
ಕೆನ್‌ಬೆರಾ : ಮಳೆಯಿಂದ ಮೊಟಕುಗೊಂಡ ಮೊದಲ ಪಂದ್ಯದಲ್ಲಿ ಬೌಲರ್‌ಗಳ ಉತ್ತಮ ಪ್ರದರ್ಶನದಿಂದ ಗಳಿಸಿದ ಗೆಲುವು ಭಾರತ ಮಹಿಳಾ ತಂಡದಲ್ಲಿ ಉತ್ಸಾಹ ಮೂಡಿಸಿದೆ. ಗುರುವಾರ ನಡೆಯಲಿರುವ ಟಿ20 ಸರಣಿಯ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ವಿರುದ್ಧ ಗೆದ್ದು, ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು ಕೈವಶ ಮಾಡಿಕೊಳ್ಳುವ ಗುರಿಯಲ್ಲಿ ಭಾರತ ತಂಡವಿದೆ.
ಮಧ್ಯಮ ವೇಗದ ಬೌಲರ್ ಅರುಂಧತಿ ರೆಡ್ಡಿ ನಾಲ್ಕು ವಿಕೆಟ್‌ಗಳನ್ನು ಪಡೆದು ಆತಿಥೇಯ ತಂಡದ ಕುಸಿತಕ್ಕೆ ಕಾರಣರಾಗಿದ್ದರು. ಆಸ್ಟ್ರೇಲಿಯಾ ತಂಡಕ್ಕೆ ಪೂರ್ಣ 20 ಓವರುಗಳನ್ನೂ ಆಡಲು ಸಾಧ್ಯವಾಗದೇ 133 ರನ್‌ಗಳಿಗೆ ಆಲೌಟ್ ಆಗಿತ್ತು. ಭಾರತ 5.1 ಓವರುಗಳಲ್ಲೇ 50 ರನ್ ಬಾರಿಸಿದ್ದಾಗ ಮಳೆಯಾಯಿತು. ಡಕ್‌ವರ್ತ್ ಲೂಯಿಸ್ ನಿಯಮದಡಿ ಭಾರತ ಜಯಗಳಿಸಿತ್ತು.
ಭಾರತದ ಹೆಚ್ಚಿನ ಆಟಗಾರ್ತಿಯರು ಮಹಿಳಾ ಕ್ರಿಕೆಟ್ ಲೀಗ್‌ನಲ್ಲಿ ಆಡಿ ಸಾಕಷ್ಟು ಸಿದ್ಧತೆ ನಡೆಸಿರುವುದರಿಂದ ತಂಡ ವಿಶ್ವಾಸದಲ್ಲಿದೆ.
ಭಾರತ ಗುರುವಾರದ ಪಂದ್ಯದಲ್ಲೂ ಶಫಾಲಿ ವರ್ಮಾ ಅವರಿಂದ ಉತ್ತಮ ಆರಂಭ ನಿರೀಕ್ಷಿಸುತ್ತಿದೆ. ಅವರ ಜೊತೆಗೆ ಅನುಭವಿಗಳಾದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಅವರನ್ನು ಹೊಂದಿರುವ ಬ್ಯಾಟಿಂಗ್ ಪಡೆ ಪ್ರಬಲವಾಗಿದೆ.
ಮೂರು ಪಂದ್ಯಗಳ ಟಿ20 ಸರಣಿಯ ನಂತರ ಭಾರತ ವನಿತೆಯರ ತಂಡ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಬಳಿಕ ಏಕೈಕ ಟೆಸ್ಟ್ ಪಂದ್ಯ ಆಡಿ ಪ್ರವಾಸ ಕೊನೆಗೊಳಿಸಲಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.45 (ಭಾರತದ ಕಾಲಮಾನ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.