ADVERTISEMENT

IND vs SL: ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ, ಸರಣಿ ವಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2024, 17:53 IST
Last Updated 28 ಜುಲೈ 2024, 17:53 IST
<div class="paragraphs"><p>ಚಿತ್ರ ಕೃಪೆ: ಬಿಸಿಸಿಐ</p></div>

ಚಿತ್ರ ಕೃಪೆ: ಬಿಸಿಸಿಐ

   

ಪಲೆಕೆಲೆ: ಯಶಸ್ವಿ ಜೈಸ್ವಾಲ್‌ ಮತ್ತು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ಭಾನುವಾರ ಮಳೆಯಿಂದ ಅಡಚಣೆ ಉಂಟಾದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಏಳು ವಿಕೆಟ್‌ಗಳಿಂದ ಮಣಿಸಿತು.

ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಭಾರತ ತಂಡವು ಕೈವಶ ಮಾಡಿಕೊಂಡಿತು. ಕೊನೆಯ ಪಂದ್ಯವು ಮಂಗಳವಾರ ನಡೆಯಲಿದೆ.

ADVERTISEMENT

ಮೊದಲು ಬ್ಯಾಟಿಂಗ್‌ ಮಾಡಿದ ಆತಿಥೇಯ ತಂಡವು ಕುಶಾಲ ಪೆರೆರಾ (53; 34ಎ, 4X6, 6X2) ಅವರ ಅರ್ಧಶತಕದ ಬಲದಿಂದ 20 ಓವರ್‌ಗ ಳಲ್ಲಿ 9 ವಿಕೆಟ್‌ಗಳಿಗೆ 161 ರನ್‌ ಗಳಿಸಿತು.

ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ್ದರಿಂದ ಭಾರತದ ಗುರಿಯನ್ನು ಪರಿಷ್ಕರಿಸಲಾಯಿತು. ಗೆಲುವಿಗೆ 8 ಓವರ್‌ಗಳಲ್ಲಿ 78 ರನ್‌ ಗಳಿಸಬೇಕಿತ್ತು. ಆದರೆ, ಭಾರತವು 6.3 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 81 ರನ್‌ ಗಳಿಸಿ ಗೆಲುವಿನ ಗಡಿ ದಾಟಿತು. ಜೈಸ್ವಾಲ್‌ (30; 15ಎ), ಸೂರ್ಯಕುಮಾರ್ (26, 12ಎ) ಮತ್ತು ಹಾರ್ದಿಕ್‌ ಪಾಂಡ್ಯ (ಔಟಾಗದೇ 22; 9ಎ) ಅಬ್ಬರಿಸಿದರು.

ಇದಕ್ಕೂ ಮೊದಲು ಲಂಕಾ ತಂಡಕ್ಕೆ ಪಥುಮ್ ನಿಸಾಂಕ (32; 24ಎ) ಮತ್ತು ಕುಶಾಲ ಮೆಂಡಿಸ್ (10, 11ಎ) ಅವರು ಉತ್ತಮ ಆರಂಭ ನೀಡುವ ಪ್ರಯತ್ನ ಮಾಡಿದರು. ಆದರೆ ನಾಲ್ಕನೇ ಒವರ್‌ನಲ್ಲಿ ಮೆಂಡಿಸ್ ವಿಕೆಟ್ ಗಳಿಸಿದ ಆರ್ಷದೀಪ್ ಸಿಂಗ್ ಜೊತೆಯಾಟವನ್ನು ಮುರಿದರು. ಈ ಹಂತದಲ್ಲಿ ಪಥುಮ್ ಮತ್ತು ಪೆರೆರಾ

ಅವರು ಜೊತೆಗೂಡಿದರು. ಎರಡನೇ ವಿಕೆಟ್‌ಗೆ ಜೊತೆಯಾಟದಲ್ಲಿ 54 ರನ್‌ ಸೇರಿಸಿದರು. ಹತ್ತನೇ ಓವರ್‌ನಲ್ಲಿ ಪಥುಮ್ ವಿಕೆಟ್ ಪಡೆದ ರವಿ ಬಿಷ್ಣೋಯಿ ಜೊತೆಯಾಟಕ್ಕೆ ತಡೆಯೊಡ್ಡಿದರು. ಆದರೂ ಪೆರೆರಾ ಅವರ ಆಟ ಮುಂದುವರಿಯಿತು. ಅವರು ಕಮಿಂದು ಮೆಂಡಿಸ್ ಅವರೊಂದಿಗೆ 3ನೇ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿದರು. 16ನೇ ಓವರ್‌ನಲ್ಲಿಯೇ ಇವರಿಬ್ಬರ ವಿಕೆಟ್‌ಗಳನ್ನೂ ಗಳಿಸಿದ ಹಾರ್ದಿಕ್ ಪಾಂಡ್ಯ ಮಿಂಚಿದರು. ಕೊನೆಯಲ್ಲಿ 22 ರನ್‌ಗಳ ಅಂತರ ದಲ್ಲಿ 5 ವಿಕೆಟ್‌ಗಳು ಪತನವಾದವು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 161 (ಪಥುಮ್ ನಿಸಾಂಕ 32, ಕುಶಾಲ ಪೆರೆರಾ 53, ಕಮಿಂದು ಮೆಂಡಿಸ್ 26, ಅಸಲಂಕಾ 14, ಅರ್ಷದೀಪ್ ಸಿಂಗ್ 24ಕ್ಕೆ2, ಅಕ್ಷರ್ ಪಟೇಲ್ 30ಕ್ಕೆ2, ರವಿ ಬಿಷ್ಣೋಯಿ 26ಕ್ಕೆ3, ಹಾರ್ದಿಕ್ ಪಾಂಡ್ಯ 23ಕ್ಕೆ2). ಭಾರತ: 6.3 ಓವರ್‌ಗಳಲ್ಲಿ 3ಕ್ಕೆ 81 (ಜೈಸ್ವಾಲ್‌ 30, ಸೂರ್ಯಕುಮಾರ್‌ 26, ಹಾರ್ದಿಕ್‌ 22). ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ (ಡಕ್ವರ್ಥ್‌ ಲೂಯಿಸ್‌ ನಿಯಮದಡಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.