ಸ್ಮೃತಿ ಮಂದಾನ
ಪಿಟಿಐ
ಮುಲ್ಲನಪುರ: ಸ್ಮೃತಿ ಮಂದಾನ ಅವರು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ಅತಿ ವೇಗದ ಶತಕ ಬಾರಿಸಿದರು. ಅವರ ಬಿರುಸಿನ ಶತಕದ ನೆರವಿನಿಂದ ಭಾರತ ಬುಧವಾರ ನಡೆದ ಮಹಿಳೆಯರ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಮೇಲೆ 102 ರನ್‌ಗಳ ಭಾರಿ ಜಯ ದಾಖಲಿಸಿದರು.
ಇದರಿಂದ ಮೂರು ಪಂದ್ಯಗಳ ಸರಣಿ 1–1 ಸಮನಾಯಿತು. ಮೂರನೇ ಏಕದಿನ ಪಂದ್ಯ ಇದೇ 20ರಂದು ನವದೆಹಲಿಯಲ್ಲಿ ನಡೆಯಲಿದೆ.
91 ಎಸೆತಗಳಲ್ಲಿ 14 ಬೌಂಡರಿ, ನಾಲ್ಕು ಸಿಕ್ಸರ್‌ಗಳ ನೆರವಿನಿಂದ 117 ರನ್ ಹೊಡೆದ ಸ್ಮೃತಿ ಅವರು ಭಾರತ 292 ರನ್ ಪೇರಿಸಲು ನೆರವಾದರು. ಇದು ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತದ ಅತ್ಯಧಿಕ ಮೊತ್ತ. ಈ ಪಂದ್ಯದಲ್ಲೂ ಕೆಲವು ಕ್ಯಾಚುಗಳನ್ನು ಕೈಚೆಲ್ಲಿದರೂ ಆತಿಥೇಯರು 40.5 ಓವರುಗಳಲ್ಲಿ ಪ್ರವಾಸಿ ತಂಡವನ್ನು 190 ರನ್ನಿಗೆ ಆಲೌಟ್ ಮಾಡಿದರು.
ಆಸ್ಟ್ರೇಲಿಯಾ ತಂಡ ಗುರಿ ಎದುರಿಸುವಲ್ಲಿ ಆರಂಭದಿಂದಲೇ ಪರದಾಡಿತು. ಮೊದಲ 10 ಓವರುಗಳಾಗುವಷ್ಟರಲ್ಲಿ ತಂಡ ಕೇವಲ 25 ರನ್ ಗಳಿಸಿದ್ದು, 2 ವಿಕೆಟ್‌ಗಳನ್ನೂ ಕಳೆದುಕೊಂಡಿತ್ತು. ಭಾರತದ ಸಾಂಘಿಕ ದಾಳಿಯೆದುರು ಆಸ್ಟ್ರೇಲಿಯಾ ಹೆಚ್ಚಿನ ಹೋರಾಟ ತೋರಲಿಲ್ಲ.
ವೇಗಿ ಕ್ರಾಂತಿ ಗೌಡ 9.5 ಓವರುಗಳಲ್ಲಿ 28 ರನ್ನಿಗೆ 3 ವಿಕೆಟ್ ಪಡೆದು ಗೆಲುವಿನಲ್ಲಿ ಮಿಂಚಿದರು. ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಬೆಂಬಲ ನೀಡಿದರು. ತಂಡಕ್ಕೆ ಮರಳಿದ ರೇಣುಕಾ ಠಾಕೂರ್ ಎರಡನೇ ಓವರಿನಲ್ಲೇ ಜಾರ್ಜಿಯಾ ವೊಲ್ ಅವರ ವಿಕೆಟ್ ಪಡೆದು ಪ್ರವಾಸಿ ತಂಡಕ್ಕೆ ಪೆಟ್ಟು ನೀಡಿದರು. ಅನುಭವಿಗಳಾದ ಎಲಿಸ್ ಪೆರಿ (44) ಮತ್ತು ಅನ್ನಾಬೆಲ್ ಸದರ್‌ಲ್ಯಾಂಡ್ (45) ಬಿಟ್ಟರೆ ಉಳಿದವರಿಂದ ಪ್ರತಿರೋಧ ಎದುರಾಗಲಿಲ್ಲ. ಅನ್ನಾಬೆಲ್‌ಗೆ ಎರಡು ಜೀವದಾನಗಳೂ ದೊರೆತವು.
ಇದಕ್ಕೆ ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಭಾರತಕ್ಕೆ ಯುವತಾರೆ ಪ್ರತಿಕಾ ಮತ್ತು ಅನುಭವಿ ಎಡಗೈ ಆಟಗಾರ್ತಿ ಸ್ಮೃತಿ 11 ಓವರುಗಳಲ್ಲಿ 70 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದ್ದರು.
ಸ್ಮತಿ 77 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪಿದರು. ಭಾರತದ ಅತಿ ವೇಗದ ಶತಕ ಹೊಡೆದ ಆಟಗಾರ್ತಿ ಎಂಬ ದಾಖಲೆಯೂ ಅವರ ಹೆಸರಿನಲ್ಲೇ ಇದೆ. ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ರಾಜಕೋಟ್‌ನಲ್ಲಿ ಅವರು 70 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.
ಹರ್ಲೀನ್ ಡಿಯೊಲ್ (10) ಮತ್ತು ನಾಯಕಿ ಹರ್ಮನ್‌ಪ್ರೀತ್ (17) ಉತ್ತಮ ಆರಂಭದ ಲಾಭ ಪಡೆಯಲಿಲ್ಲ. ಮಂದಾನ ನಾಲ್ಕನೆಯವರಾಗಿ ನಿರ್ಗಮಿಸಿದ ಮೇಲೆ ಸ್ಕೋರಿಂಗ್ ವೇಗ ಕೊಂಚ ತಗ್ಗಿತು. ಆದರೆ ದೀಪ್ತಿ ಶರ್ಮಾ (40, 53ಎ) ಮತ್ತು ರಿಷಾ ಘೋಷ್ (29, 33ಎ) ಅವರು ತಂಡದ ಮೊತ್ತವನ್ನು 300ರ ಸಮೀಪ ತಲುಪಿಸಿದರು.
ಸಂಕ್ಷಿಪ್ತ ಸ್ಕೋರು
ಭಾರತ: 49.5 ಓವರುಗಳಲ್ಲಿ 292 (ಪ್ರತಿಕಾ ರಾವಲ್ 25, ಸ್ಮೃತಿ ಮಂದಾನ 117, ದೀಪ್ತಿ ಶರ್ಮಾ 40, ರಿಚಾ ಘೋಷ್ 29, ಸ್ನೇಹ ರಾಣಾ 24; ಆ್ಯಷ್ಲೆ ಗಾರ್ಡನರ್ 39ಕ್ಕೆ2, ಡಾರ್ಸಿ ಬ್ರೌನ್ 42ಕ್ಕೆ3);
ಆಸ್ಟ್ರೇಲಿಯಾ: 40.5 ಓವರುಗಳಲ್ಲಿ 190 (ಎಲ್ಲಿಸ್ ಪೆರಿ 44, ಅನ್ನಾಬೆಲ್ ಸದರ್‌ಲ್ಯಾಂಡ್ 45; ಕ್ರಾಂತಿ ಗೌಡ 28ಕ್ಕೆ3, ದೀಪ್ತಿ ಶರ್ಮಾ 24ಕ್ಕೆ2);
ಪಂದ್ಯದ ಆಟಗಾರ್ತಿ: ಸ್ಮೃತಿ ಮಂದಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.