ADVERTISEMENT

IND vs NZ ಪದಾರ್ಪಣೆ ಪಂದ್ಯದಲ್ಲಿ ಮಿಂಚಿದ ಕೈಲ್

ಕ್ರಿಕೆಟ್: ಸರಣಿ ಕೈವಶ ಮಾಡಿಕೊಂಡ ಕಿವೀಸ್; ಶ್ರೇಯಸ್‌ ಅಯ್ಯರ್‌ ಅರ್ಧಶತಕ

ಪಿಟಿಐ
Published 8 ಫೆಬ್ರುವರಿ 2020, 18:45 IST
Last Updated 8 ಫೆಬ್ರುವರಿ 2020, 18:45 IST
ಭಾರತ ತಂಡದ ಆಟಗಾರ ಔಟಾದಾಗ ನ್ಯೂಜಿಲೆಂಡ್‌ ತಂಡದ ಜೇಮ್ಸ್‌ ನಿಶಾಮ್, ಟಾಮ್ ಲಥಾಮ್ ಮತ್ತು ಕೈಲ್ ಜೆಮಿಸನ್ ಸಂಭ್ರಮ –ಎಪಿ/ಪಿಟಿಐ ಚಿತ್ರ
ಭಾರತ ತಂಡದ ಆಟಗಾರ ಔಟಾದಾಗ ನ್ಯೂಜಿಲೆಂಡ್‌ ತಂಡದ ಜೇಮ್ಸ್‌ ನಿಶಾಮ್, ಟಾಮ್ ಲಥಾಮ್ ಮತ್ತು ಕೈಲ್ ಜೆಮಿಸನ್ ಸಂಭ್ರಮ –ಎಪಿ/ಪಿಟಿಐ ಚಿತ್ರ   
""
""

ಆಕ್ಲೆಂಡ್: ಆರೂವರೆ ಅಡಿಗೂ ಹೆಚ್ಚು ಎತ್ತರವಿರುವ ವೇಗಿ ಕೈಲ್ ಜೆಮಿಸನ್ ತಮ್ಮ ಪದಾರ್ಪಣೆ ಪಂದ್ಯವನ್ನು ಅವಿಸ್ಮರಣೀಯಗೊಳಿಸಿಕೊಂಡರು.

ಶನಿವಾರ ಈಡನ್ ಪಾರ್ಕ್‌ನಲ್ಲಿ ಭಾರತದ ಎದುರು ನಡೆದ ಎರಡನೇ ಏಕದಿನ ಪಂದ್ಯದಲ್ಲಿ 22 ರನ್‌ಗಳಿಂದ ಗೆದ್ದು, 2–0ಯಿಂದ ಸರಣಿಯನ್ನು ಕೈವಶ ಮಾಡಿಕೊಳ್ಳಲು ಕಾರಣರಾದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿ ಬಳಗದ ಬೌಲರ್‌ಗಳು ನ್ಯೂಜಿಲೆಂಡ್ ತಂಡವು ಮುನ್ನೂರರ ಗಡಿ ದಾಟದಂತೆ ನೋಡಿಕೊಂಡರು. ಆದರೆ ಮೂರು ಕ್ಯಾಚ್‌ಗಳನ್ನು ನೆಲಕ್ಕೆ ಚೆಲ್ಲಿದ್ದು ನ್ಯೂಜಿಲೆಂಡ್ ತಂಡಕ್ಕೆ ವರದಾನವಾಯಿತು.

ಅದರಲ್ಲಿ ಒಂದು ಜೀವದಾನ ಪಡೆದ ಹೆನ್ರಿ ನಿಕೋಲ್ಸ್‌ ಅವರು ಮಾರ್ಟಿನ್ ಗಪ್ಟಿಲ್‌(79; 79ಎ, 8ಬೌಂ, 3ಸಿ) ಜೊತೆಗೆ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಸ್‌ ಟೇಲರ್‌(ಔಟಾಗದೆ 73; 74ಎ, 6ಬೌಂ,2ಸಿ) ಎರಡು ಜೀವದಾನಗಳ ಲಾಭ ಪಡೆದು ತಂಡದ ಮೊತ್ತ ಹಿಗ್ಗಿಸಿದರು. ತಂಡವು 50 ಓವರ್‌ಗಳಲ್ಲಿ 8ಕ್ಕೆ273 ರನ್ ಗಳಿಸಿತು.

ADVERTISEMENT

ಹತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೈಲ್ (ಔಟಾಗದೆ 25; 24ಎ, 1ಬೌಂ, 2ಸಿ) ಕೂಡ ಉತ್ತಮ ಕಾಣಿಕೆ ನೀಡಿದರು. ಬೌಲಿಂಗ್‌ನಲ್ಲಿಯೂ ಮಿಂಚಿದ ಅವರು ಆರಂಭಿಕ ಪೃಥ್ವಿ ಶಾ ಮತ್ತು ಕೆಳಕ್ರಮಾಂಕದಲ್ಲಿ ಬೀಸಾಟವಾಡಿ, ತಂಡವನ್ನು ಗೆಲುವಿನ ಸನಿಹ ತಂದಿದ್ದ ನವದೀಪ್ ಸೈನಿಯ (45; 49ಎ, 5ಬೌಂ, 2ಸಿ) ವಿಕೆಟ್ ಗಳಿಸಿದರು. ಇದರಿಂದಾಗಿ ಭಾರತವು 48.3 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು. ಶ್ರೇಯಸ್ ಅಯ್ಯರ್ (52; 57ಎ, 7ಬೌಂ, 1ಸಿ) ಮತ್ತು ರವೀಂದ್ರ ಜಡೇಜ (55; 73ಎ, 2ಬೌಂ, 1ಸಿ) ಅವರ ಅರ್ಧಶತಕಗಳು ವ್ಯರ್ಥವಾದವು.

ಲಯಕ್ಕೆ ಮರಳಿದ ಬೌಲರ್‌ಗಳು: ಹ್ಯಾಮಿಲ್ಟನ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ದುಬಾರಿಯಾಗಿದ್ದ ಬೌಲರ್‌ಗಳು ಇಲ್ಲಿ ಲಯಕ್ಕೆ ಮರಳಿದರು. ಶಾರ್ದೂಲ್, ಸೈನಿ, ಚಾಹಲ್ ಮತ್ತು ಜಡೇಜ ಅವರು ಉತ್ತಮ ಬೌಲಿಂಗ್ ಮಾಡಿ ಕಿವೀಸ್ ಮಧ್ಯಮಕ್ರಮಾಂಕವನ್ನು ಕಟ್ಟಿಹಾಕಿದ್ದರು. ಅಲ್ಲದೇ ಬ್ಯಾಟಿಂಗ್‌ ನಲ್ಲಿಯೂ ಮಿಂಚಿದರು.

ಆದರೆ, ಇಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಮಂಕಾದರು. ಮಯಂಕ್ ಅಗರ ವಾಲ್ (3), ವಿರಾಟ್ ಕೊಹ್ಲಿ (15), ಕೆ.ಎಲ್. ರಾಹುಲ್ (4) ಮತ್ತು ಕೇದಾರ್ ಜಾಧವ್ (9) ವಿಫಲರಾದರು. ಹೋದ ಪಂದ್ಯದಲ್ಲಿ ಶತಕ ಬಾರಿ ಸಿದ್ದ ಶ್ರೇಯಸ್ ಇಲ್ಲಿಯೂ ದಿಟ್ಟ ಆಟ ವಾಡಿದರು. 28ನೇ ಓವರ್‌ನಲ್ಲಿ ಅವರು ಹಮೀಷ್ ಬೆನೆಟ್ ಎಸೆತದಲ್ಲಿ ಔಟಾದರು. ಬಳಿಕ ಶಾರ್ದೂಲ್‌ ಸ್ವಲ್ಪ ಹೊತ್ತು ಹೋರಾಡಿದರು. ಅವರು ಔಟಾದಾಗ ಸ್ಕೋರ್‌ಬೋರ್ಡ್‌ನಲ್ಲಿ 7 ವಿಕೆಟ್‌ಗಳಿಗೆ 153 ರನ್‌ಗಳಿದ್ದವು .

ಈ ಸಂದರ್ಭದಲ್ಲಿ ಎಡಗೈ ಆಲ್‌ ರೌಂಡರ್ ಜಡೇಜ (55; 73ಎ, 2ಬೌಂ, 1ಸಿ) ಮತ್ತು ಸೈನಿ ಆರ್ಭಟಿಸಿದರು. ಇವರಿಬ್ಬರೂ ಎಂಟನೇ ವಿಕೆಟ್‌ಗೆ 76 ರನ್‌ಗಳನ್ನು ಸೇರಿಸಿ ಮತ್ತೆ ಗೆಲುವಿನಾಸೆ ಮೂಡಿಸಿದರು.

ನುರಿತ ಬ್ಯಾಟ್ಸ್‌ಮನ್‌ ರೀತಿ ಯಲ್ಲಿಯೇ ಆಡಿದ ಸೈನಿ ಹೊಡೆದ ಐದು ಬೌಂಡರಿಗಳು ಮತ್ತು ಎರಡು ಅಬ್ಬರದ ಸಿಕ್ಸರ್‌ಗಳು ಚಿತ್ತಾಪಹಾರಿಯಾಗಿದ್ದವು.

45ನೇ ಓವರ್‌ನಲ್ಲಿ ಕೈಲ್ ಎಸೆತ ದಲ್ಲಿ ಸೈನಿ ಕ್ಲೀನ್‌ ಬೌಲ್ಡ್ ಆದರು. ಆನಂತರವೂ ಜಡೇಜ ಪ್ರಯತ್ನ ಮುಂದುವರಿಸಿದರು. ಯಜುವೇಂದ್ರ ಚಾಹಲ್ (10; 12ಎ, 1ಬೌಂ) ಕೂಡ ಉತ್ತಮ ಜೊತೆ ನೀಡಿದರು. ಆದರೆ ಅವರು ರನ್‌ಔಟ್ ಆಗಿದ್ದು ಹಿನ್ನಡೆಗೆ ಕಾರಣವಾಯಿತು. ಎಲ್ಲ ವಿಭಾಗಗಳಲ್ಲಿಯೂ ಸಮತೂಕದ ಆಟವಾಡಿದ ಆತಿಥೇಯರು ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.