ADVERTISEMENT

ಕ್ರಿಕೆಟ್ | ಭಾರತ ಮಹಿಳಾ ತಂಡದ ಬೌಲರ್‌ಗಳ ವೈಫಲ್ಯ: ಆಸ್ಟ್ರೇಲಿಯಾ ಎ ತಂಡದ ಜಯಭೇರಿ

ಪಿಟಿಐ
Published 24 ಆಗಸ್ಟ್ 2025, 13:07 IST
Last Updated 24 ಆಗಸ್ಟ್ 2025, 13:07 IST
   

ಬ್ರಿಸ್ಬೇನ್: ಅಗ್ರಕ್ರಮಾಂಕದ ಬ್ಯಾಟರ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ಎ ತಂಡವು ಭಾರತ ಎ ವಿರುದ್ಧದ ಏಕೈಕ ‘ಟೆಸ್ಟ್‌’ ಪಂದ್ಯವನ್ನು ಗೆದ್ದುಕೊಂಡಿತು. 

ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ ಭಾನುವಾರ ನಡೆದ ನಾಲ್ಕನೇ ದಿನದಾಟದಲ್ಲಿ 280 ರನ್‌ಗಳ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ಎ ತಂಡವು 6 ವಿಕೆಟ್‌ಗಳಿಂದ ಜಯಿಸಿತು. 85.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 283 ರನ್‌ ಗಳಿಸಿತು. 

ಆತಿಥೇಯ ತಂಡದ ಆರಂಭಿಕ ಜೋಡಿ ರಚೆಲ್ ಟ್ರೆನ್‌ಮ್ಯಾನ್ (64; 143ಎ), ನಾಯಕಿ ತಹಲಿಯಾ ವಿಲ್ಸನ್ (46; 104ಎ) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 117 ರನ್‌ ಸೇರಿಸಿದರು. ಈ ಗಟ್ಟಿ ಬುನಾದಿಯ ಮೇಲೆ ಮ್ಯಾಡಿ ಡಾರ್ಕಿ (68; 116ಎ) ಹಾಗೂ ಅನಿಕಾ ಲೆರಾಯ್ಡ್ (72; 125ಎ) ಅವರು ಗೆಲುವಿನ ಸೌಧ ಕಟ್ಟಿದರು. ಭಾರತ ಎ ತಂಡದ ಎಂಟು ಬೌಲರ್‌ಗಳು ಮಾಡಿದ ಪ್ರಯತ್ನಕ್ಕೆ ಗೆಲುವಿನ ಫಲ ಸಿಗಲಿಲ್ಲ. ಸೈಮಾ ಠಾಕೂರ್ ಅವರು ಎರಡು, ಜೋಶಿತಾ ಮತ್ತು ತನುಶ್ರೀ ಸರಕಾರ್ ತಲಾ ಒಂದು ವಿಕೆಟ್ ಪಡೆದರು. 

ADVERTISEMENT

ಶನಿವಾರ ದಿನದಾಟದ ಮುಕ್ತಾಯಕ್ಕೆ 254 ರನ್‌ ಮುನ್ನಡೆ ಸಾಧಿಸಿದ್ದ ಭಾರತ ಎ ತಂಡವು ನಾಲ್ಕನೇ ದಿನ 26 ರನ್ ಗಳಿಸುವಷ್ಟರಲ್ಲಿ ಇನ್ನೆರಡು ವಿಕೆಟ್‌ಗಳನ್ನೂ ಕಳೆದುಕೊಂಡಿತು. 

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಭಾರತ ಎ: 89.1 ಓವರ್‌ಗಳಲ್ಲಿ 299. ಆಸ್ಟ್ರೇಲಿಯಾ ಎ: 76.2 ಓವರ್‌ಗಳಲ್ಲಿ 305.

ಎರಡನೇ ಇನಿಂಗ್ಸ್: ಭಾರತ ಎ:  81.4 ಓವರ್‌ಗಳಲ್ಲಿ 286 (ತಿತಾಸ್ ಸಾಧು ಔಟಾಗದೇ 22, ಜಾರ್ಜಿಯಾ ಪ್ರೆಸ್ಟ್‌ವಿಜ್ 47ಕ್ಕೆ3, ಅಮಿ ಎಡ್ಗರ್ 57ಕ್ಕೆ5) ಆಸ್ಟ್ರೇಲಿಯಾ ಎ: 85.3 ಓವರ್‌ಗಳಲ್ಲಿ 4ಕ್ಕೆ283 (ರಚೆಲ್ ಟ್ರೆನ್‌ಮ್ಯಾನ್ 64, ತಹಲಿಯಾ ವಿಲ್ಸನ್ 46, ಮ್ಯಾಡಿ ಡಾರ್ಕಿ 68, ಅನಿಕಾ ಲೆರಾಯ್ಡ್ 72, ಸೈಮಾ ಠಾಕೂರ್ 63ಕ್ಕೆ2)

ಫಲಿತಾಂಶ: ಆಸ್ಟ್ರೇಲಿಯಾ ಎ ತಂಡಕ್ಕೆ 6 ವಿಕೆಟ್‌ಗಳ ಜಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.