ADVERTISEMENT

ಭಾರತಕ್ಕೆ ‘ಹ್ಯಾಟ್ರಿಕ್‌’ ಚಾಂಪಿಯನ್‌ಷಿಪ್‌: ಅಗ್ರಪಟ್ಟ ಕಾಯ್ದುಕೊಂಡ ಕೊಹ್ಲಿ ಬಳಗ

ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌: ಅಗ್ರಪಟ್ಟ ಕಾಯ್ದುಕೊಂಡ ಕೊಹ್ಲಿ ಬಳಗ

ಪಿಟಿಐ
Published 1 ಏಪ್ರಿಲ್ 2019, 20:13 IST
Last Updated 1 ಏಪ್ರಿಲ್ 2019, 20:13 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ದುಬೈ: ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಪಟ್ಟ ಕಾಯ್ದುಕೊಂಡಿರುವ ಭಾರತ ತಂಡ, ಸತತ ಮೂರನೇ ಬಾರಿ ಟೆಸ್ಟ್ ಚಾಂಪಿಯನ್‌ಷಿಪ್‌ ಕಿರೀಟ ಮುಡಿಗೇರಿಸಿಕೊಂಡಿದೆ.

ಟೆಸ್ಟ್‌ ತಂಡಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳಿಗೆ ಐಸಿಸಿ ಪ್ರತಿ ವರ್ಷ ಇದನ್ನು ನೀಡುತ್ತದೆ. ಚಾಂಪಿಯನ್‌ಷಿ‍ಪ್ ತಂಡಕ್ಕೆ ರಾಜದಂಡದ ಜೊತೆಗೆ10 ಲಕ್ಷ ಡಾಲರ್‌ (₹ 6.92 ಕೋಟಿ) ನಗದು ಮೊತ್ತ ನೀಡಲಾಗುತ್ತದೆ. ಏಪ್ರಿಲ್‌ 1ರವರೆಗಿನ ತಂಡಗಳ ಸಾಧನೆ ಪರಿಗಣಿಸಿ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಲಾಗಿದೆ.

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್‌ ಸರಣಿ ಗೆಲ್ಲುವ ಮೂಲಕ 116 ಪಾಯಿಂಟ್‌ಗಳೊಂದಿಗೆ ಭಾರತ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್‌ (108) ದಕ್ಷಿಣ ಆಫ್ರಿಕಾ (105 ಹಾಗೂ ಆಸ್ಟ್ರೇಲಿಯಾ (104 ಪಾಯಿಂಟ್‌ ಪಡೆಯುವ ಮೂಲಕ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದೆ.

ADVERTISEMENT

ಹೆಮ್ಮೆಯ ವಿಚಾರ: ‘ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ’ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ತಂಡವು ಎಲ್ಲ ಮಾದರಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದೀಗ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವುದು ಹೆಚ್ಚಿನ ಖುಷಿ ನೀಡಿದೆ. ಟೆಸ್ಟ್‌ ಕ್ರಿಕೆಟ್‌ನ ಪ್ರಾಮುಖ್ಯತೆ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಈ ಮಾದರಿಯ ಕ್ರಿಕೆಟ್‌ನಲ್ಲಿ ಎಷ್ಟರ ಮಟ್ಟಿಗೆ ಉತ್ತಮ ಪ್ರದರ್ಶನ ನೀಡಬಹುದು ಎಂಬುದರ ಬಗ್ಗೆ ಗಮನಹರಿಸುತ್ತೇವೆ’ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಉತ್ತಮ ಪ್ರದರ್ಶನ: ಕಳೆದ ವರ್ಷದ ನಿರಂತರ ಉತ್ತಮ ಪ್ರದರ್ಶನ ನೀಡುವ ಮೂಲಕ ನ್ಯೂಜಿಲೆಂಡ್‌ ತಂಡವು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೇರಿದೆ. ಕೇನ್‌ ವಿಲಿಯಮ್ಸನ್‌ ನೇತೃತ್ವದ ತಂಡಕ್ಕೆ 5 ಲಕ್ಷ ಡಾಲರ್‌ (₹3.46 ಕೋಟಿ) ನಗದು ಮೊತ್ತ ದೊರೆಯಲಿದೆ.

‘ತಂಡವು ಅತ್ಯದ್ಭುತ ಸಾಧನೆ ಮಾಡಿದೆ. ಅತ್ಯಂತ ಕಠಿಣ ಪರಿಶ್ರಮದಿಂದ ಮತ್ತೆ ಈ ಸಾಧನೆ ಮಾಡಿದ್ದೇವೆ. ಮೈದಾನದಲ್ಲಿ ಆಡುವ 11 ಮಂದಿ ಆಟಗಾರರು ಮಾತ್ರವಲ್ಲದೇ, ಇಡೀ ತಂಡ, ಇತರೆ ಸಿಬ್ಬಂದಿಗಳ ನೆರವಿನಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ನಾಯಕ ವಿಲಿಯಮ್ಸನ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಎರಡು ವರ್ಷಗಳಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದ ದಕ್ಷಿಣ ಆಫ್ರಿಕಾವು ಈ ಸಲ ಮೂರನೇ ಸ್ಥಾನಕ್ಕೆ ಇಳಿದಿದ್ದು, 2 ಲಕ್ಷ ಡಾಲರ್‌ (₹1.38 ಕೋಟಿ) ನಗದು ಮೊತ್ತ ಪಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.