ADVERTISEMENT

ಭಾರತದಲ್ಲಿ ಟೆಸ್ಟ್ ಗೆದ್ದ ಆಫ್ರಿಕಾ: ಉರುಳಿದ ಆತಿಥೇಯರು; ಅರಳಿದ ಪ್ರವಾಸಿಗರು!

15 ವರ್ಷಗಳ ನಂತರ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ; ಮನ ಗೆದ್ದ ತೆಂಬಾ ಹೋರಾಟ

ಮಧು ಜವಳಿ
Published 17 ನವೆಂಬರ್ 2025, 0:29 IST
Last Updated 17 ನವೆಂಬರ್ 2025, 0:29 IST
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಭಾನುವಾರ ಭಾರತ ತಂಡದ ಎದುರು ಟೆಸ್ಟ್ ಕ್ರಿಕೆಟ್ ಪಂದ್ಯ ಜಯಿಸಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಸಂಭ್ರಮ   –ಎಎಫ್‌ಪಿ ಚಿತ್ರ
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಭಾನುವಾರ ಭಾರತ ತಂಡದ ಎದುರು ಟೆಸ್ಟ್ ಕ್ರಿಕೆಟ್ ಪಂದ್ಯ ಜಯಿಸಿದ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಸಂಭ್ರಮ   –ಎಎಫ್‌ಪಿ ಚಿತ್ರ   

ಕೋಲ್ಕತ್ತ: ಈಡನ್ ಗಾರ್ಡನ್‌ನಲ್ಲಿ ಭಾನುವಾರ  ಕೇಶವ್ ಮಹಾರಾಜ್ ಎಸೆತವನ್ನು ಆಡಲು ಯತ್ನಿಸಿದ ಮೊಹಮ್ಮದ್ ಸಿರಾಜ್ ಬ್ಯಾಟ್‌ ಅಂಚಿಗೆ ಸವರಿದ ಚೆಂಡು ಸ್ಲಿಪ್‌ನಲ್ಲಿದ್ದ ಏಡನ್ ಮರ್ಕರಂ ಬೊಗಸೆಯಲ್ಲಿ ಬಂಧಿಯಾಯಿತು. ಆಗ ಕ್ರೀಡಾಂಗಣದಲ್ಲಿ ನೀರವ ಮೌನ ಆವರಿಸಿತು. ಕತ್ತುನೋವಿನಿಂದಾಗಿ ಶನಿವಾರವೇ ವಿಶ್ರಾಂತಿ ಕೋಣೆ ಸೇರಿದ್ದ ನಾಯಕ ಶುಭಮನ್ ಗಿಲ್ ಅವರು ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಸ್ತಬ್ಧವಾಯಿತು. 

15 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್ ಜಯಿಸಿದ ದಕ್ಷಿಣ ಆಫ್ರಿಕಾ ಆಟಗಾರರ ಸಂಭ್ರಮದ ಚಪ್ಪಾಳೆ, ಕೇಕೆಗಳಷ್ಟೇ ಪ್ರತಿಧ್ವನಿಸಿದವು. ಪ್ರವಾಸಿ ತಂಡವು ಎರಡು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು. 

ತೆಂಬಾ ಬವುಮಾ ಬಳಗವು ನೀಡಿದ್ದ 124 ರನ್‌ಗಳ ಗುರಿಯನ್ನು ಮುಟ್ಟುವ ಹಾದಿಯಲ್ಲಿ ಆತಿಥೇಯ ತಂಡವು 93 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿತು. 30 ರನ್‌ಗಳ ಸೋಲು ಅನುಭವಿಸಿತು.  ಬಲಗೈ ಆಫ್‌ಬ್ರೇಕ್ ಬೌಲರ್ ಸಿಮೊನ್  ಹಾರ್ಮರ್ (21ಕ್ಕೆ4) ಅವರ ದಾಳಿಗೆ ತತ್ತರಿಸಿತು. ಹಾರ್ಮರ್ ಮೊದಲ ಇನಿಂಗ್ಸ್‌ನಲ್ಲಿಯೂ 30ಕ್ಕೆ4 ವಿಕೆಟ್ ಗಳಿಸಿದ್ದರು. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ್ ಪಂದ್ಯದಲ್ಲಿ ಕೊನೆಯ ಎರಡು ವಿಕೆಟ್ ಕಬಳಿಸುವ ಮೂಲಕ ಸಂಭ್ರಮಿಸಿದರು. ಭಾರತದ ವಾಷಿಂಗ್ಟನ್ ಸುಂದರ್ (31 ರನ್) ಮಾತ್ರ ಒಂದಿಷ್ಟು ಹೋರಾಟ ತೋರಿದರು. ಆದರೆ ಉಳಿದ ವಿಕೆಟ್‌ಗಳು ‘ಇಸ್ಪಿಟ್‌ ಕಾರ್ಡ್‌ಗಳ ಮನೆ’ಯಂತೆ ಉರುಳಿದವು. ಮೊದಲ ಇನಿಂಗ್ಸ್‌ನಲ್ಲಿ ಕೆ.ಎಲ್. ರಾಹುಲ್ ಮತ್ತು ವಾಷಿಂಗ್ಟನ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ತೆಂಬಾ ಬವುಮಾ (59 ರನ್) ಮತ್ತು ಕಾರ್ಬಿನ್ ಬಾಷ್ ಅವರು ಪುಟ್ಟ ಜೊತೆಯಾಟಗಳೂ ದೊಡ್ಡ ಜಯಕ್ಕೆ ಹಾದಿ ಮಾಡಿಕೊಡಬಲ್ಲವು ಎಂಬುದನ್ನು ತೋರಿಸಿಕೊಟ್ಟ ಪಂದ್ಯ ಇದು. 

ADVERTISEMENT

ಆತಿಥೇಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 30 ರನ್‌ಗಳ ಮುನ್ನಡೆ ಸಾಧಿಸಿತ್ತು. ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ 93 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್‌ನಲ್ಲಿ ಲಂಗರು ಹಾಕಿದ್ದ ಬವುಮಾ ಮತ್ತು ಬಾಷ್ ಭಾನುವಾರ ಬೆಳಗಿನ ಅವಧಿಯಲ್ಲಿ ಜಿಗುಟುತನ ತೋರಿದರು. ಯರ್ರಾಬಿರ್ರಿ ತಿರುಗುತ್ತಿದ್ದ ಚೆಂಡನ್ನು ದಂಡಿಸಿ ಒಂದಿಷ್ಟು ರನ್ ಗಳಿಸಿದರು. ಅದರಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 53 ಓವರ್‌ಗಳಲ್ಲಿ 153 ರನ್ ಗಳಿಸಲು ಸಾಧ್ಯವಾಯಿತು. ನಾಯಕನಿಗೆ ತಕ್ಕ ಆಟವಾಡಿದ ತೆಂಬಾ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ಏಕೈಕ ಆಟಗಾರನಾದರು. 

ಹಂಗಾಮಿ ನಾಯಕ ರಿಷಭ್ ಪಂತ್ ಅವರು ಬೆಳಿಗ್ಗೆಯ ಅವಧಿಯಲ್ಲಿ ಎಲ್ಲ ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿ ಬೌಲಿಂಗ್ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ಕಣಕ್ಕಿಳಿದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಎಸೆತದಲ್ಲಿ ಬಾಷ್, ಕ್ಲೀನ್ ಬೌಲ್ಡ್ ಆಗುವ ಮೂಲಕ ಜೊತೆಯಾಟ ಮುರಿಯಿತು. ತಡವಾಗಿ ದಾಳಿಗಿಳಿದ ಸಿರಾಜ್ ಕೂಡ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಸತತ ಎರಡು ಓವರ್‌ಗಳಲ್ಲಿ ಉಳಿದೆರಡೂ ವಿಕೆಟ್‌ ಪಡೆದು ಇನಿಂಗ್ಸ್‌ಗೆ ತೆರೆಯೆಳೆದರು. ಐತಿಹಾಸಿಕ ಕ್ರೀಡಾಂಗಣದಲ್ಲಿ ಸೇರಿದ್ದ 35 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಕಲರವ ಮುಗಿಲುಮುಟ್ಟಿತ್ತು.

ಆದರೆ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡಿದ್ದ ಈ ಪಿಚ್‌ನಲ್ಲಿ ಸಾಧಾರಣ ಮೊತ್ತವೂ ಕಬ್ಬಿಣದ ಕಡಲೆಯೇ ಆಗಿತ್ತು. ಬ್ಯಾಟರ್ ಗಿಲ್ ಅವರಿಲ್ಲದೇ ತಂಡವು ಕಣಕ್ಕಿಳಿಯಿತು.  ಮೊದಲ ಓವರ್‌ನಲ್ಲಿ ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಅವರ ಕ್ಯಾಚ್ ಪಡೆದ ವಿಕೆಟ್‌ಕೀಪರ್ ಕೈಲ್ ವೆರೈನ್ ಸಂಭ್ರಮಿಸಿದರು. ಸ್ಕೋರ್‌ಬೋರ್ಡ್‌ನಲ್ಲಿ ಸೊನ್ನೆ ಇತ್ತು. ಪ್ರೇಕ್ಷಕರ ಗ್ಯಾಲರಿಯಲ್ಲಿ ನೀರವ ಮೌನ ಆವರಿಸಿತ್ತು. ಮೂರನೇ ಓವರ್‌ನಲ್ಲಿ ಮಾರ್ಕೋ ಹಾಕಿದ ಎಸೆತವನ್ನು ಆಡಲು ಯತ್ನಿಸಿದ ರಾಹುಲ್ ಬ್ಯಾಟ್‌ ಮೇಲಿನ ಅಂಚಿಗೆ ಬಡಿದ ಚೆಂಡು ವಿಕೆಟ್‌ಕೀಪರ್ ಕೈಗವಸುಗಳಲ್ಲಿ ಸೆರೆಯಾಯಿತು. 10 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡ ತಂಡ ಆತಂಕಕ್ಕೊಳಗಾಯಿತು. ಜುರೇಲ್ ಕೆಟ್ಟ ಹೊಡೆತವಾಡಿ ಔಟಾದರು. ಪಂತ್ ಬೌಲರ್‌ ಹಾರ್ಮರ್‌ಗೆ ಸುಲಭ ಕ್ಯಾಚ್ ಕೊಟ್ಟು ನಿರ್ಗಮಿಸಿದರು. ಇದರಿಂದ ಭಾರತದ ಸಂಕಷ್ಟ ಮತ್ತಷ್ಟು ಹೆಚ್ಚಿತು. ತಾಳ್ಮೆಯಿಂದ ಆಡಿ ಇನಿಂಗ್ಸ್‌ಗೆ ಬಲ ತುಂಬುವ ರವೀಂದ್ರ ಜಡೇಜ ಪ್ರಯತ್ನಕ್ಕೆ ಹಾರ್ಮರ್ ಅಡ್ಡಿಯಾದರು. ಅವರ ಎಸೆತವನ್ನು ಸ್ವೀಪ್ ಮಾಡುವ ಭರದಲ್ಲಿ ಜಡೇಜ (18 ರನ್)ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. 

ವಾಷಿಂಗ್ಟನ್ ಅವರು ಏಡನ್ ಮರ್ಕರಂ ಎಸೆತದಲ್ಲಿ ಹಾರ್ಮರ್‌ಗೆ ಕ್ಯಾಚಿತ್ತರು.  ಅಕ್ಷರ್ ಪಟೇಲ್ (26 ರನ್) ಹೋರಾಟಕ್ಕೆ ಜೊತೆ ನೀಡುವವರ ಕೊರತೆ ಕಾಡಿತು. 

ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಜಯಸಾಧಿಸಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರೊಂದಿಗೆ ಭಾರತದ ಜಸ್‌ಪ್ರೀತ್ ಬೂಮ್ರಾ ಆತ್ಮೀಯ ನಡೆ   –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.