ADVERTISEMENT

ಭಾರತ–ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯ ಇಂದು: ವಿಶ್ವಕಪ್‌ಗೆ ಸಜ್ಜಾಗಲು ಅವಕಾಶ

ಶುಭಾರಂಭದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:28 IST
Last Updated 20 ಸೆಪ್ಟೆಂಬರ್ 2022, 1:28 IST
ರೋಹಿತ್‌ ಶರ್ಮ– ಎಎಫ್‌ಪಿ ಚಿತ್ರ
ರೋಹಿತ್‌ ಶರ್ಮ– ಎಎಫ್‌ಪಿ ಚಿತ್ರ   

ಮೊಹಾಲಿ: ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಎದುರಾದ ನಿರಾಸೆಯನ್ನು ಮರೆತು ಟಿ20 ವಿಶ್ವಕಪ್‌ಗೆ ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ.

ಆಸ್ಟ್ರೇಲಿಯಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಇಲ್ಲಿನ ಮೊಹಾಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿದ್ದು, ರೋಹಿತ್‌ ಶರ್ಮ ಬಳಗ ಶುಭಾರಂಭದ ನಿರೀಕ್ಷೆಯಲ್ಲಿದೆ.

ಆಸ್ಟ್ರೇಲಿಯಾ ವಿರುದ್ದದ ಸರಣಿಯ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ಆಡಲಿದೆ. ಈ ಎರಡೂ ಸರಣಿಗಳು, ವಿಶ್ವಕಪ್‌ ಟೂರ್ನಿಗೆ ಸಜ್ಜಾಗಲು ಭಾರತದ ಆಟಗಾರರಿಗೆ ಉತ್ತಮ ಅವಕಾಶ ಕ‌ಲ್ಪಿಸಿದೆ.

ADVERTISEMENT

ಏಷ್ಯಾಕಪ್‌ನಲ್ಲಿ ವೈಫಲ್ಯ ಅನುಭವಿದ್ದ ತಂಡ ಪುಟಿದೆದ್ದು ನಿಲ್ಲಬೇಕಿದೆ. ಆದ್ದರಿಂದ ತವರು ನೆಲದಲ್ಲಿ ನಡೆಯುವ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದು ರೋಹಿತ್‌ ಬಳಗದ ಗುರಿ. ಬ್ಯಾಟಿಂಗ್ ಕ್ರಮಾಂಕದಲ್ಲಿನ ಗೊಂದಲ ಬಗೆಹರಿಸುವುದರತ್ತ ಭಾರತ ಹೆಚ್ಚಿನ ಗಮನ ನೀಡಲಿದೆ.

ವಿಶ್ವಕಪ್‌ ಟೂರ್ನಿಯಲ್ಲಿ ಕೆ.ಎಲ್‌.ರಾಹುಲ್ ಅವರು ತಮ್ಮೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಾಯಕ ರೋಹಿತ್‌ ಹೇಳಿದ್ದಾರೆ. ಆದರೂ ಕೆಲವು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅವರೂ ಆರಂಭಿಕ ಆಟಗಾರನ ಜವಾಬ್ದಾರಿ ನಿಭಾಯಿಸುವರು ಎಂಬ ಸೂಚನೆ ಕೊಟ್ಟಿದ್ದಾರೆ.

ಬ್ಯಾಟಿಂಗ್‌ನಲ್ಲಿ ಮೊದಲ ನಾಲ್ಕು ಕ್ರಮಾಂಕ (ರೋಹಿತ್‌, ರಾಹುಲ್‌, ಕೊಹ್ಲಿ ಮತ್ತು ಸೂರ್ಯಕುಮಾರ್‌ ಯಾದವ್) ಈಗಾಗಲೇ ನಿರ್ಧಾರವಾಗಿದೆ. ಆದರೆ ವಿಕೆಟ್‌ಕೀಪರ್‌ಗಳಾದ ರಿಷಭ್‌ ಪಂತ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರ ಜವಾಬ್ದಾರಿ ಏನೆಂಬುದು ಖಚಿತವಾಗಿಲ್ಲ.

ರವೀಂದ್ರ ಜಡೇಜ ಗಾಯಗೊಂಡಿರುವುದರಿಂದ ಭಾರತ ತಂಡ ಎಡಗೈ ಬ್ಯಾಟ್ಸ್‌ಮನ್‌ ಪಂತ್‌ ಅವರನ್ನು ನೆಚ್ಚಿಕೊಳ್ಳಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ಕಾರ್ತಿಕ್‌ ಅವರಿಗೆ ಏಷ್ಯಾಕಪ್‌ನಲ್ಲಿ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ಅವಕಾಶ ಸಿಕ್ಕರೆ, ಸಾಮರ್ಥ್ಯ ತೋರಿಸಲು ಅವರೂ ಸಜ್ಜಾಗಿದ್ದಾರೆ.

ದೀಪಕ್‌ ಹೂಡಾ ಏಷ್ಯಾ ಕಪ್‌ನಲ್ಲಿ ‘ಸೂಪರ್‌ 4’ ಹಂತದ ಎಲ್ಲ ಪಂದ್ಯಗಳಲ್ಲಿ ಆಡಿದ್ದರೂ, ತಂಡದಲ್ಲಿ ಅವರ ಪಾತ್ರ ಏನು ಎಂಬುದರಲ್ಲಿ ‌ಸ್ಪಷ್ಟತೆ ಇಲ್ಲ. ಒಟ್ಟಿನಲ್ಲಿ ವಿಶ್ವಕಪ್‌ಗೆ ತೆರಳುವ ಮುನ್ನ, ಮಧ್ಯಮ ಕ್ರಮಾಂಕದಲ್ಲಿ ಎದ್ದಿರುವ ‘ಗೊಂದಲ’ ಬಗೆಹರಿಯಬೇಕಿದೆ.

ವೇಗಿಗಳಾದ ಹರ್ಷಲ್‌ ಪಟೇಲ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ವಾಪಸಾಗಿರುವುದು ತಂಡದ ಬೌಲಿಂಗ್‌ ವಿಭಾಗದ ಬಲ ಹೆಚ್ಚಿಸಿದೆ.

ಮತ್ತೊಂದೆಡೆ ಆ್ಯರನ್‌ ಫಿಂಚ್‌ ನೇತೃತ್ವದ ಆಸ್ಟ್ರೇಲಿಯಾ, ಕೆಲವು ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಭಾರತಕ್ಕೆ ಬಂದಿದೆ. ಡೇವಿಡ್‌ ವಾರ್ನರ್‌ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಮಿಚೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೊಯಿನಿಕ್ ಮತ್ತು ಮಿಚೆಲ್‌ ಮಾರ್ಷ್‌ ಅವರೂ ಈ ಸರಣಿಯಲ್ಲಿ ಆಡುತ್ತಿಲ್ಲ.

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿರುವ ಫಿಂಚ್‌, ಈ ಸರಣಿಯಲ್ಲಿ ಬ್ಯಾಟಿಂಗ್‌ ಲಯ ಕಂಡುಕೊಳ್ಳಲು ಪ್ರಯತ್ನಿಸಲಿದ್ದಾರೆ. ಬಿರುಸಿನ ಬ್ಯಾಟಿಂಗ್‌ಗೆ ಹೆಸರು ಪಡೆದಿರುವ ಟಿಮ್‌ ಡೇವಿಡ್‌ ಅವರ ಪ್ರದರ್ಶನದ ಮೇಲೂ ಎಲ್ಲರ ಚಿತ್ತ ನೆಟ್ಟಿದೆ. ಸಿಂಗಪುರ ಪರ ಅಂತರರಾಷ್ಟ್ರೀಯ ಪಂದ್ಯ ಆಡಿರುವ 26 ವರ್ಷದ ಡೇವಿಡ್‌, ಇದೇ ಮೊದಲ ಬಾರಿ ಆಸ್ಟ್ರೇಲಿಯಾ ಪರ ಆಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.