ADVERTISEMENT

ಐಸಿಸಿ ವಿಳಂಬ ನೀತಿ; ಬಿಸಿಸಿಐಗೆ ತಲೆನೋವು

ಏಜೆನ್ಸೀಸ್
Published 6 ಜುಲೈ 2020, 14:38 IST
Last Updated 6 ಜುಲೈ 2020, 14:38 IST
ಅರುಣ್‌ ಧುಮಾಲ್‌ 
ಅರುಣ್‌ ಧುಮಾಲ್‌    

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟ್ವೆಂಟಿ–20 ವಿಶ್ವಕಪ್‌ ಮುಂದೂಡುವ ವಿಚಾರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಇದುವರೆಗೂ ಸ್ಪಷ್ಟ ನಿಲುವು ತಳೆದಿಲ್ಲ. ಐಸಿಸಿಯ ಈ ವಿಳಂಬ ನೀತಿಯಿಂದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಲೆಬಿಸಿ ಶುರುವಾಗಿದೆ.

ವಿಶ್ವಕಪ್‌ ನಿಗದಿಯಾಗಿದ್ದ ಅವಧಿಯಲ್ಲೇ (ಅಕ್ಟೋಬರ್‌–ನವೆಂಬರ್‌) ಐಪಿಎಲ್ 13ನೇ ಆವೃತ್ತಿಯನ್ನು ಆಯೋಜಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಜುಲೈ ತಿಂಗಳಲ್ಲಿ ವಿಶ್ವಕಪ್‌ ಭವಿಷ್ಯದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಐಸಿಸಿ ಹೇಳಿತ್ತು. ಆದರೆ ಇನ್ನೂ ಸಭೆಯ ದಿನಾಂಕವನ್ನೇ ಪ್ರಕಟಿಸಿಲ್ಲ. ಹೀಗಾಗಿ ಬಿಸಿಸಿಗೆ ತಳಮಳ ಶುರುವಾಗಿದೆ.

‘ವಿಶ್ವಕಪ್‌ ಮುಂದೂಡುವ ವಿಚಾರದಲ್ಲಿ ತನ್ನ ನಿಲುವು ಪ್ರಕಟಿಸಲು ಐಸಿಸಿ ಏಕೆ ತಡಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಈ ವರ್ಷ ಐಪಿಎಲ್‌ ನಡೆಸಲೇಬೇಕೆಂದು ನಾವು ನಿರ್ಧರಿಸಿದ್ದೇವೆ. ಐಸಿಸಿ ತೀರ್ಮಾನವನ್ನು ನೋಡಿಕೊಂಡು ವೇಳಾಪಟ್ಟಿ ಅಂತಿಮಗೊಳಿಸಬೇಕೆಂದುಕೊಂಡಿದ್ದೇವೆ’ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಸೋಮವಾರ ಹೇಳಿದ್ದಾರೆ.

ADVERTISEMENT

‘ಪ್ರತಿನಿತ್ಯದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಭಾರತದಲ್ಲಿ ಲೀಗ್‌ ನಡೆಸಬೇಕೊ ಅಥವಾ ವಿದೇಶದಲ್ಲಿ ಆಯೋಜಿಸಬೇಕೊ ಎಂಬುದರ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಸದ್ಯಕ್ಕೆ ಎರಡು ಆಯ್ಕೆಗಳೂ ನಮ್ಮ ಮುಂದಿವೆ’ ಎಂದಿದ್ದಾರೆ.

‘ರಣಜಿ ಟ್ರೋಫಿ ಸೇರಿದಂತೆ ದೇಶಿಯ ಟೂರ್ನಿಗಳನ್ನು ನಡೆಸುವ ಆಲೋಚನೆ ಇದೆ. ಸೆಪ್ಟೆಂಬರ್‌ನಲ್ಲಿ ಕ್ರಿಕೆಟ್‌ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆ ಇದೆ’ ಎಂದೂ ಅವರು ತಿಳಿಸಿದ್ದಾರೆ.

ಕೊರೊನಾ ಬಿಕ್ಕಟ್ಟಿನಿಂದಾಗಿ ಈ ಬಾರಿಯ ಐಪಿಎಲ್‌ ರದ್ದಾದರೆ ಬಿಸಿಸಿಐಗೆ ₹4,000 ಕೋಟಿಗಿಂತಲೂ ಅಧಿಕ ನಷ್ಟವಾಗಲಿದೆ ಎಂದು ಧುಮಾಲ್‌ ಅವರು ಈ ಹಿಂದೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.