ADVERTISEMENT

IND vs NZ T20I: ಅಭಿಷೇಕ್, ಸೂರ್ಯ ಸಿಡಿಲಬ್ಬರ; ಸರಣಿ ವಶ

ಪಿಟಿಐ
Published 25 ಜನವರಿ 2026, 18:01 IST
Last Updated 25 ಜನವರಿ 2026, 18:01 IST
   

ಗುವಾಹಟಿ: ಹದಿನಾಲ್ಕು ಎಸೆತಗಳಲ್ಲಿ ಅರ್ಧಶತಕ ಹೊಡೆದ ಅಭಿಷೇಕ್ ಶರ್ಮಾ ಮತ್ತು ತಮ್ಮ ಅಮೋಘ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಂಡಿತು. 

ಆತಿಥೇಯ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 153 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ತಂಡವು ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ಗಳಿಗೆ 155 ರನ್‌ ಗಳಿಸಿತು.  ಆಗ ಇನಿಂಗ್ಸ್‌ನಲ್ಲಿ ಇನ್ನೂ 60 ಎಸೆತಗಳು ಬಾಕಿ ಇದ್ದವು.

ಇದಕ್ಕೆ ಕಾರಣವಾಗಿದ್ದು ಅಭಿಷೇಕ್ ಶರ್ಮಾ (ಅಜೇಯ 68; 20ಎಸೆತ) ಮತ್ತು ಸೂರ್ಯ (ಔಟಾಗದೇ 57; 26ಎ) ಅವರ ಸಿಡಿಲಬ್ಬರದ ಬ್ಯಾಟಿಂಗ್. ಬೆಂಕಿ–ಬಿರುಗಾಳಿ ಸೇರಿದಂತಿತ್ತು ಇವರಿಬ್ಬರ ಆಟ. ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 40 ಎಸೆತಗಳಲ್ಲಿ 102 ರನ್ ಸೇರಿಸಿದರು. 

ADVERTISEMENT

ಅಭಿಷೇಕ್ 14 ಎಸೆತಗಳಲ್ಲಿ ಅರ್ಧಶತಕದ ಗಡಿ ಮುಟ್ಟಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅತಿವೇಗದ ಅರ್ಧಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಆದರು. ಅಭಿಷೇಕ್ ಅವರ ‘ಗುರು’ ಯುವರಾಜ್ ಸಿಂಗ್ 12 ಎಸೆತಗಳಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ.  

ಗುರಿ ಬೆನ್ನಟ್ಟಿದ ಭಾರತಕ್ಕೆ ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಆಘಾತವಾಯಿತು. ಮ್ಯಾಟ್‌ ಹೆನ್ರಿ ಎಸೆತದಲ್ಲಿ ಸಂಜು ಸ್ಯಾಮ್ಸನ್ ಕ್ಲೀನ್‌ಬೌಲ್ಡ್ ಆದರು. ಆದರೆ ಕ್ರೀಸ್‌ಗೆ ಬಂದ ಇಶಾನ್ ಕಿಶನ್ (28; 13ಎ, 4X3, 6X2) ಬೀಸಾಟವಾಡಿದರು. ಇನ್ನೊಂದು ಬದಿಯಲ್ಲಿ ಅಭಿಷೇಕ್ ಕೂಡ ತಮ್ಮ ಎಂದಿನ ಆಕ್ರಮಣಶೀಲ ಆಟವಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರೂ 19 ಎಸೆತಗಳಲ್ಲಿ 53 ರನ್ ಸೇರಿಸಿದರು. ಸ್ಪಿನ್ನರ್‌ ಈಶ್ ಸೋಧಿ ಬೌಲಿಂಗ್‌ನಲ್ಲಿ ಇಶಾನ್ ಔಟಾದರು. 

ಆಗ ಅಭಿಷೇಕ್ ಅವರನ್ನು ಸೇರಿಕೊಂಡ ನಾಯಕ ಸೂರ್ಯ ಆರಂಭದಿಂದಲೇ ಚೆಂಡನ್ನು ಬೌಂಡರಿಗೆರೆ ದಾಟಿಸುವತ್ತಲೇ ಚಿತ್ತ ನೆಟ್ಟರು. 25 ಎಸೆತಗಳಲ್ಲಿ ಅಅರ್ಧಶತಕ ಗಳಿಸಿದರು. ಅಭಿಷೇಕ್ 5 ಸಿಕ್ಸರ್, 7 ಬೌಂಡರಿ ಹೊಡೆದರು. ಸೂರ್ಯ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು. ಎರಡನೇ ಪಂದ್ಯದಲ್ಲಿಯೂ ಸೂರ್ಯ ಮಿಂಚಿನ ಅರ್ಧಶತಕ ಗಳಿಸಿದ್ದರು. ಈ ಪಂದ್ಯದ ಪವರ್‌ಪ್ಲೇನಲ್ಲಿ ಭಾರತ ತಂಡವು 95 ರನ್‌ ಸೂರೆ ಮಾಡಿ ದಾಖಲೆ ಬರೆಯಿತು. 

ಬೂಮ್ರಾ, ಬಿಷ್ಣೋಯಿ ಮಿಂಚು

ಕಿವೀಸ್ ಬಳಗವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ (17ಕ್ಕೆ3) ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ (18ಕ್ಕೆ2)  ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಹಾರ್ದಿಕ್ ಪಾಂಡ್ಯ (23ಕ್ಕೆ2) ಜೊತೆ ನೀಡಿದರು. 

34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಗ್ಲೆನ್ ಫಿಲಿಪ್ಸ್ (48; 40ಎ, 4X6, 6X1) ಮತ್ತು ಮಾರ್ಕ್ ಚಾಪ್ಮನ್ (32; 23ಎ, 4X2, 6X2) ಅವರು ಆಸರೆಯಾದರು. ಮಿಚೆಲ್ ಸ್ಯಾಂಟನರ್  27 ರನ್ ಗಳಿಸಿದರು. 

ಆದರೆ ರವಿ ಬಿಷ್ಣೋಯಿ ಅವರು ಗ್ಲೆನ್ ಮತ್ತು ಮಾರ್ಕ್ ವಿಕೆಟ್‌ಗಳನ್ನು ಗಳಿಸಿ ಕಿವೀಸ್ ತಂಡವು ದೊಡ್ಡ ಮೊತ್ತ ಗಳಿಸುವುದನ್ನು ತಪ್ಪಿಸಿದರು. 

ಸಂಕ್ಷಿಪ್ತ ಸ್ಕೋರು:

ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 9ಕ್ಕೆ153 (ಟಿಮ್ ಸೀಫರ್ಟ್ 12, ಗ್ಲೆನ್ ಫಿಲಿಪ್ಸ್ 48, ಮಾರ್ಕ್ ಚಾಪ್‌ಮನ್ 32, ಮಿಚೆಲ್ ಸ್ಯಾಂಟನರ್ 27, ಹಾರ್ದಿಕ್ ಪಾಂಡ್ಯ 23ಕ್ಕೆ2, ರವಿ ಬಿಷ್ಣೋಯಿ 18ಕ್ಕೆ2, ಜಸ್‌ಪ್ರೀತ್ ಬೂಮ್ರಾ 17ಕ್ಕೆ3)

ಭಾರತ: 10 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 155 (ಅಭಿಷೇಕ್ ಶರ್ಮಾ ಔಟಾಗದೇ 68, ಇಶಾನ್ ಕಿಶನ್ 28, ಸೂರ್ಯಕುಮಾರ್ ಯಾದವ್ ಔಟಾಗದೇ 57, ಮ್ಯಾಟ್ ಹೆನ್ರಿ 28ಕ್ಕೆ1, ಈಶ್ ಸೋದಿ 28ಕ್ಕೆ1) ಫಲಿತಾಂಶ: ಭಾರತಕ್ಕೆ 8 ವಿಕೆಟ್‌ಗಳ ಜಯ. ಸರಣಿಯಲ್ಲಿ 3–0 ಮುನ್ನಡೆ. ಪಂದ್ಯದ ಆಟಗಾರ: 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.