ADVERTISEMENT

Ind Vs SA: ಭಾರತಕ್ಕೆ ಮೊದಲ ಇನಿಂಗ್ಸ್ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 18:48 IST
Last Updated 28 ಡಿಸೆಂಬರ್ 2021, 18:48 IST
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಅವರ ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ಸಂಭ್ರಮ. (ಎಫ್‌ಪಿ ಚಿತ್ರ)
ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ ಅವರ ವಿಕೆಟ್‌ ಪಡೆದ ಮೊಹಮ್ಮದ್‌ ಶಮಿ ಸಂಭ್ರಮ. (ಎಫ್‌ಪಿ ಚಿತ್ರ)   

ಸೆಂಚುರಿಯನ್: ಸೂಪರ್‌ ಸ್ಪೋರ್ಟ್ ಪಾರ್ಕ್‌ನಲ್ಲಿ ಮಂಗಳವಾರ ವೇಗದ ಬೌಲರ್‌ಗಳದ್ದೇ ದರಬಾರು. ಅದರಿಂದಾಗಿ ಒಂದೇ ದಿನ 18 ವಿಕೆಟ್‌ಗಳು ಪತನವಾದವು!

ಇಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬೌಲರ್‌ಗಳ ಜಿದ್ದಾಜಿದ್ದಿಯ ನಡುವೆ ಭಾರತ ತಂಡವು 130 ರನ್‌ಗಳ ಮಹತ್ವದ ಮುನ್ನಡೆ ಗಳಿಸಿತು. ಇದಕ್ಕೆ ಕಾರಣವಾಗಿದ್ದು ಮಧ್ಯಮವೇಗಿ ಮೊಹಮ್ಮದ್ ಶಮಿಯ ಶಿಸ್ತಿನ ದಾಳಿ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು.

ಇದರಿಂದಾಗಿ ಆತಿಥೇಯ ತಂಡದ ಲುಂಗಿ ಗಿಡಿ ವೇಗಿಲುಂಗಿ ಗಿಡಿ (77ಕ್ಕೆ6) ಮತ್ತು ಕಗಿಸೊ ರಬಾಡ (72ಕ್ಕೆ3) ಅವರ ಶ್ರಮ ವ್ಯರ್ಥವಾಯಿತು. ಅವರಿಬ್ಬರೂ ಭಾರತ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 327 ರನ್‌ಗಳಿಗೆ ನಿಯಂತ್ರಿಸಿದರು. ಮೊದಲ ದಿನದಾಟದಲ್ಲಿ ವಿರಾಟ್ ಬಳಗವು ಕೆ.ಎಲ್. ರಾಹುಲ್ ಶತಕದ ಬಲದಿಂದ ಮೂರು ವಿಕೆಟ್‌ಗಳಿಗೆ 272 ರನ್‌ಗಳಿಸಿತ್ತು. ಎರಡನೇ ದಿನದಾಟವು ಮಳೆಗೆ ಅಹುತಿಯಾಗಿತ್ತು. ಈ ಅಡಿಪಾಯದ ಮೇಲೆ ದೊಡ್ಡ ಮೊತ್ತ ಪೇರಿಸುವ ಪ್ರವಾಸಿ ಬಳಗದ ಆಸೆಗೆ ಆತಿಥೇಯ ಬೌಲರ್‌ಗಳು ಅಡ್ಡಿಯಾದರು.

ADVERTISEMENT

ಆದರೆ ಅವರ ಸಂಭ್ರಮವೂ ಹೆಚ್ಚು ಹೊತ್ತು ಉಳಿಯಲಿಲ್ಲ.ಶಮಿ (44ಕ್ಕೆ5) ಶಿಸ್ತಿನ ದಾಳಿಗೆ ತಂಡವು ತತ್ತರಿಸಿತು. 62.3 ಓವರ್‌ಗಳಲ್ಲಿ 197 ರನ್ ಗಳಿಸಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್‌ ಗಳಿಸಿದೆ. ಒಟ್ಟು 146 ರನ್‌ಗಳ ಮುನ್ನಡೆ ಹೊಂದಿದೆ.

ಶಮಿ ಮಿಂಚು: ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಓವರ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಪೆಟ್ಟು ಕೊಟ್ಟರು. ಐದನೇ ಎಸೆತದಲ್ಲಿ ನಾಯಕ ಡೀನ್ ಎಲ್ಗರ್ ವಿಕೆಟ್ ಗಳಿಸಿದ ಬೂಮ್ರಾ ಸಂಭ್ರಮಿಸಿದರು.

ಆತಿಥೇಯರ ಈ ಗಾಯಕ್ಕೆ ಶಮಿ ಬರೆ ಎಳೆಯುವ ಕೆಲಸ ಮಾಡಿದರು. ಏಡನ್ ಮಾರ್ಕರಮ್ ಮತ್ತು ಕೀಗನ್ ಪೀಟರ್ಸನ್ ವಿಕೆಟ್‌ಗಳನ್ನು ಕಿತ್ತರು. ಇನ್ನೊಂದೆಡೆ ಮೊಹ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ವಾನ್ ಡೆರ್ ಡಸೆ ವಿಕೆಟ್ ಗಳಿಸಿದರು.

ಇದರಿಂದಾಗಿ ತಂಡವು 32 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ಬೇಗನೆ ಕುಸಿಯುವ ಆತಂಕ ಎದುರಿಸಿತು.

ಆದರೆ ಈ ಹಂತದಲ್ಲಿ ಒಂದಿಷ್ಟು ಜಿಗುಟುತನ ತೋರಿದ ತೆಂಬಾ ಬವುಮಾ (52; 103ಎ) ಮತ್ತು ಕ್ವಿಂಟನ್ ಡಿ ಕಾಕ್ (34; 63ಎ) ಬೌಲರ್‌ಗಳನ್ನು ಕಾಡಿದರು. ಕ್ವಿಂಟನ್‌ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಕೆ.ಎಲ್. ರಾಹುಲ್ ಕೊಟ್ಟ ಜೀವದಾನವನ್ನು ಸಮರ್ಥವಾಗಿ ಬಳಸಿಕೊಳ್ಳುವತ್ತ ಹೆಜ್ಜೆಯಿಟ್ಟರು.

ಐದನೇ ವಿಕೆಟ್ ಜೊತೆಯಾಟದಲ್ಲಿ 72 ರನ್‌ಗಳನ್ನು ಸೇರಿಸುವಲ್ಲಿ ಯಶಸ್ವಿಯಾದರು ತೆಂಬಾ ಆಕರ್ಷಕ ಬ್ಯಾಟಿಂಗ್ ಮಾಡಿದರು. ಸ್ಟ್ರೇಟ್‌ ಡ್ರೈವ್, ಬ್ಯಾಕ್‌ಫುಟ್‌ ಡ್ರೈವ್‌ಗಳನ್ನು ಪರಿಣಾಮಕಾರಿಯಾಗಿ ಪ್ರಯೋಗಿಸಿದರು.

ಕ್ವಿಂಟನ್ ವಿಕೆಟ್ ಗಳಿಸಿದ ಶಾರ್ದೂಲ್ ಠಾಕೂರ್ ಈ ಜೊತೆಯಾಟ ಮುರಿದರು. ಅರ್ಧಶತಕ ಗಳಿಸಿದ ತೆಂಬಾ ವಿಕೆಟ್ ಪಡೆದ ಶಮಿ ಮಿಂಚಿದರು. ಮಲ್ದರ್ ಮತ್ತು ರಬಾಡಾ ವಿಕೆಟ್‌ಗಳನ್ನೂ ತಮ್ಮ ಬುಟ್ಟಿಗೆ ಹಾಕಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.