ADVERTISEMENT

ಟೆಸ್ಟ್‌ಗೆ ತಾಲೀಮು: ನೆಟ್ಸ್‌ನಲ್ಲಿ ಬೆವರು ಹರಿಸಿದ ಗಿಲ್‌, ಜೈಸ್ವಾಲ್

ಪಿಟಿಐ
Published 11 ನವೆಂಬರ್ 2025, 15:36 IST
Last Updated 11 ನವೆಂಬರ್ 2025, 15:36 IST
<div class="paragraphs"><p>ನೆಟ್ಸ್‌ನಲ್ಲಿ ಶುಭಮನ್ ಗಿಲ್‌</p></div>

ನೆಟ್ಸ್‌ನಲ್ಲಿ ಶುಭಮನ್ ಗಿಲ್‌

   

ಪಿಟಿಐ ಚಿತ್ರ

ಕೋಲ್ಕತ್ತ: ಅಲ್ಪಾವಧಿಯ ಕ್ರಿಕೆಟ್‌ನಿಂದ ದೀರ್ಘಾವಧಿ ಪಂದ್ಯಗಳ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಮಂಗಳವಾರ ಸುಮಾರು ಒಂದೂವರೆ ಗಂಟೆಗಳ ಕಾಲ ನೆಟ್ಸ್‌ನಲ್ಲಿ ಬೆವರುಹರಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಆರಂಭವಾಗುವ ಮೊದಲ ಟೆಸ್ಟ್‌ಗೆ ಮುನ್ನ ತಮ್ಮ ಕೌಶಲವನ್ನು ಹುರಿಗೊಳಿಸಲು ಶ್ರಮಹಾಕಿದರು.

ADVERTISEMENT

ಪಾಕಿಸ್ತಾನ ವಿರುದ್ಧ ಹೋದ ತಿಂಗಳು ಸವಾಲಿನ ನಡುವೆಯೂ ಟೆಸ್ಟ್‌ ಸರಣಿಯನ್ನು 1–1 ಡ್ರಾ ಮಾಡಿಕೊಂಡ ವಿಶ್ವಾಸದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ತಾಲೀಮಿನಲ್ಲಿ ತೊಡಗಿತು.

ಅಕ್ಟೋಬರ್‌ ಆರಂಭದಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗಿಲ್ ಅವರು ಅವರು ಅರ್ಧ ಶತಕ, ಮತ್ತೊಂದು ಅಜೇಯ ಶತಕ ಗಳಿಸಿದ್ದರು. ಆದರೆ ನಂತರ ನಡೆದ ನಿಯಮಿತ ಓವರುಗಳ (ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ಅವರು ಅಂಥ ಯಶಸ್ಸು ಗಳಿಸಿರಲಿಲ್ಲ.

ನೆಟ್ಸ್‌ನಲ್ಲಿ ತೊಡಗುವ ಮುನ್ನ ಅವರು ಮುಖ್ಯ ಕೋಚ್‌ ಗೌತಮ್ ಗಂಭೀರ್ ಮತ್ತು ಸಹಾಯಕ ಕೋಚ್‌ ಸಿತಾಂಶು ಕೊಟಕ್ ಜೊತೆ ದೀರ್ಘ ಸಮಾಲೋಚನೆಯಲ್ಲಿ ತೊಡಗಿದ್ದು ಕಂಡಿತು. ಕೆಲಕಾಲ ಸ್ಲಿಪ್‌ ಫೀಲ್ಡಿಂಗ್ ಅಭ್ಯಾಸದಲ್ಲಿ ತೊಡಗಿದರು. ಬಳಿಕ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಪ್ಯಾಡ್ ಕಟ್ಟಿಕೊಂಡು ದೀರ್ಘಕಾಲ ಬ್ಯಾಟಿಂಗ್‌ ತಾಲೀಮಿನಲ್ಲಿ ತೊಡಗಿದರು.

ರವೀಂದ್ರ ಜಡೇಜ, ವಾಷಿಂಗ್ಟನ್‌ ಸುಂದರ್ ಅವರನ್ನು ಎದುರಿಸಿದರು. ಕೆಲವು ಸ್ವೀಪ್‌ಗಳನ್ನು ಆಡಿದರು. ನಿತೀಶ್ ಕುಮಾರ್ ರೆಡ್ಡಿ ಜೊತೆಗೆ ಕೆಲವು ಕ್ಲಬ್‌ ಬೌಲರ್‌ಗಳನ್ನು ಎದುರಿಸಿದರು. ಬೌನ್ಸ್‌ ಮತ್ತು ವೇಗಕ್ಕೆ ಸಜ್ಜಾಗಲು ಥ್ರೊಡೌನ್‌ಗಳನ್ನೂ ಎದುರಿಸಿದರು.

ರಾಜಸ್ತಾನ ಪರ ರಣಜಿ ಪಂದ್ಯದಲ್ಲಿ 67 ಮತ್ತು 156 ರನ್ ಹೊಡೆದಿದ್ದ ಎಡಗೈ ಬ್ಯಾಟರ್‌ ಜೈಸ್ವಾಲ್ ಕೂಡ ಮಧ್ಯದ ಪಿಚ್‌ನಲ್ಲಿ ಸುಮಾರು ಹೊತ್ತು ಆಡಿದರು. 

ಸಾಯಿ ಮೇಲೆ ಗಮನ:

ನೆಟ್ಸ್‌ನಲ್ಲಿ ಸಾಕಷ್ಟು ಹೊತ್ತು ಕಳೆದ ಇನ್ನೊಬ್ಬ ಬ್ಯಾಟರ್ ಸಾಯಿ ಸುದರ್ಶನ್‌. ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಎರಡು ‘ಟೆಸ್ಟ್‌’ಗಳಲ್ಲಿ ಅಂಥ ಯಶಸ್ಸು ಗಳಿಸಿರಲಿಲ್ಲ. ಅವರು ಮೂರನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚು.

ಭಾರತ ಎ ತಂಡದಲ್ಲಿ ಅವರ ಜೊತೆ ಆಡಿದ್ದ ಕೆ.ಎಲ್‌.ರಾಹುಲ್‌, ಧ್ರುವ್ ಜುರೆಲ್‌, ಕುಲದೀಪ್ ಯಾದವ್‌, ಮೊಹಮ್ಮದ್ ಸಿರಾಜ್, ರಿಷಭ್ ಪಂತ್, ದೇವದತ್ತ ಪಡಿಕ್ಕಲ್ ಮತ್ತಿತರರು ಅವರು ಐಚ್ಛಿಕವಾಗಿದ್ದ ತಾಲೀಮಿನಲ್ಲಿ ಪಾಲ್ಗೊಳ್ಳಲಿಲ್ಲ.

ಟೆಸ್ಟ್‌ಗಳಲ್ಲಿ 47.77 ಸರಾಸರಿ ಹೊಂದಿರುವ ಜುರೆಲ್‌ ವೆಸ್ಟ್‌ ಇಂಡೀಸ್ ವಿರುದ್ಧ ಚೊಚ್ಚಲ ಶತಕ ಬಾರಿಸಿದ್ದು, ಅಮೋಘ ಲಯದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಎರಡೂ ಇನಿಂ‌ಗ್ಸ್‌ಗಳಲ್ಲಿ ಶತಕ ಬಾರಿಸಿದ್ದು ಅವರ ಲಯಕ್ಕೆ ನಿದರ್ಶನ.

ವೇಗಿಗಳ ಪೈಕಿ ಜಸ್‌ಪ್ರೀತ್ ಬೂಮ್ರಾ ಸುಮಾರು 15 ನಿಮಿಷಗಳ ಕಾಲ ಅಭ್ಯಾಸದಲ್ಲಿ ತೊಡಗಿದರು. ಉಲ್ಲಸಿತರಾಗಿದ್ದ ಅವರು ತಂಡದ ಇತರ ಆಟಗಾರರ ಜೊತೆ ಹರಟೆ ಹೊಡೆದರು. ಬಲಮೊಣಕಾಲಿಗೆ ಪಟ್ಟಿಕಟ್ಟಿಕೊಂಡಿದ್ದು ಕಾಣಿಸಿತು.

ಪಿಚ್‌ ಮೇಲೆ ಕಣ್ಣು:

ಮೂರು ಗಂಟೆಗಳ ತರಬೇತಿಯ ಬಳಿಕ ಗಂಭೀರ್‌, ಕೋಟಕ್, ಮಾರ್ಕೆಲ್ ಮತ್ತು ಗಿಲ್‌ ಅವರಿದ್ದ ‘ಚಿಂತಕರ ತಂಡ’ವು ಪಂದ್ಯ ನಡೆಯುವ ‘ಸೆಂಟರ್‌ ಪಿಚ್‌’ ಪರಿಶೀಲಿಸಿತು. ಮಾರ್ಕೆಲ್ ಮತ್ತು ಗಿಲ್‌ ಅವರು ಕ್ಯುರೇಟರ್‌ ಸುಜನ್‌ ಮುಖರ್ಜಿ ಅವರನ್ನು ಕರೆಸಿ 15 ನಿಮಿಷ ಮಾತನಾಡಿದರು. ಆಚೀಚೆಯ ಪಿಚ್‌ಗೆ ನೀರು ಹಾಯಿಸಲಾಗಿದ್ದು, ಮಧ್ಯದ ಪಿಚ್‌ ಹಾಗೇ ಬಿಡಲಾಗಿತ್ತು.

ಹರಿಣಗಳ ಪಡೆ ಸ್ಪಿನ್ ಮತ್ತು ವೇಗದ ಪಡೆಯಿಂದ ಸಮತೋಲನ ಹೊಂದಿದೆ. ಕಗಿಸೊ ರಬಾಡ ಮತ್ತು ಮಾರ್ಕೊ ಯಾನ್ಸೆನ್ ಒಳಗೊಂಡ ವೇಗದ ವಿಭಾಗ ಮತ್ತು ಕೇಶವ ಮಹಾರಾಜ್, ಸೈಮನ್ ಹರ್ಮರ್, ಸೆನರಾನ್ ಮುತ್ತುಸಾಮಿ ಅವರಿದ್ದ ಸ್ಪಿನ್ ವಿಭಾಗ ಪಾಕಿಸ್ತಾನದಲ್ಲಿ ಉತ್ತಮ ಪ್ರದರ್ಶನ ನೀಡಿತ್ತು.

ಹರ್ಮರ್ (13), ಮುತ್ತುಸಾಮಿ (11), ಮಹಾರಾಜ್ (9) ಅವರು 33 ವಿಕೆಟ್‌ಗಳನ್ನು ಹಂಚಿಕೊಂಡಿದ್ದಾರೆ. 106 ರನ್ ಕಲೆಹಾಕಿದ್ದ ಮುತ್ತುಸಾಮಿ ಸರಣಿಯ ಆಟಗಾರನಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.