
ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
–ಪಿಟಿಐ ಚಿತ್ರ
ವಡೋದರ: ಪೂರ್ಣಸಾಮರ್ಥ್ಯದ ಭಾರತ ತಂಡ, ಭಾನುವಾರ ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಹೊಸರೂಪದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಅನುಭವಿ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಮೋಘ ಲಯದಲ್ಲಿರುವುದು ಭಾರತಕ್ಕೆ ನೆರವಾಗುವ ನಿರೀಕ್ಷೆಯಿದೆ.
ಟಿ20 ವಿಶ್ವಕಪ್‌ಗೆ ಇನ್ನು ಒಂದು ತಿಂಗಳೂ ಇಲ್ಲ. ಎಲ್ಲರ ಗಮನ ಅದರ ಕಡೆ ಇದೆ. ಆದರೆ ಮುಂದಿನ ಏಳು ದಿನಗಳ ಒಳಗೆ ನಡೆಯುವ ಮೂರು ಏಕದಿನ ಪಂದ್ಯಗಳಲ್ಲಿ ಭಾರತದ ದಿಗ್ಗಜರಿಬ್ಬರ ಆಟದ ಮೇಲೂ ಕುತೂಹಲ ನೆಟ್ಟಿದೆ. ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲೂ ಈ ಸೂಪರ್‌ಸ್ಟಾರ್ ಆಟಗಾರರು ರನ್‌ಗಳನ್ನು ಹರಿಸಿದ್ದಾರೆ.
ಗಾಯದ ಸಮಸ್ಯೆ ಮತ್ತು ಕಳಪೆ ಫಾರ್ಮ್ ಕಾರಣ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಅವರ ನಿರ್ವಹಣೆಯ ಮೇಲೂ ಗಮನ ಇದೆ. ಕಳೆದ ವರ್ಷದ ಕೊನೆಯಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲೂ ಹೆಚ್ಚಿನ ಪಂದ್ಯ ಕಳೆದುಕೊಂಡಿದ್ದರು.
ಗಿಲ್ ಆಡಲಿರುವ ಕಾರಣ ಯಶಸ್ವಿ ಜೈಸ್ವಾಲ್ ಅವರು ಅಗ್ರ ಸರದಿಯಲ್ಲಿ ಸ್ಥಾನ ಕಳೆದುಕೊಳ್ಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಕೊನೆಯ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಗಾಯದಿಂದ ಚೇತರಿಸಿರುವ ಉಪ ನಾಯಕ ಶ್ರೇಯಸ್ ಅಯ್ಯರ್ ಸಹ ತಂಡಕ್ಕೆ ಮರಳಿದ್ದು, ತಮ್ಮ ನೆಚ್ಚಿನ ನಾಲ್ಕನೇ ಕ್ರಮಾಂಕಕ್ಕೆ ಹಿಂತಿರುಗಲಿದ್ದಾರೆ. 31 ವರ್ಷದ ಅಯ್ಯರ್ ಅನುಪಸ್ಥಿತಿಯ ವೇಳೆ ನಡೆದ ಪ್ರಯೋಗಗಳು ನಿರೀಕ್ಷಿತ ಫಲ ನೀಡಿರಲಿಲ್ಲ.
ಕೆ.ಎಲ್.ರಾಹುಲ್ ಅವರು ಕೆಳಕ್ರಮಾಂಕದಲ್ಲಿ ಆಡುವ ಜೊತೆಗೆ, ಕೀಪಿಂಗ್ ಸಹ ನಿರ್ವಹಿಸುವ ಕಾರಣ ರಿಷಭ್ ಪಂತ್‌ಗೆ ಅವಕಾಶ ಕಷ್ಟ. ಏಕದಿನ ಮಾದರಿಯಲ್ಲಿ ಅವರು ಎರಡನೇ ಆಯ್ಕೆಯ ಕೀಪರ್ ಪಾತ್ರ ನಿಭಾಯಿಸುವಂತಾಗಿದೆ.
ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರು ಈ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ವೇಗದ ವಿಭಾಗದ ನಿರ್ವಹಣೆ ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ ಕೃಷ್ಣ ಹೆಗಲೇರಿದೆ.
ಮೊದಲ ಪಂದ್ಯ
ಇದು ಕೋತಂಬಿಯಲ್ಲಿರುವ ಬರೋಡಾ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ವಿಭಾಗದ ಮೊದಲ ಅಂತರರಾಷ್ಟ್ರೀಯ ಪಂದ್ಯ. ಇದಕ್ಕೆ ಮೊದಲು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮಹಿಳಾ ಏಕದಿನ ಸರಣಿಗೆ ಈ ಕ್ರೀಡಾಂಗಣ ಆತಿಥ್ಯ ವಹಿಸಿತ್ತು.
ಅವಕಾಶ:
ಈ ಸರಣಿಯು ನ್ಯೂಜಿಲೆಂಡ್ ತಂಡಕ್ಕೆ ಹೊಸ ಮತ್ತು ಎರಡನೇ ಹಂತದ ಆಟಗಾರರನ್ನು ಪರೀಕ್ಷೆಗೊಡ್ಡಲು ಒಳ್ಳೆಯ ಅವಕಾಶ ಒದಗಿಸಿದೆ. ಈ ಹಿಂದೆ ಟೆಸ್ಟ್ ಸರಣಿಯ ವೇಳೆಯೂ ಕಿವೀಸ್ ಪಡೆ ಕೆಲವು ಹೊಸ ಆಟಗಾರರೊಂದಿಗೆ ಬಂದು 3–0 ಜಯ ಸಾಧಿಸಿತ್ತು.
ಈ ತಂಡದಲ್ಲಿ ಅಗ್ರ ಪಂಕ್ತಿಯ ಕೆಲವು ಆಟಗಾರರು ಆಡುತ್ತಿಲ್ಲ. ಮಿಚೆಲ್ ಸ್ಯಾಂಟನರ್ ತೊಡೆಯ ನೋವಿನಿಂದ ಸ್ಥಾನ ಪಡೆದಿಲ್ಲ. ಮಾಜಿ ನಾಯಕ ಕೇನ್ ವಿಲಿಯಮ್ಸನ್ ಎಸ್‌ಎ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ. ಟಾಮ್ ಲೇಥಮ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಲ್‌ರೌಂಡರ್ ರಚಿನ್ ರವೀಂದ್ರ ಮತ್ತು ಮಧ್ಯಮ ವೇಗಿ ಜೇಕಬ್ ಡಫಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಸ್ಯಾಂಟನರ್ ಗೈರಿನಲ್ಲಿ ಮೈಕೆಲ್ ಬ್ರೇಸ್‌ವೆಲ್ ತಂಡದ ನೇತೃತ್ವ ವಹಿಸಿದ್ದಾರೆ. ತಂಡವು ಎತ್ತರದ ಆಳು, ವೇಗದ ಬೌಲರ್ ಕೈಲ್ ಜೇಮಿಸನ್ ಮತ್ತು 23 ವರ್ಷದ ಲೆಗ್ ಸ್ಪಿನ್ನರ್ ಆದಿತ್ಯ ಆಶೋಕ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಸ್ಯಾಂಟನರ್ ಸ್ಥಾನಕ್ಕೆ ಜೇಡನ್ ಲೆನಾಕ್ಸ್ ಅವಕಾಶ ಪಡೆದಿದ್ದಾರೆ.
ಸಾಕಷ್ಟು ಹೊಸಮುಖಗಳಿದ್ದರೂ, ತಂಡದ ಬ್ಯಾಟಿಂಗ್ ಬಲವಾಗಿದೆ. ಡೇವನ್ ಕಾನ್ವೆ, ಡೇರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ವಿಲ್ ಯಂಗ್ ಮತ್ತು ಗ್ಲೆನ್ ಫಿಲಿಪ್ಸ್ ಅವರು ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ.
ತಂಡಗಳು:
ಭಾರತ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ರಿಷಭ್ ಪಂತ್ (ಇಬ್ಬರೂ ವಿಕೆಟ್ ಕೀಪರ್ಸ್), ರವೀಂದ್ರ ಜಡೇಜ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
ನ್ಯೂಜಿಲೆಂಡ್: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಡೆವಾನ್ ಕಾನ್ವೆ, ಮಿಚೆಲ್ ಹೇ (ಇಬ್ಬರೂ ವಿಕೆಟ್ ಕೀಪರ್ಸ್), ನಿಕ್ ಕೆಲ್ಲಿ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಜೋಶ್ ಕಾರ್ಕ್‌ಸನ್, ಝಾಕ್ ಪೌಲ್ಕ್ಸ್, ಡೆರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಆದಿತ್ಯ ಅಶೋಕ್, ಕ್ರಿಸ್ಟಿಯಾನ್ ಕ್ಲಾರ್ಕ್, ಕೈಲ್ ಜೇಮಿಸನ್, ಜೇಡನ್ ಲೆನಾಕ್ಸ್ ಮತ್ತು ಮೈಕೆಲ್ ರೇ.
ಪಂದ್ಯ ಆರಂಭ: ಮಧ್ಯಾಹ್ನ 1.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.