ADVERTISEMENT

ಏಷ್ಯಾಕಪ್‌ ಕ್ರಿಕೆಟ್‌ಗೆ ಆಯ್ಕೆ: ರಾಜ್ಯದ ಮಯಂಕ್‌ಗೆ ಅವಕಾಶ ಸಾಧ್ಯತೆ

ಪಿಟಿಐ
Published 31 ಆಗಸ್ಟ್ 2018, 15:54 IST
Last Updated 31 ಆಗಸ್ಟ್ 2018, 15:54 IST
ಮಯಂಕ್ ಅಗರವಾಲ್
ಮಯಂಕ್ ಅಗರವಾಲ್   

ಮುಂಬೈ : ಮುಂಬರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಗೆ ಶನಿವಾರ ಭಾರತ ತಂಡದ ಆಯ್ಕೆ ನಡೆಯಲಿದ್ದು ಕರ್ನಾಟಕದ ಮಯಂಕ್‌ ಅಗರವಾಲ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ.

ಮಯಂಕ್‌ ಅವರು ದೇಶಿ ಟೂರ್ನಿಗಳಲ್ಲಿ ಕರ್ನಾಟಕದ ಪರ ಅಮೋಘ ಆಟ ಆಡಿದ್ದರು. ಇತ್ತೀಚೆಗೆ ಮುಗಿದಿದ್ದ ಚತುಷ್ಕೋನ ಕ್ರಿಕೆಟ್‌ ಸರಣಿಯಲ್ಲಿ ಭಾರತ ‘ಬಿ’ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮುಂದಿನ ಮೂರು ತಿಂಗಳಲ್ಲಿ ಭಾರತ ತಂಡ ವೆಸ್ಟ್‌ ಇಂಡೀಸ್‌ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಕ್ರಮವಾಗಿ ಎರಡು ಮತ್ತು ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡುವ ಸಂಭವವಿದೆ.

ADVERTISEMENT

ಒಂದೊಮ್ಮೆ ಕೊಹ್ಲಿಗೆ ವಿಶ್ರಾಂತಿ ನೀಡಿದರೆ ನಾಯಕತ್ವದ ಜವಾಬ್ದಾರಿ ರೋಹಿತ್‌ ಶರ್ಮಾ ಹೆಗಲಿಗೆ ಬೀಳಲಿದೆ. ಆರಂಭಿಕರ ಸ್ಥಾನದಲ್ಲಿ ರೋಹಿತ್‌ ಮತ್ತು ಶಿಖರ್‌ ಧವನ್‌ಗೆ ಅವಕಾಶ ಸಿಗುವುದು ನಿಶ್ಚಿತ. ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರ ಹಾದಿಯೂ ಸುಗಮ ಎನ್ನಲಾಗಿದೆ. ರಾಜ್ಯದ ಮತ್ತೊಬ್ಬ ಆಟಗಾರ ಮನೀಷ್‌ ಪಾಂಡೆ ಅವರಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಮನೀಷ್‌ ಅವರು ಚತುಷ್ಕೋನ ಸರಣಿಯಲ್ಲಿ ಭಾರತ ‘ಬಿ’ ತಂಡವನ್ನು ಪ್ರಶಸ್ತಿಯೆಡೆಗೆ ಮುನ್ನಡೆಸಿದ್ದರು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಅವರು ನಾಲ್ಕು ಪಂದ್ಯಗಳಿಂದ 306ರನ್‌ ಕಲೆಹಾಕಿದ್ದರು.

ಯೋ ಯೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಂಬಟಿ ರಾಯುಡು, ಆಲ್‌ರೌಂಡರ್‌ ಕೇದಾರ್‌ ಜಾಧವ್ ಅವರನ್ನೂ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇದೆ.

ಮಧ್ಯಮ ವೇಗದ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರಿಗೆ ಅವಕಾಶ ಸಿಗುವುದು ಖಾತ್ರಿಯಾಗಿದ್ದು, ಮೂರನೇ ವೇಗದ ಬೌಲರ್‌ ಸ್ಥಾನಕ್ಕೆ ಶಾರ್ದೂಲ್‌ ಠಾಕೂರ್‌, ಸಿದ್ದಾರ್ಥ್‌ ಕೌಲ್‌ ಮತ್ತು ಉಮೇಶ್‌ ಯಾದವ್‌ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ.

ಮಹೇಂದ್ರ ಸಿಂಗ್‌ ಧೋನಿ ವಿಕೆಟ್‌ ಕೀಪರ್‌ ಜವಾಬ್ದಾರಿ ನಿಭಾಯಿಸಲಿದ್ದು, ಹೆಚ್ಚುವರಿ ಕೀಪರ್‌ ಸ್ಥಾನದಲ್ಲಿ ರಿಷಭ್‌ ಪಂತ್‌ಗೆ ಅವಕಾಶ ನೀಡುವ ಬಗ್ಗೆಯೂ ಆಯ್ಕೆ ಸಮಿತಿ ಸದಸ್ಯರು ಚರ್ಚಿಸುವ ಸಂಭವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.