ADVERTISEMENT

ಆಟದ–ಅಂಗಳ | ಕಾಂಗರೂ ನಾಡಿನಲ್ಲಿ ‘ಟೆಸ್ಟ್‌’: ಮರಳಿ ಅರಳುವ ಕನಸಿನಲ್ಲಿ ಆಟಗಾರರು

ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಆರ್ಥಿಕ ಚೇತರಿಕೆಯ ತವಕ; ಭಾರತಕ್ಕೆ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ ಮೇಲೆ ಕಣ್ಣು

ಗಿರೀಶದೊಡ್ಡಮನಿ
Published 26 ನವೆಂಬರ್ 2020, 21:03 IST
Last Updated 26 ನವೆಂಬರ್ 2020, 21:03 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಕೊರೊನಾ ವೈರಸ್ ತಂದೊಡ್ಡಿದ ಸಂಕಷ್ಟ–ಸವಾಲುಗಳಿಗೆ ಸೆಡ್ಡು ಹೊಡೆದು ಮುಂದಡಿ ಇಡುವ ಕಾಲ ಇದು. ಕಳೆದ ಆರೆಂಟು ತಿಂಗಳುಗಳಲ್ಲಿ ಈ ಮಹಾಮಾರಿಯಿಂದಾದ ನಷ್ಟವನ್ನು ಮತ್ತೆ ತುಂಬಿಕೊಳ್ಳುವ ಸಮಯವೂ ಹೌದು.

ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಇಂತಹದೊಂದು ಮಹತ್ವಾಕಾಂಕ್ಷೆಯಲ್ಲಿದೆ. ಶುಕ್ರವಾರ ಆರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯಿಂದ ಸುಮಾರು ₹1550 ಕೋಟಿಗೂ ಹೆಚ್ಚಿನ ವರಮಾನವನ್ನು ಅಲ್ಲಿಯ ಕ್ರಿಕೆಟ್ ಮಂಡಳಿಯು ನಿರೀಕ್ಷಿಸುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ಮೊದಲ ಬಾರಿಗೆ ಸರಣಿಯನ್ನು ಆಯೋಜಿಸುತ್ತಿದೆ. ಭಾರತಕ್ಕೂ ಇದು ಪ್ರಥಮ ದ್ವಿಪಕ್ಷೀಯ ಸರಣಿ.

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು ಅಕ್ಟೋಬರ್‌ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಆಯೋಜಿಸಬೇಕಿತ್ತು ಆದರೆ, ಕೋವಿಡ್‌ ಪಿಡುಗಿನಿಂದಾಗಿ ಅದನ್ನು 2022ಕ್ಕೆ ಮುಂದೂಡಿತು. ಅದರಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಯಿತು.

ADVERTISEMENT

ಈ ಟೂರ್ನಿಯಿಂದಾಗಿ ಬಿಸಿಸಿಐಗೆ ಸುಮಾರು ನಾಲ್ಕು ಸಾವಿರ ಕೋಟಿ ರೂಪಾಯಿ ಅದಾಯ ಬಂದಿದೆ ಎಂದು ಹೇಳಲಾಗುತ್ತಿದೆ. ನವೆಂಬರ್–ಡಿಸೆಂಬರ್‌ನಲ್ಲಿ ಭಾರತ ಎದುರಿನ ಸರಣಿ ಆಯೋಜಿಸುವ ಭರವಸೆಯೊಂದಿಗೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಮುಂದೂಡಿತ್ತು. ಇದೀಗ ಬಿಸಿಸಿಐ ಕೂಡ ತನ್ನ ಮಾತು ಉಳಿಸಿಕೊಂಡಿದೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ಅತಿ ಹೆಚ್ಚು ಕಷ್ಟ–ನಷ್ಟಗಳಿಗೆ ಕ್ರಿಕೆಟ್ ಆಸ್ಟ್ರೇಲಿಯಾ ತುತ್ತಾಗಿತ್ತು. ಹೋದ ಆರು ತಿಂಗಳಲ್ಲಿ ಸುಮಾರು ₹ 657 ಕೋಟಿ ಆದಾಯ ನಷ್ಟವಾಗಿತ್ತು. ಆಟಗಾರರ ವೇತನ ಕಡಿತಕ್ಕೂ ಮುಂದಾಗಿತ್ತು. ಅದು ತೀವ್ರ ಚರ್ಚೆಗೂ ಗ್ರಾಸವಾಗಿತ್ತು. ಅಲ್ಲಿಯ ದೇಶಿ ಟೂರ್ನಿಗಳ ಆಯೋಜನೆಗೆ ತಡೆಬಿದ್ದಿತ್ತು. ಮಂಡಳಿಯ 40 ಸಿಬ್ಬಂದಿಯನ್ನೂ ಕಡಿತ ಮಾಡಲಾಗಿತ್ತು. ಆಸ್ಟ್ರೇಲಿಯಾದ ಹತ್ತಕ್ಕೂ ಹೆಚ್ಚು ಆಟಗಾರರು ಐಪಿಎಲ್‌ನಲ್ಲಿ ಆಡಿ ತಮ್ಮ ಕಿಸೆಯನ್ನು ತುಂಬಿಸಿಕೊಂಡು ನಕ್ಕರು. ಆದರೆ ಈ ನಸೀಬು ಎಲ್ಲ ಆಟಗಾರರಿಗೂ ಸಿಕ್ಕಿರಲಿಲ್ಲ. ಆ ದೃಷ್ಟಿಯಿಂದ ಕಾಂಗರೂ ನಾಡಿನ ಆಟಗಾರರು ತಮ್ಮ ವೈಯಕ್ತಿಕ ಆದಾಯದ ಲೆಕ್ಕಾಚಾರವನ್ನೂ ಈಗ ಹಾಕುತ್ತಿದ್ದಾರೆ.

ಚಾಂಪಿಯನ್‌ಷಿಪ್ ‘ಟೆಸ್ಟ್’
ಮೂರು ಏಕದಿನ ಮತ್ತು ಮೂರು ಟ್ವೆಂಟಿ–20 ಸರಣಿಗಳ ನಂತರ ನಾಲ್ಕು ಟೆಸ್ಟ್‌ಗಳ ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯು ನಡೆಯಲಿದೆ. ಈ ಸರಣಿಯನ್ನು ಜಯಿಸುವುದು ಭಾರತಕ್ಕೆ ಮಹತ್ವದ್ದಾಗಿದೆ. ಏಕೆಂದರೆ, ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ಅಂಕಗಳು (360) ಇದ್ದರೂ ಕೂಡ ಭಾರತಕ್ಕೆ ಈಗ ಕಠಿಣ ಸವಾಲು ಎದುರಾಗಿದೆ.

ಲಾಕ್‌ಡೌನ್ ಮತ್ತಿತರ ಕಾರಣಗಳಿಂದಾಗಿ ನಡೆಯದ ಟೆಸ್ಟ್ ಸರಣಿಗಳ ಲೆಕ್ಕಾಚಾರವನ್ನು ಸರಿದೂಗಿಸಲು ಐಸಿಸಿಯು ತಂಡಗಳ ಪಾಯಿಂಟ್ಸ್‌ನಲ್ಲಿ ಶೇಕಡಾವಾರು ಲೆಕ್ಕದಲ್ಲಿ ಫೈನಲ್‌ ತಂಡಗಳನ್ನು ನಿರ್ಧರಿಸುತ್ತಿದೆ. ಈ ನಿಯಮವು ಭಾರತಕ್ಕೆ ಕಂಟಕವಾಗುತ್ತಿದೆ. 2019ರಲ್ಲಿ ಭಾರತ ತಂಡವು ಹೆಚ್ಚು ಟೆಸ್ಟ್‌ಗಳನ್ನು ಆಡಿತ್ತು. 2020ರಲ್ಲಿ ಟಿ20 ವಿಶ್ವಕಪ್ ಇದ್ದ ಕಾರಣ ಸೀಮಿತ ಓವರ್‌ಗಳ ಸರಣಿಗಳಿಗೆ ಹೆಚ್ಚು ಒತ್ತು ಕೊಟ್ಟಿತ್ತು. ಅದರಿಂದಾಗಿ ಶೇಕಡಾವಾರು ಲೆಕ್ಕಾಚಾರದಲ್ಲಿ ಭಾರತಕ್ಕೆ ಹೆಚ್ಚು ಅಂಕಗಳು ಸಿಗುವುದಿಲ್ಲ. ಆದರೆ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನಕ್ಕೆ ಹೆಚ್ಚು ಲಾಭವಾಗುವ ಸಾಧ್ಯತೆ ಇದೆ.

ಭಾರತ ತಂಡವು ಈ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಂಡರೆ ಪಾಯಿಂಟ್ಸ್ 500ರ ಗಡಿ ದಾಟಲಿದೆ. ಆಗ ಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಗತವೈಭವದ ಕನವರಿಕೆ
ಕೊರೊನಾ ಪೂರ್ವದ ಸಾಧನೆಗಳ ಕನವರಿಕೆಯ ಸರಣಿಯೂ ಇದಾಗಿದೆ. 2018ರಲ್ಲಿ ವಿರಾಟ್ ಕೊಹ್ಲಿ ಬಳಗವು ಆಸ್ಟ್ರೇಲಿಯಾದ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಸಾಧಿಸಿತ್ತು. ಈಗ ಮತ್ತೊಮ್ಮೆ ಅದನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ.

ಸೀಮಿತ ಓವರ್‌ಗಳ ಸರಣಿಯಲ್ಲಿ ಭಾರತದ ಆಟಗಾರರು 1992ರ ವಿಶ್ವಕಪ್ ಟೂರ್ನಿಯ ಪೋಷಾಕನ್ನು ಧರಿಸಲಿದ್ದಾರೆ. ಈ ಬಾರಿ ಪ್ರಾಯೋಜಕರ ಹೆಸರು ಕೂಡ ಬದಲಾಗಿದೆ. ಪೋಷಾಕಿನ ಮೇಲೆ ಬೈಜೂಸ್, ಎಂಪಿಎಲ್ ಲಾಂಛನಗಳು ಮಿಂಚಲಿವೆ. ಆನ್‌ಲೈನ್‌ ಶಿಕ್ಷಣ ಮತ್ತು ಆನ್‌ಲೈನ್ ಗೇಮ್ಸ್ ಸಂಸ್ಥೆಗಳು ಇವಾಗಿವೆ. ತಂಪು ಪಾನೀಯ, ಸೂಟು, ಬೂಟು ಕಂಪೆನಿಗಳ ಕಾಲ ಹೋಗಿ ಡಿಜಿಟಲ್ ಯುಗದ ಕಂಪೆನಿಗಳು ಕ್ರಿಕೆಟ್ ಅಂಗಳಕ್ಕೆ ಲಗ್ಗೆ ಇಟ್ಟಿರುವ ಸಂಕೇತವೂ ಇದಾಗಿದೆ.

ಮೈಲಿಗಲ್ಲು ಸನಿಹ ಆಟಗಾರರು
* ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಇದುವರೆಗೆ 1,910 ರನ್‌ ಗಳಿಸಿದ್ದು, 2,000 ರನ್‌ ಮೈಲಿಗಲ್ಲು ತಲುಪಲು 90 ರನ್‌ಗಳ ಅಗತ್ಯ ಇದೆ. ಸಚಿನ್ ತೆಂಡೂಲ್ಕರ್‌ (3,077) ಹಾಗೂ ರೋಹಿತ್‌ ಶರ್ಮಾ (2,089) ಅವರ ಸಾಲಿಗೆ ವಿರಾಟ್‌ ಸೇರಲಿದ್ದಾರೆ. ನಾಯಕನಾಗಿ ಇದುವರೆಗೆ 21 ಶತಕಗಳನ್ನು ಬಾರಿಸಿರುವ ವಿರಾಟ್‌ ಅವರು ಇನ್ನೊಂದು ಶತಕ ಬಾರಿಸಿದರೆ, ನಾಯಕತ್ವದಲ್ಲಿ ಹೆಚ್ಚು ಶತಕ ಗಳಿಸಿರುವ ರಿಕಿ ಪಾಂಟಿಂಗ್‌ (22) ದಾಖಲೆ ಸರಿಗಟ್ಟಲಿದ್ದಾರೆ.
* ಭಾರತ–ಆಸ್ಟ್ರೇಲಿಯಾ ದ್ವಿಪಕ್ಷೀಯ ಏಕದಿನ ಪಂದ್ಯಗಳಲ್ಲಿ 973 ರನ್‌ ಗಳಿಸಿರುವ ಶಿಖರ್‌ ಧವನ್‌ ಅವರಿಗೆ 1000 ರನ್ ಪೂರೈಸಲು 27 ರನ್‌ಗಳ ಅಗತ್ಯವಿದೆ.
* ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ (4983 ರನ್‌) ಅವರು ಇನ್ನು 17 ರನ್‌ ಗಳಿಸಿದರೆ ಏಕದಿನ ಪಂದ್ಯಗಳಲ್ಲಿ 5,000 ರನ್‌ ಪೂರೈಸಲಿದ್ದಾರೆ.
* ಭಾರತದ ವೇಗದ ಬೌಲರ್‌ ಮೊಹಮ್ಮದ್‌ ಶಮಿ (144 ವಿಕೆಟ್‌) ಅವರಿಗೆ ಏಕದಿನ ಪಂದ್ಯಗಳಲ್ಲಿ 150 ವಿಕೆಟ್‌ ಗಡಿ ತಲುಪಲು 6 ವಿಕೆಟ್‌ಗಳ ಅಗತ್ಯವಿದೆ.
ಮಾಹಿತಿ: ಎಚ್‌.ಆರ್. ಗೋಪಾಲಕೃಷ್ಣ

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಕೆ.ಎಲ್‌.ರಾಹುಲ್ (ಉಪನಾಯಕ–ವಿಕೆಟ್ ಕೀಪರ್‌),ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್‌, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್.

ಆಸ್ಟ್ರೇಲಿಯಾ: ಅ್ಯಾರನ್ ಫಿಂಚ್ (ನಾಯಕ), ಡೇವಿಡ್‌ ವಾರ್ನರ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್‌, ಮಾರ್ಕಸ್ ಸ್ಟೊಯಿನಿಸ್‌, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್)‌, ಪ್ಯಾಟ್ ಕಮಿನ್ಸ್, ಮಿಷೆಲ್ ಸ್ಟಾರ್ಕ್‌, ಆ್ಯಡಂ ಜಂಪಾ, ಜೋಶ್ ಹ್ಯಾಜಲ್‌ವುಡ್‌, ಸೀನ್ ಅಬೋಟ್‌, ಆ್ಯಶ್ಟನ್ ಅಗರ್‌, ಕ್ಯಾಮರೂನ್ ಗ್ರೀನ್‌, ಮೊಯಸಸ್ ಹೆನ್ರಿಕ್ಸ್‌, ಆ್ಯಂಡ್ರ್ಯೂ ಟೈ, ಡ್ಯಾನಿಯಲ್ ಸ್ಯಾಮ್ಸ್‌, ಮ್ಯಾಥ್ಯೂ ವೇಡ್‌ (ವಿಕೆಟ್ ಕೀಪರ್)
ಆರಂಭ: ಬೆಳಿಗ್ಗೆ 9.10 (ಭಾರತೀಯ ಕಾಲಮಾನ)
ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.