ಸೂರ್ಯಕುಮಾರ್ ಯಾದವ್
–ಪಿಟಿಐ ಚಿತ್ರ
ಪೆಲ್ಲೆಕೆಲೆ: ನೂತನ ಕೋಚ್ ಗೌತಮ್ ಗಂಭೀರ್ ಮತ್ತು ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಸಂಯೋಜನೆಯಲ್ಲಿ ಭಾರತ ತಂಡ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 2–0 ಮುನ್ನಡೆ ಪಡೆದಿದ್ದು ಉತ್ತಮ ಆರಂಭ ಮಾಡಿದೆ. ಮಂಗಳವಾರ ನಡೆಯುವ ಮೂರನೇ ಹಾಗೂ ಅಂತಿಮ ಪಂದ್ಯದಲ್ಲೂ ಇದೇ ಪ್ರಾಬಲ್ಯ ಮುಂದುವರಿಸಿ ಸರಣಿಯನ್ನು ‘ವೈಟ್ ವಾಷ್’ ಮಾಡುವ ಗುರಿಯಲ್ಲಿದೆ.
ಆತಿಥೇಯ ತಂಡವು ಕ್ಲೀನ್‌ಸ್ವೀಪ್ ಮುಖಭಂಗ ತಪ್ಪಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ಮೊದಲ ಪಂದ್ಯದಲ್ಲಿ 43 ರನ್‌ಗಳಿಂದ ಗೆದ್ದ ಭಾರತ, ಭಾನುವಾರ ಮಳೆಯಿಂದ ಅಡಚಣೆಗೊಳಗಾದ ಎರಡನೇ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಜಯಿಸಿತ್ತು.
ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ತಂಡ ಬಿರುಸಿನ ಆರಂಭ ಪಡೆದರೂ ನಂತರ ಅದೇ ವೇಗದಲ್ಲಿ ಸಾಗದೇ ಮಧ್ಯಮ ಹಂತದ ಓವರುಗಳಲ್ಲಿ ಕುಸಿದಿತ್ತು. ಭಾನುವಾರ ಪುರುಷರ ತಂಡ ಸೋತರೆ, ದ್ವೀಪರಾಷ್ಟ್ರದ ಮಹಿಳೆಯರ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿ ಮೊದಲ ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು.
ಭಾರತ ತಂಡ ಯೋಜನೆಗಳನ್ನು ರೂಪಿಸುವಲ್ಲಿ, ಕೌಶಲದ ವಿಷಯದಲ್ಲಿ ಮತ್ತು ಒತ್ತಡದ ಸನ್ನಿವೇಶವನ್ನು ನಿಭಾಯಿಸುವಲ್ಲಿ ಎದುರಾಳಿಯನ್ನು ಮೀರಿಸಿದೆ. ತಂಡ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸಿದೆ. ಸೂರ್ಯ, ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಬೌಲಿಂಗ್ ಬದಲಾವಣೆಯನ್ನು
ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ಬ್ಯಾಟಿಂಗ್‌ನಲ್ಲೂ ಬಿರುಸಿನ 58 ಮತ್ತು 26 ರನ್ ಗಳಿಸಿದ್ದಾರೆ.
ಉಪನಾಯಕ ಶುಭಮನ್ ಗಿಲ್ ಕತ್ತು ನೋವಿನಿಂದಾಗಿ ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಅವರು ಮೂರನೇ ಪಂದ್ಯಕ್ಕೆ ಫಿಟ್ ಆಗಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಅವರ ಬದಲು ಅವಕಾಶ ಪಡೆದ ಸಂಜು ಸ್ಯಾಮ್ಸನ್ ಖಾತೆ ತೆರೆಯಲು ವಿಫಲರಾಗಿದ್ದರು. ಇನ್ನೊಂದೆಡೆ ಮತ್ತೊಬ್ಬ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಯಶಸ್ಸು ಪಡೆದಿದ್ದಾರೆ.
ಲಂಕಾ ಕಡೆ ಪಥುಮ್ ನಿಸಾಂಕ (111 ರನ್) ಮತ್ತು ಕುಶಾಲ್ ಪೆರೆರಾ (73) ಬಿರುಸಿನ ಆಟವಾಡಿದ್ದಾರೆ. ಆದರೆ ಉತ್ತಮ ಆರಂಭದ ಲಾಭವನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಪಡೆದಿಲ್ಲ. ಸ್ಪಿನ್ನರ್‌ಗಳೆದುರು ತಂಡ ಪರದಾಡಿದೆ. ಎರಡನೇ ಪಂದ್ಯದಲ್ಲಿ ಸ್ಪಿನ್ನರ್ ರವಿ ಬಿಷ್ಣೋಯಿ ಮೂರು ವಿಕೆಟ್‌ಗಳನ್ನು ಪಡೆದಿದ್ದರು. ಲಂಕಾ ತಂಡವು ಬೌಲರ್‌ಗಳಿಂದ ಉತ್ತಮ ಪ್ರದರ್ಶನವನ್ನು ಎದುರುನೋಡುತ್ತಿದೆ.
ಪಂದ್ಯ ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್
ಅಭ್ಯಾಸ ಆರಂಭಿಸಿದ ರೋಹಿತ್, ಕೊಹ್ಲಿ
ಕೊಲಂಬೊ: ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ತಂಡದ ಇತರ ಆಟಗಾರರು ಆಗಸ್ಟ್ 2ರಂದು ಆರಂಭವಾಗುವ ಏಕದಿನ ಸರಣಿಗಾಗಿ ಸೋಮವಾರ ಅಭ್ಯಾಸ ಆರಂಭಿಸಿದರು.
ಸೂರ್ಯಕುಮಾರ್ ಯಾದವ್ ನಾಯಕತ್ವದ ಟಿ20 ತಂಡವು ಮಂಗಳವಾರ ಪೆಲೆಕೆಲೆಯಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ. ಈ ಮಧ್ಯೆ ರೋಹಿತ್, ಕೊಹ್ಲಿ ಮತ್ತು ಹರ್ಷಿತ್ ರಾಣಾ ಮೊದಲಾದವರು ಶ್ರೀಲಂಕಾ ತಲುಪಿದ್ದಾರೆ.
ರೋಹಿತ್, ಕೊಹ್ಲಿ ಮತ್ತು ಕುಲದೀಪ್ ಯಾದವ್ ಅವರು ವೆಸ್ಟ್‌ಇಂಡೀಸ್‌ಲ್ಲಿ ಟಿ20 ವಿಶ್ವಕಪ್ ಗೆದ್ದ ಒಂದು ತಿಂಗಳ ನಂತರ ಮೈದಾನಕ್ಕೆ ಇಳಿದಿದ್ದಾರೆ. ಹಲವು ತಿಂಗಳ ಬಳಿಕ ಶ್ರೇಯಸ್ ಅಯ್ಯರ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಅವರು ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದಲ್ಲಿ ಆಡಿದ್ದರು.
ತಂಡದ ಆಟಗಾರರು ಕೊಲಂಬೊದಲ್ಲಿ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮಾರ್ಗದರ್ಶನದಲ್ಲಿ ತಾಲೀಮು ನಡೆಸಿದರು. ಆಗಸ್ಟ್ 2, 4 ಮತ್ತು 7ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.