ಸಿಡ್ನಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ನಿಕಟವಾಗಿ ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ಶುಕ್ರವಾರ ಹೇಳಿದೆ.
ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರರು ಮತ್ತು ಕೋಚ್‌ಗಳು ಸೇರಿ 20 ಮಂದಿ ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮತ್ತು ಪಾಕಿಸ್ತಾನದ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಭಾಗವಹಿಸಿದ್ದಾರೆ.
ಸಮೀಪದ ರಾಜ್ಯಗಳಲ್ಲಿ ಪಾಕ್ ದಾಳಿ ಯತ್ನದ ನಡುವೆ ಸೈರನ್ ಮೊಳಗಿದ್ದರಿಂದ ಗುರುವಾರ ರಾತ್ರಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ರಿಕೆಟ್ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದರ ಬೆನ್ನಲ್ಲೇ, ಐಪಿಎಲ್ ಪಂದ್ಯಾವಳಿ ಮೇಲೆ ಅನಿಶ್ಚಿತತೆ ಮನೆ ಮಾಡಿದೆ. ಹೀಗಾಗಿ, ಐಪಿಎಲ್ ಮುಂದುವರಿಸುವ ಬಗ್ಗೆ ಬಿಸಿಸಿಐ ಪರಿಶೀಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಾಕಿಸ್ತಾನದ ದಾಳಿ ಯತ್ನಕ್ಕೆ ಪ್ರತ್ಯುತ್ತರವಾಗಿ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ರಾವಲ್ಪಿಂಡಿ ಸ್ಟೇಡಿಯಂ ಸಹ ಹಾನಿಗೊಳಗಾಗಿದೆ. ಅದರ ಬೆನ್ನಲ್ಲೇ ಆಟಗಾರರ ಸುರಕ್ಷತೆ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ನ ಉಳಿದ 8 ಪಂದ್ಯಗಳನ್ನು ಪಾಕಿಸ್ತಾನ ದುಬೈಗೆ ಶಿಫ್ಟ್ ಮಾಡಿದೆ.
ಭಾರತ ಮತ್ತು ಪಾಕಿಸ್ತಾನದ ಪರಿಸ್ಥಿತಿ ಕುರಿತಂತೆ ನಮ್ಮ ಅವಲೋಕನವನ್ನು ಮುಂದುವರಿಸುತ್ತಿದ್ದೇವೆ. ಆಸ್ಟ್ರೇಲಿಯಾ ಸರ್ಕಾರದಿಂದ ನಿರಂತರ ಸಲಹೆ ಪಡೆಯುತ್ತಿದ್ದೇವೆ, ಬಿಸಿಸಿಐ, ಪಿಸಿಬಿ ಮತ್ತು ಸ್ಥಳೀಯ ಸರ್ಕಾರಗಳಿಂದ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ. ಅಲ್ಲದೆ, ನಮ್ಮ ದೇಶದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಜೊತೆಗೂ ಸಂಪರ್ಕದಲ್ಲಿರುವುದಾಗಿ ಹೇಳಿದೆ.
ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್ ಮತ್ತು ತರಬೇತುದಾರರಾದ ರಿಕಿ ಪಾಂಟಿಂಗ್ ಮತ್ತು ಬ್ರಾಡ್ ಹಡಿನ್ ಐಪಿಎಲ್‌ನಲ್ಲಿ ಭಾಗಿಯಾಗಿದ್ದರೆ, ಡೇವಿಡ್ ವಾರ್ನರ್, ವೇಗಿಗಳಾದ ಬೆನ್ ದ್ವಾರ್ಶುಯಿಸ್, ರಿಲೇ ಮೆರೆಡಿತ್ ಮತ್ತು ಸೀನ್ ಅಬೋಟ್ ಪಿಎಸ್‌ಎಲ್‌ನಲ್ಲಿ ಆಡುತ್ತಿದ್ದಾರೆ.
ಕೆಲ ಮಾಧ್ಯಮ ವರದಿಗಳ ಪ್ರಕಾರ, ಆಸ್ಟ್ರೇಲಿಯಾದ ಆಟಗಾರರು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಸಾಧ್ಯವಾದಷ್ಟು ಬೇಗ ಭಾರತವನ್ನು ತೊರೆಯಲು ಉತ್ಸುಕರಾಗಿದ್ದಾರೆ.
ಐಪಿಎಲ್ ಲೀಗ್ ಅನ್ನು ಮುಂದುವರಿಸಬೇಕೆ? ಎಂಬ ಬಗ್ಗೆ ನಿರ್ಧರಿಸಲು ಸರ್ಕಾರದ ನಿರ್ದೇಶನಗಳಿಗಾಗಿ ಕಾಯಲಾಗುತ್ತಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಗುರುವಾರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.