯವನ್ನು ಪರಿಗಣಿಸುತ್ತೇವೆ. ರನ್ ಗಳಿಸುವ ಸಾಮರ್ಥ್ಯ ಇರುವವರಿಗೆ ಅವಕಾಶ ಸಿಗುತ್ತದೆ. ಅದು ಕೇವಲ ರಾಹುಲ್‌ಗೆ ಮಾತ್ರವಲ್ಲ’ಎಂದು ಹೇಳಿದ್ದರು.

ಸತತ ವೈಫಲ್ಯದ ಹೊರತಾಗಿಯೂ ಕೆ.ಎಲ್‌ ರಾಹುಲ್‌ ಅವರಿಗೆ ಟೆಸ್ಟ್‌ ತಂಡಲ್ಲಿ ಸ್ಥಾನ ನೀಡುತ್ತಿರುವುದರ ಬಗ್ಗೆ ಭಾರತ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್ ಸಹ ಅಸಮಾಧಾನ ವ್ಯಕ್ತಪಡಿಸಿದ್ದರು.

‘ಶಿಖರ್‌ ಧವನ್‌ ಅವರು 40+ ಹಾಗೂ ಮಯಂಕ್ ಅಗರವಾಲ್ ಅವರು 2 ದ್ವಿಶತಕದೊಂದಿಗೆ 41+ ಟೆಸ್ಟ್‌ ಸರಾಸರಿ ಹೊಂದಿದ್ದಾರೆ. ಶುಭ್‌ಮನ್‌ ಗಿಲ್‌ ಸರತಿಯಲ್ಲಿದ್ದಾರೆ. ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿ ಇದ್ದರೂ ಸರ್ಫರಾಜ್‌ ಖಾನ್ ಅವರ ಕಾಯುವಿಕೆ ಮುಗಿದಿಲ್ಲ. ರಾಹುಲ್‌ ಅವರಿಗೆ ಪದೇ ಪದೇ ಅವಕಾಶ ನೀಡುತ್ತಿರುವುದು ನ್ಯಾಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ’ಎಂದು ಹೇಳಿದ್ದರು.

‘ಅವರ ರನ್‌ ಬರ ಮುಂದುವರಿದಿದೆ. ಇಷ್ಟು ಕಡಿಮೆ ಸರಾಸರಿಯೊಂದಿಗೆ ಆಡಿದ ಯಾವುದೇ ಭಾರತೀಯ ಬ್ಯಾಟರ್‌ನನ್ನು ನಾನು ಕಳೆದ 20 ವರ್ಷಗಳಲ್ಲಿ ಕಂಡಿಲ್ಲ. ತಂಡದಲ್ಲಿ ಇವರ ಸೇರ್ಪಡೆಯಿಂದಾಗಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯಲು ಪ್ರಯತ್ನಿಸುತ್ತಿರುವ ಪ್ರತಿಭಾನಿತ್ವ ಆಟಗಾರರಿಗೆ ಅನ್ಯಾಯವಾಗುತ್ತಿದೆ’ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು.

ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಾಹುಲ್ ಅವರು ಕೇವಲ 17 ರನ್‌ ಗಳಿಸಿ ನಿರ್ಗಮಿಸಿದ್ದರು. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಗಳಿಸಿದ್ದರು. ರಾಹುಲ್‌ ಅವರಿಗೆ ಪಕ್ಷಪಾತ ಧೋರಣೆಯಿಂದಾಗಿ ಅವಕಾಶ ಸಿಗುತ್ತಿದೆ ಎಂದು ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.