ADVERTISEMENT

ದಕ್ಷಿಣ ಆಫ್ರಿಕಾ ಆಟಗಾರರಿಗೆ ಕೊರೊನಾ ಸೋಂಕಿಲ್ಲ: ಶುಯೀಬ್‌ ಮಾಂಜ್ರಾ

ಪಿಟಿಐ
Published 3 ಏಪ್ರಿಲ್ 2020, 19:30 IST
Last Updated 3 ಏಪ್ರಿಲ್ 2020, 19:30 IST
ದಕ್ಷಿಣ ಆಫ್ರಿಕಾ ತಂಡದ ಆಟಗಾರರು –ಸಂಗ್ರಹ ಚಿತ್ರ 
ದಕ್ಷಿಣ ಆಫ್ರಿಕಾ ತಂಡದ ಆಟಗಾರರು –ಸಂಗ್ರಹ ಚಿತ್ರ    

ಜೊಹಾನ್ಸ್‌ಬರ್ಗ್‌: ‘ಭಾರತ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಹಿಂತಿರುಗಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಆಟಗಾರರಿಗೆ ಕೊರೊನಾ ಸೋಂಕು ತಗುಲಿಲ್ಲ’ ಎಂದು ತಂಡದ ಮುಖ್ಯ ವೈದ್ಯಾಧಿಕಾರಿ ಶುಯೀಬ್‌ ಮಾಂಜ್ರಾ ಅವರು ಶುಕ್ರವಾರ ಹೇಳಿದ್ದಾರೆ.

ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಕ್ವಿಂಟನ್‌ ಡಿ ಕಾಕ್‌ ಬಳಗವು ಹೋದ ತಿಂಗಳು ಭಾರತಕ್ಕೆ ಬಂದಿತ್ತು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ತಂಡವು ಎರಡನೇ ಪಂದ್ಯ ನಿಗದಿಯಾಗಿದ್ದ ಲಖನೌಗೆ ಪ್ರಯಾಣ ಬೆಳೆಸಿತ್ತು. ಕೊರೊನಾ ಭೀತಿಯಿಂದಾಗಿ ಸರಣಿ ರದ್ದಾದ ಕಾರಣ ಹರಿಣಗಳ ತಂಡದ ಆಟಗಾರರು ಕೋಲ್ಕತ್ತಕ್ಕೆ ಬಂದು ಅಲ್ಲಿಂದ ದುಬೈ ಮಾರ್ಗವಾಗಿ ತವರಿಗೆ ಹಿಂದಿರುಗಿದ್ದರು.

ಮಾರ್ಚ್‌ 18ರಂದ ದಕ್ಷಿಣ ಆಫ್ರಿಕಾ ತಲುಪಿದ್ದ ಎಲ್ಲಾ ಆಟಗಾರರು 14 ದಿನಗಳ ಕಾಲ ಸ್ವಯಂ ಪ್ರತ್ಯೇಕ ವಾಸದಲ್ಲಿದ್ದರು.

ADVERTISEMENT

‘ಎಲ್ಲಾ ಆಟಗಾರರು ಸುರಕ್ಷಿತವಾಗಿದ್ದಾರೆ. ಕೆಲ ಆಟಗಾರರ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ’ ಎಂದು ಮಾಂಜ್ರಾ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್‌ (ಸಿಎಸ್‌ಎ), ಈಗ ಆಟಗಾರರ ಫಿಟ್‌ನೆಸ್‌ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ತರಬೇತಿ ಕಾರ್ಯಕ್ರಮದ ಪಟ್ಟಿಯನ್ನು ಫಿಟ್‌ನೆಸ್‌ ಟ್ರೈನರ್‌ ಟುಮಿ ಮಸೆಕೆಲಾ ಅವರು ಈಗಾಗಲೇ ಆಟಗಾರರಿಗೆಲ್ಲಾ ರವಾನಿಸಿದ್ದಾರೆ.

‘ಆಟಗಾರರು ವಿಶ್ರಾಂತಿ ಪಡೆಯುವ ಜೊತೆಗೆ‌‌‌‌‌‌‌‌‌‌‌‌‌‌‌ಸ್ಟ್ರೆಂಥಿಂಗ್‌ ವ್ಯಾಯಾಮಗಳನ್ನೂ ಮಾಡಬೇಕಿದೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವುದಕ್ಕಾಗಿ ಕಾರ್ಡಿಯೊ, ಸೈಕ್ಲಿಂಗ್‌ ಮತ್ತು ಈಜಿನಲ್ಲಿ ತೊಡಗಿಕೊಳ್ಳಬೇಕಿದೆ’ ಎಂದು ಮಸೆಕೆಲಾ ಹೇಳಿದ್ದಾರೆ.

ಜೂನ್‌ವರೆಗೆ ದಕ್ಷಿಣ ಆಫ್ರಿಕಾ ತಂಡವು ಯಾವುದೇ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.