ADVERTISEMENT

IND vs NZ | ಇಶಾನ್ ರನ್‌..ರನ್‌.. ಭಾರತ ವಿನ್..

ಪಿಟಿಐ
Published 31 ಜನವರಿ 2026, 17:38 IST
Last Updated 31 ಜನವರಿ 2026, 17:38 IST
   

ತಿರುವನಂತಪುರ: ಇಶಾನ್ ಕಿಶನ್ ಶತಕದ ಭರಾಟೆ ಮತ್ತು ಅರ್ಷದೀಪ್ ಸಿಂಗ್ ಅವರ ದಾಳಿಯಿಂದ ಭಾರತ ತಂಡವು ಶನಿವಾರ ನ್ಯೂಜಿಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಜಯ ಸಾಧಿಸಿತು. ಸರಣಿಯನ್ನು 4–1ರಿಂದ ಗೆದ್ದುಕೊಂಡಿತು. 

42 ಎಸೆತಗಳಲ್ಲಿ ಶತಕ ಸಿಡಿಸಿದ ಜಾರ್ಖಂಡ್ ಹುಡುಗ ಇಶಾನ್ ಆಟದ ಭರಾಟೆಗೆ ಜನಸ್ತೋಮ ಸಂಭ್ರಮಿಸಿತು. ಸ್ಥಳೀಯ ಹೀರೊ ಸಂಜು ಸ್ಯಾಮ್ಸನ್ ಅವರ ವೈಫಲ್ಯವನ್ನೂ ಇಶಾನ್ ಆಟ ಮರೆಸಿತು. ಅಷ್ಟೇ ಅಲ್ಲ; ಇಶಾನ್ ಶತಕ ಪೂರ್ಣ ಗೊಳಿಸಿದಾಗ ಇನ್ನೊಂದು ಬದಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಅವರಂತೂ ಮೇಲಕ್ಕೆ ಜಿಗಿದು ಸಂಭ್ರಮಿಸಿದ್ದು ವಿಶೇಷವಾಗಿತ್ತು. 

ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಐದನೇ ‌ಟಿ20 ಕ್ರಿಕೆಟ್ ಪಂದ್ಯದಲ್ಲಿ ಇಶಾನ್ ಅಬ್ಬರದ ಆಟದ ಬಲದಿಂದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ADVERTISEMENT

ಇಶಾನ್ (103; 43ಎ, 4X6, 6X10) ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ (63; 30ಎ, 4X4, 6X6) ಮೂರನೇ ವಿಕೆಟ್ ಜೊತೆಯಾಟದಲ್ಲಿ 137 (57ಎಸೆತ) ರನ್ ಸೇರಿಸಿದರು. ದಿಟ್ಟ ಪ್ರತಿಕ್ರಿಯೆ ನೀಡಿದ ನ್ಯೂಜಿಲೆಂಡ್ ಕೇವಲ 46 ರನ್‌ಗಳಿಂದ ಸೋತಿತು. ಫಿನ್ ಅಲೆನ್ (80; 38ಎ, 4X8, 6X6) ಅವರ ಬೀಸಾಟದಿಂದ ಕಿವೀಸ್ ತಂಡವು 19.4 ಓವರ್‌ಗಳಲ್ಲಿ 225 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಈ ಪಂದ್ಯದಲ್ಲಿ ಒಟ್ಟು 496 ರನ್‌ಗಳು ಹರಿದವು. ಅದರಲ್ಲಿ ಒಟ್ಟು 36 ಸಿಕ್ಸರ್‌ಗಳು ದಾಖಲಾದವು.

ಆರಂಭಿಕ ಬ್ಯಾಟರ್ ಸಂಜು (6 ರನ್) ಸತತ ಐದನೇ ಟಿ20 ಪಂದ್ಯದಲ್ಲಿಯೂ ವಿಫಲರಾದರು. ಇದರಿಂದಾಗಿ ಅವರು ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ  ಆಡುವ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ವೇಗದ ಬೌಲರ್ ಲಾಕಿ ಫರ್ಗ್ಯುಸನ್ ಎಸೆತದಲ್ಲಿ ಬೆವನ್ ಜೇಕಬ್ಸ್‌ಗೆ ಕ್ಯಾಚಿತ್ತರು. 

ಕ್ರೀಸ್‌ನಲ್ಲಿದ್ದ ಅಭಿಷೇಕ್ ಶರ್ಮಾ ಅವರೊಂದಿಗೆ ಸೇರಿಕೊಂಡ ಇಶಾನ್ ಹೊಡಿ ಬಡಿ ಆಟವಾಡಿದರು. ಅಭಿಷೇಕ್ 16 ಎಸೆತಗಳಲ್ಲಿ 30 ರನ್ ಸೂರೆ ಮಾಡಿದರು. ನಾಲ್ಕು ಬೌಂಡರಿ, ಎರಡು ಸಿಕ್ಸರ್ ಸಿಡಿಸಿದರು. ಫರ್ಗ್ಯುಸನ್ ಹಾಕಿದ ಉತ್ತಮ ಲೆಂಗ್ತ್ ಇರುವ ಚುರುಕಾದ ಎಸೆತವನ್ನು ಲಾಫ್ಟ್ ಮಾಡುವ ಶರ್ಮಾ ಪ್ರಯತ್ನ ಕೈಕೊಟ್ಟಿತು. ಚೆಂಡು ಸೀದಾ ಸ್ಟಂಪ್‌ಗೆ ಅಪ್ಪಳಿಸಿತು. ಆದರೆ ಇಲ್ಲಿಂದಲೇ ಕಿವೀಸ್ ಸಂಕಷ್ಟವೂ ಶುರುವಾಯಿತು!

ಇಶಾನ್ ಜೊತೆಗೂಡಿದ ಸೂರ್ಯ ಪ್ರಖರವಾಗಿ ಬೆಳಗಿದರು. ಇಶಾನ್ 28 ಎಸೆತಗಳಲ್ಲಿ 50 ರನ್ ಗಳಿಸಿದರು. ಸ್ಪಿನ್ನರ್ ಈಶ್ ಸೋದಿ ಹಾಕಿದ 12ನೇ ಓವರ್‌ನಲ್ಲಿ ಇಶಾನ್ 28 (4,4,4,6,4,6) ರನ್ ಹೊಡೆದರು. 27 ವರ್ಷದ ಎಡಗೈ ಬ್ಯಾಟರ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಒಂದು ಸಾವಿರ ರನ್ ಗಡಿ ದಾಟಿದರು. 

ಇನ್ನೊಂದು ಬದಿಯಲ್ಲಿ ಸೂರ್ಯ ಕೂಡ ಬೀಸಾಟವಾಡಿ, 26 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ‘ಮುಂಬೈಕರ್’ ಟಿ20 ಕ್ರಿಕೆಟ್‌ನಲ್ಲಿ 3 ಸಾವಿರ ರನ್ ಗಡಿ ಮುಟ್ಟಿದರು. ಮಿಚೆಲ್ ಸ್ಯಾಂಟನರ್ ಹಾಕಿದ ಎಸೆತವನ್ನು ಮುನ್ನುಗ್ಗಿ ಹೊಡೆಯುವ ಯತ್ನದಲ್ಲಿ ಸೂರ್ಯ ಎಡವಿದರು. ವಿಕೆಟ್‌ಕೀಪರ್ ಟೀಮ್ ಸೀಫರ್ಟ್ ಸ್ಟಂಪಿಂಗ್ ಮಾಡಿದರು. 

ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಕೂಡ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. ಕೇವಲ 17 ಎಸೆತಗಳಲ್ಲಿ 42 ರನ್ ಗಳಿಸಿದರು. 4 ಸಿಕ್ಸರ್ ಮತ್ತು 1 ಬೌಂಡರಿ ಹೊಡೆದರು. ಇಶಾನ್ ಮತ್ತು ಹಾರ್ದಿಕ್ ಜೊತೆಯಾಟದಲ್ಲಿ ಕೇವಲ 18 ಎಸೆತಗಳಲ್ಲಿ 48 ರನ್‌ ಹರಿದುಬಂದವು. ಜೇಕಬ್ ಡಫಿ ಬೌಲಿಂಗ್‌ನಲ್ಲಿ ಇಶಾನ್ ಔಟಾದರೆ, ಕೈಲ್ ಜೆಮಿಸನ್ ಓವರ್‌ನಲ್ಲಿ ಪಾಂಡ್ಯ ಆಟಕ್ಕೆ ತೆರೆಬಿತ್ತು.

ನ್ಯೂಜಿಲೆಂಡ್ ತಂಡದ ಅಲೆನ್ ಮತ್ತು ರಚಿನ್ ರವೀಂದ್ರ (30; 17ಎ) ಬಹಳಷ್ಟು ಪ್ರತಿರೋಧ ಒಡ್ಡಿದರು. ಆದರೆ ಪ್ರಮುಖ ಬ್ಯಾಟರ್‌ಗಳಿಗೆ ಅರ್ಷದೀಪ್ (51ಕ್ಕೆ5) ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ (33ಕ್ಕೆ3) ಕಡಿವಾಣ ಹಾಕಿದರು. ಆದರೆ ಎಲ್ಲ ಬೌಲರ್‌ಗಳು ಹೆಚ್ಚು ರನ್‌ ಬಿಟ್ಟುಕೊಟ್ಟರು. 

ಸಂಕ್ಷಿಪ್ತ ಸ್ಕೋರು:

ಭಾರತ: 20 ಓವರ್‌ಗಳಲ್ಲಿ 5ಕ್ಕೆ271 (ಅಭಿಷೇಕ್ ಶರ್ಮಾ 30, ಇಶಾನ್ ಕಿಶನ್ 103, ಸೂರ್ಯ ಕುಮಾರ್ ಯಾದವ್ 63, ಹಾರ್ದಿಕ್ ಪಾಂಡ್ಯ 42, ಲಾಕಿ ಫರ್ಗ್ಯುಸನ್ 41ಕ್ಕೆ2)

ನ್ಯೂಜಿಲೆಂಡ್: 19.4 ಓವರ್‌ಗಳಲ್ಲಿ 225 (ಫಿನ್ ಅಲೆನ್ 80, ರಚಿನ್ ರವೀಂದ್ರ 30, ಡ್ಯಾರಿಲ್ ಮಿಚೆಲ್ 26, ಈಶ್ ಸೋದಿ 33, ಅರ್ಷದೀಪ್ ಸಿಂಗ್ 51ಕ್ಕೆ5, ಅಕ್ಷರ್ ಪಟೇಲ್ 33ಕ್ಕೆ3) ಫಲಿತಾಂಶ: ಭಾರತ ತಂಡಕ್ಕೆ 46 ರನ್ ಜಯ ಮತ್ತು 4–1ರಿಂದ ಸರಣಿ ಗೆಲುವು. ಪಂದ್ಯದ ಆಟಗಾರ: ಇಶಾನ್‌ ಕಿಶನ್‌. ಸರಣಿ ಆಟಗಾರ: ಸೂರ್ಯಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.