ADVERTISEMENT

ಭಾರತದ ಎದುರಿನ ಸರಣಿಗೆ ಸ್ಟಾರ್ಕ್‌ ಇಲ್ಲ

ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಿಗೆ ಅಲಭ್ಯ

ಪಿಟಿಐ
Published 7 ಫೆಬ್ರುವರಿ 2019, 17:47 IST
Last Updated 7 ಫೆಬ್ರುವರಿ 2019, 17:47 IST
ಮಿಷೆಲ್‌ ಸ್ಟಾರ್ಕ್‌
ಮಿಷೆಲ್‌ ಸ್ಟಾರ್ಕ್‌   

ಮೆಲ್ಬರ್ನ್: ಗಾಯದಿಂದ ಬಳಲುತ್ತಿರುವ ಆಸ್ಟ್ರೇಲಿಯಾದ ವೇಗದ ಬೌಲರ್‌ ಮಿಷೆಲ್‌ ಸ್ಟಾರ್ಕ್‌, ಭಾರತದ ಎದುರಿನ ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಿಗೆ ಅಲಭ್ಯರಾಗಿದ್ದಾರೆ.

ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಗುರುವಾರ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಆ್ಯರನ್‌ ಫಿಂಚ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ.

ಆಲ್‌ರೌಂಡರ್‌ ಮಿಷೆಲ್‌ ಮಾರ್ಷ್‌ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಮೂರು ದಿನಗಳ ಹಿಂದೆ ಕ್ಯಾನ್‌ಬೆರಾದಲ್ಲಿ ನಡೆದಿದ್ದ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ ಪಂದ್ಯದ ವೇಳೆ ಸ್ಟಾರ್ಕ್‌ ಗಾಯಗೊಂಡಿದ್ದರು.

ADVERTISEMENT

‘ಸ್ಟಾರ್ಕ್‌ ಅವರ ಎಡ ಪಕ್ಕೆಗೆ ಗಾಯವಾಗಿರುವುದು ಸ್ಕ್ಯಾನಿಂಗ್‌ನಿಂದ ಗೊತ್ತಾಗಿದೆ. ಅವರಿಗೆ ಈಗ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಭಾರತದ ಎದುರಿನ ಸರಣಿಯಲ್ಲಿ ಆಡುತ್ತಿಲ್ಲ. ಬೆನ್ನು ನೋವಿನಿಂದ ಬಳಲುತ್ತಿರುವ ಜೋಶ್‌ ಹ್ಯಾಜಲ್‌ವುಡ್‌ ಕೂಡಾ ಸರಣಿಗೆ ಅಲಭ್ಯರಾಗಿದ್ದಾರೆ’ ಎಂದು ಆಸ್ಟ್ರೇಲಿಯಾ ತಂಡದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಟ್ರೆವೊರ್‌ ಹಾನ್ಸ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸದ ವೇಳೆ ಎರಡು ಟ್ವೆಂಟಿ–20 ಮತ್ತು ಐದು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಟ್ವೆಂಟಿ–20 ಸರಣಿಯ ಮೊದಲ ಪಂದ್ಯ ಫೆಬ್ರುವರಿ 24ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಎರಡನೇ ಪಂದ್ಯ 27ರಂದು ಬೆಂಗಳೂರಿನಲ್ಲಿ ನಿಗದಿಯಾಗಿದೆ.

ಏಕದಿನ ಸರಣಿಯ ಪಂದ್ಯಗಳು ಹೈದರಾಬಾದ್‌ (ಮಾರ್ಚ್‌ 2), ನಾಗಪುರ (ಮಾರ್ಚ್‌ 5), ರಾಂಚಿ (ಮಾರ್ಚ್‌ 8), ಮೊಹಾಲಿ (ಮಾರ್ಚ್‌ 10) ಮತ್ತು ನವದೆಹಲಿಯಲ್ಲಿ (ಮಾರ್ಚ್‌ 13) ಆಯೋಜನೆಯಾಗಿವೆ.

ಏಕದಿನ ಮತ್ತು ಟ್ವೆಂಟಿ–20 ತಂಡ ಇಂತಿದೆ: ಆ್ಯರನ್‌ ಫಿಂಚ್‌ (ನಾಯಕ), ಪ್ಯಾಟ್‌ ಕಮಿನ್ಸ್‌, ಅಲೆಕ್ಸ್‌ ಕ್ಯಾರಿ, ಜೇಸನ್‌ ಬೆಹ್ರನ್‌ಡ್ರಾಫ್‌, ನೇಥನ್‌ ಕೌಲ್ಟರ್‌ನೈಲ್‌, ಪೀಟರ್‌ ಹ್ಯಾಂಡ್ಸ್‌ಕಂಬ್‌, ಉಸ್ಮಾನ್‌ ಖ್ವಾಜಾ, ನೇಥನ್‌ ಲಯನ್‌, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಜೈ ರಿಚರ್ಡ್‌ಸನ್‌, ಕೇನ್‌ ರಿಚರ್ಡ್‌ಸನ್‌, ಡಿ ಆರ್ಸಿ ಶಾರ್ಟ್‌, ಮಾರ್ಕಸ್‌ ಸ್ಟೊಯಿನಿಸ್‌, ಆ್ಯಷ್ಟನ್‌ ಟರ್ನರ್‌ ಮತ್ತು ಆ್ಯಡಮ್‌ ಜಂಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.