ADVERTISEMENT

ಭಾರತ–ನ್ಯೂಜಿಲೆಂಡ್‌ ‘ಎ’ ಟೆಸ್ಟ್‌| ಪ್ರಿಯಾಂಕ್‌ ಪಾಂಚಾಲ್, ಭರತ್‌ ತಾಳ್ಮೆಯ ಆಟ

ಭಾರತ–ನ್ಯೂಜಿಲೆಂಡ್‌ ‘ಎ’ ತಂಡಗಳ ನಡುವಿನ ‘ಟೆಸ್ಟ್‌’

ಬಸೀರ ಅಹ್ಮದ್ ನಗಾರಿ
Published 9 ಸೆಪ್ಟೆಂಬರ್ 2022, 18:12 IST
Last Updated 9 ಸೆಪ್ಟೆಂಬರ್ 2022, 18:12 IST
ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್‌ ಪಾಂಚಾಲ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್‌ ಪಾಂಚಾಲ್‌ ಆಟದ ವೈಖರಿ –ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಾಯಕ ಪ್ರಿಯಾಂಕ್‌ ಪಾಂಚಾಲ್ (87) ಹಾಗೂ ವಿಕೆಟ್‌ ಕೀಪರ್‌ ಕೆ.ಎಸ್‌.ಭರತ್ (ಬ್ಯಾಟಿಂಗ್ 74) ಅವರ ತಾಳ್ಮೆಯ ಆಟದ ಬಲದಿಂದ ಭಾರತ ‘ಎ’ ತಂಡವು ಶುಕ್ರವಾರ ಆರಂಭವಾದ ನ್ಯೂಜಿಲೆಂಡ್‌ ‘ಎ’ ತಂಡದ ವಿರುದ್ಧದ ‘ಟೆಸ್ಟ್‌’ ಪಂದ್ಯದಲ್ಲಿ ಸಾಧಾರಣ ಮೊತ್ತ
ಕಲೆಹಾಕಿದೆ.

ಇಲ್ಲಿನ ರಾಜನಗರ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ತಂಡ 66 ಓವರ್‌ಗಳಲ್ಲಿ 6 ವಿಕೆಟ್‌ಗೆ 229 ರನ್‌ ಗಳಿಸಿದೆ.

ಟಾಸ್‌ ಗೆದ್ದ ಕಿವೀಸ್‌ ತಂಡದ ನಾಯಕ ಟಾಮ್‌ ಬ್ರೂಸ್‌ ಫೀಲ್ಡಿಂಗ್‌ ಆಯ್ದುಕೊಂಡರು. ಅವರ ನಿರ್ಧಾರ ಸಮರ್ಥಿಸುವಂತೆ ಕಿವೀಸ್‌ ಬೌಲರ್‌ಗಳು ಪ್ರಭಾವಿ ಬೌಲಿಂಗ್‌ ಮಾಡಿದರು. ಊಟದ ವಿರಾಮಕ್ಕೂ ಮುನ್ನವೇ ಲೋಗಾನ್‌ ಬೀಕ್ ಎರಡು ವಿಕೆಟ್‌ ಕಬಳಿಸಿದರು.

ADVERTISEMENT

ಬೀಕ್‌ ಬೌಲ್ ಮಾಡಿದ 12ನೇ ಓವರ್‌ನಲ್ಲಿ ಅಭಿಮನ್ಯು ಈಶ್ವರನ್‌ (22 ರನ್‌, 36 ಎ, 4X5) ಔಟಾದರು. ಎರಡನೇ ಸ್ಲಿಪ್‌ನಲ್ಲಿದ್ದ ಟಾಮ್‌ ಬ್ರೂಸ್‌ಗೆ ಕ್ಯಾಚಿತ್ತರು. ನಂತರ ಬಂದ ಋತುರಾಜ ಗಾಯಕವಾಡ (5 ರನ್‌, 15ಎ, 1ಬೌಂಡರಿ) ತುಂಬ ಹೊತ್ತು ನಿಲ್ಲಲಿಲ್ಲ. ಬೀಕ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಕ್ಯಾಮ್‌ ಫ್ಲೆಚರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು.

ರಜತ್‌ ಪಾಟೀದಾರ್‌ (4 ರನ್‌, 17ಎ, 1ಬೌಂಡರಿ) ಅವರನ್ನು ವೇಗಿ ಜಾಕೋಬ್‌ ಡೆಫಿ ಹೆಚ್ಚುಹೊತ್ತು ನಿಲ್ಲಲು ಬಿಡಲಿಲ್ಲ. ತಿಲಕ್‌ ವರ್ಮಾ(0) ಬಂದಷ್ಟೇ ವೇಗವಾಗಿ ಮರಳಿದರು. ಅವರು ಡೆಫಿ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್‌ ಆದರು.

ತಾಳ್ಮೆಯ ಆಟ: ಒಂದೆಡೆ ನಿರಂತರವಾಗಿ ವಿಕೆಟ್‌ ಉರುಳುತ್ತಿದ್ದರೂ, ದೃಢವಾಗಿ ನಿಂತು ತಾಳ್ಮೆಯ ಇನಿಂಗ್ಸ್‌ ಕಟ್ಟಿದ್ದು ಪ್ರಿಯಾಂಕ್‌ ಪಾಂಚಾಲ್‌. ಅವರಿಗೆ ಕೆ.ಎಸ್‌.ಭರತ್ ಉತ್ತಮ ಸಾಥ್‌ ನೀಡಿದರು. ಇವರು 152 ಎಸೆತಗಳಲ್ಲಿ 117 ರನ್‌ ಕಲೆಹಾಕಿದರು.

ಪಾಂಚಾಲ್‌ ವಿಕೆಟ್‌ ಪಡೆದ ಸೀನ್‌ ಸೋಲಿಯಾ ಈ ಜತೆಯಾಟ ಮುರಿದರು. 238 ನಿಮಿಷ ಕ್ರಿಸ್‌ನಲ್ಲಿದ್ದ ಅವರು 148 ಎಸೆತಗಳಲ್ಲಿ 87 ರನ್‌ (4x12, 6x2) ಕಲೆಹಾಕಿದರು.

ಶಾರ್ದೂಲ್‌ ಠಾಕೂರ್‌ (25 ರನ್‌, 57ಎ, 4x4) ಕೂಡ ಬೇಗ ಔಟಾದರು. ದಿನದಾಟದ ಅಂತ್ಯಕ್ಕೆ ಭರತ್‌ (74 ರನ್‌, 104ಎ, 4x10) ಹಾಗೂ ರಾಹುಲ್‌ ಚಾಹರ್ (4 ರನ್‌, 14ಎ,4x1)
ಕ್ರೀಸ್‌ನಲ್ಲಿದ್ದರು.

ಕಾಡಿದ ಮಳೆ: ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟ ಮಳೆಯಿಂದ ರದ್ದುಗೊಂಡಿತ್ತು. 2ನೇ ದಿನವಾದ ಶುಕ್ರವಾರವೂ ಆಗಾಗ ಮಳೆ ಕಾಡಿತು. ಇದರಿಂದ 66 ಓವರ್‌ಗಳ ಆಟವಷ್ಟೇ ನಡೆಯಿತು.

ಸಂಕ್ಷಿಪ್ತ ಸ್ಕೋರ್‌

ಮೊದಲ ಇನಿಂಗ್ಸ್‌: ಭಾರತ 66 ಓವರ್‌ಗಳಲ್ಲಿ 6 ವಿಕೆಟ್‌ಗೆ 229 ಪ್ರಿಯಾಂಕ್‌ ಪಾಂಚಾಲ್ 87, ಕೆ.ಎಸ್‌.ಭರತ್‌ ಬ್ಯಾಟಿಂಗ್ 74ರನ್‌, ಲೋಗಾನ್‌ ಬೀಕ್ 39ಕ್ಕೆ2, ಜಾಕೋಬ್‌ ಡೆಫಿ 55ಕ್ಕೆ 2.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.