ADVERTISEMENT

ಇಶಾಂತ್‌, ಬೂಮ್ರಾ ಭಯದಲ್ಲಿ ವಿಂಡೀಸ್‌

ಇಂದಿನಿಂದ ಎರಡನೇ ಟೆಸ್ಟ್‌ ಪಂದ್ಯ: ಭಾರತಕ್ಕೆ ‘ಕ್ಲೀನ್‌ ಸ್ವೀಪ್‌’ ಗುರಿ

ಪಿಟಿಐ
Published 29 ಆಗಸ್ಟ್ 2019, 19:30 IST
Last Updated 29 ಆಗಸ್ಟ್ 2019, 19:30 IST
ಭಾರತ ತಂಡದವರು ಸರಣಿ ಕ್ಲೀನ್‌ಸ್ವೀಪ್‌ ಮಾಡುವ ವಿಶ್ವಾಸದಲ್ಲಿದ್ದಾರೆ
ಭಾರತ ತಂಡದವರು ಸರಣಿ ಕ್ಲೀನ್‌ಸ್ವೀಪ್‌ ಮಾಡುವ ವಿಶ್ವಾಸದಲ್ಲಿದ್ದಾರೆ   

ಕಿಂಗ್ಸ್‌ಟನ್‌, ಜಮೈಕಾ: ಮೊದಲ ಟೆಸ್ಟ್‌ ಪಂದ್ಯದಲ್ಲಿ ಕರಾರುವಾಕ್‌ ದಾಳಿ ನಡೆಸಿ, ಭಾರತಕ್ಕೆ ನಾಲ್ಕೇ ದಿನಗಳಲ್ಲಿ ಗೆಲುವಿನ ಸಿಹಿ ಉಣಬಡಿಸಿದ್ದ ಇಶಾಂತ್‌ ಶರ್ಮಾ ಮತ್ತು ಜಸ್‌ಪ್ರೀತ್‌ ಬೂಮ್ರಾ, ಈಗ ಮತ್ತೊಮ್ಮೆ ಮೋಡಿ ಮಾಡಲು ಉತ್ಸುಕರಾಗಿದ್ದಾರೆ.

ಸಬೀನಾ ಪಾರ್ಕ್‌ನಲ್ಲಿ ಶುಕ್ರವಾರದಿಂದ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯ ನಡೆಯಲಿದ್ದು, ಇಶಾಂತ್‌ ಮತ್ತು ಬೂಮ್ರಾ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ. ಇವರು ಮತ್ತೊಮ್ಮೆ ತಮ್ಮ ಬತ್ತಳಿಕೆಯಲ್ಲಿರುವ ವೇಗದ ಅಸ್ತ್ರಗಳನ್ನು ಪ್ರಯೋಗಿಸಿ ಕೆರಿಬಿಯನ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲಿದ್ದಾರಾ ಎಂಬ ಕುತೂಹಲವೂ ಗರಿಗೆದರಿದೆ.

ಕೂಲಿಡ್ಜ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಬಳಗವು 318ರನ್‌ಗಳಿಂದ ಎದುರಾಳಿಗಳನ್ನು ಸೋಲಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಮುನ್ನುಡಿ ಬರೆದಿತ್ತು. ಜೊತೆಗೆ ವಿದೇಶಿ ನೆಲದಲ್ಲಿ ದೊಡ್ಡ ಅಂತರದ ಜಯ (ರನ್‌ಗಳ ಲೆಕ್ಕದಲ್ಲಿ) ದಾಖಲಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿತ್ತು.

ADVERTISEMENT

ಆ ‍ಪಂದ್ಯದಲ್ಲಿ ಬೂಮ್ರಾ ಮತ್ತು ಇಶಾಂತ್‌ ಕ್ರಮವಾಗಿ ಆರು ಮತ್ತು ಎಂಟು ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದರು. ಇವರಿಗೆ ಮೊಹಮ್ಮದ್‌ ಶಮಿ ಮತ್ತು ರವೀಂದ್ರ ಜಡೇಜ ಉತ್ತಮ ಬೆಂಬಲ ನೀಡಿದ್ದರು. ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವ ಸಬೀನಾ ಪಾರ್ಕ್‌ ಅಂಗಳದಲ್ಲಿ ಇವರು ಮತ್ತೊಮ್ಮೆ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.

ಭಾರತಕ್ಕೆ ತಲೆನೋವಾಗಿರುವುದು ಆರಂಭಿಕ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಕರ್ನಾಟಕದ ಮಯಂಕ್‌ ಅಗರವಾಲ್‌ ಮತ್ತು ಕೆ.ಎಲ್‌.ರಾಹುಲ್‌ ಹಿಂದಿನ ಹಣಾಹಣಿಯಲ್ಲಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಡಲು ವಿಫಲರಾಗಿದ್ದರು.

ಎರಡು ಇನಿಂಗ್ಸ್‌ಗಳಿಂದ ರಾಹುಲ್‌ 82ರನ್‌ ಗಳಿಸಿದ್ದರು. ಮಯಂಕ್‌ ಕಲೆಹಾಕಿದ್ದು ಕೇವಲ 21ರನ್‌. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಮಿಂಚಿದ್ದ ಮಯಂಕ್‌ಗೆ ಮತ್ತೊಂದು ಅವಕಾಶ ಸಿಗಬಹುದು.

ನಾಯಕ ಕೊಹ್ಲಿ, ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬಲ ತುಂಬಬಲ್ಲರು. ದೀರ್ಘ ಸಮಯದ ಬಳಿಕ ತಂಡಕ್ಕೆ ಮರಳಿರುವ ರಹಾನೆ, ಮೊದಲ ಪಂದ್ಯದಲ್ಲಿ ಒಟ್ಟು 183ರನ್‌ ಗಳಿಸಿದ್ದರು. ಈ ಮೂಲಕ ತನ್ನಲ್ಲಿ ಇನ್ನೂ ಕ್ರಿಕೆಟ್‌ ಕಸುವು ಇದೆ ಎಂಬ ಸಂದೇಶವನ್ನು ಆಯ್ಕೆ ಸಮಿತಿಗೆ ರವಾನಿಸಿದ್ದರು.

ವಿಹಾರಿ ಕೂಡ 125ರನ್‌ ಗಳಿಸಿ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ ಅವರ ವಾರಸುದಾರ ಎಂದೇ ಗುರುತಿಸಿಕೊಂಡಿರುವ ರಿಷಭ್‌ ಪಂತ್‌ ಅವರು ರನ್‌ ಗಳಿಸಲು ಪರದಾಡುತ್ತಿರುವುದು ನಾಯಕನ ಚಿಂತೆಗೆ ಕಾರಣವಾಗಿದೆ. ಪಂತ್‌ ಬದಲು ವೃದ್ಧಿಮಾನ್‌ ಸಹಾಗೆ ಅವಕಾಶ ನೀಡಬೇಕು ಎಂದೂ ಕೆಲ ಹಿರಿಯ ಕ್ರಿಕೆಟಿಗರು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಕೊಹ್ಲಿ ನಡೆ ಇನ್ನೂ ನಿಗೂಢವಾಗಿದೆ.

ವಿಂಡೀಸ್‌ಗೆ ಮಾಡು ಇಲ್ಲವೇ ಮಡಿ ಹೋರಾಟ: ಆರಂಭಿಕ ಪಂದ್ಯದಲ್ಲಿ ಹೀನಾಯವಾಗಿ ಸೋತಿರುವ ವಿಂಡೀಸ್‌ ತಂಡವು ಸರಣಿ ಸಮಬಲ ಮಾಡಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಇದಕ್ಕಾಗಿ ತಂಡ ಬ್ಯಾಟಿಂಗ್‌ನಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರುವುದು ಅಗತ್ಯ. ಮೊದಲ ಪಂದ್ಯದಲ್ಲಿ ಈ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್‌ ಕೂಡ ಅರ್ಧಶತಕ ಗಳಿಸಿರಲಿಲ್ಲ. ಬೌಲಿಂಗ್‌ನಲ್ಲೂ ತಂಡದಿಂದ ಪರಿಣಾಮಕಾರಿ ಪ್ರದರ್ಶನ ಮೂಡಿಬಂದಿರಲಿಲ್ಲ.

ಪಂದ್ಯದ ಆರಂಭ: ರಾತ್ರಿ 7 (ಭಾರತೀಯ ಕಾಲಮಾನ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.