ADVERTISEMENT

ಬಿಸಿಸಿಐ ಮಾನ್ಯತೆ ನಿರೀಕ್ಷೆಯಲ್ಲಿ ಅಂಧರ ಕ್ರಿಕೆಟ್‌

ಪಿಟಿಐ
Published 5 ಮಾರ್ಚ್ 2024, 14:19 IST
Last Updated 5 ಮಾರ್ಚ್ 2024, 14:19 IST
ಬಿಸಿಸಿಐ ಲಾಂಛನ
ಬಿಸಿಸಿಐ ಲಾಂಛನ   

ನವದೆಹಲಿ: ಭಾರತ ಅಂಧರ ಕ್ರಿಕೆಟ್ ಇನ್ನು ಮೇಲಿನ ಮಟ್ಟಕ್ಕೇರಬೇಕಾದರೆ ಬಿಸಿಸಿಐ ಮಾನ್ಯತೆ ಅತ್ಯಗತ್ಯ ಎಂದು ಭಾರತ ಅಂಧರ ಕ್ರಿಕೆಟ್ ತಂಡದ ಕೋಚ್ ಮೊಹಮ್ಮದ್ ಇಬ್ರಾಹಿಂ ಸೋಮವಾರ ಹೇಳಿದ್ದಾರೆ.

ಬಿಸಿಸಿಐನ ಮಾನ್ಯತೆ ಮಾತ್ರವಲ್ಲ, ಅಂಧ ಆಟಗಾರರಿಗೆ ಮಂಡಳಿಯಿಂದ ಕೇಂದ್ರ ಗುತ್ತಿಗೆಗಳನ್ನು ನೀಡಬೇಕಾಗಿದೆ ಎಂದು ಅವರು ಹೇಳಿದರು.

'ಅಂಧರ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡವನ್ನು ನೋಡಿದರೆ, ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಗುತ್ತಿಗೆ ಆಟಗಾರರು. ಪಿಸಿಬಿ ಅವರಿಗೆ ಉತ್ತಮ ಬೆಂಬಲ ನೀಡಿದೆ, ಆಟಗಾರರು ಒಪ್ಪಂದದ ಅಡಿ ಬರುತ್ತಾರೆ’ ಎಂದು ಅವರು ಹೇಳಿದರು.

ADVERTISEMENT

‘ಬಿಸಿಸಿಐ ಸಾಮಾನ್ಯ ಕ್ರಿಕೆಟಿಗರಿಗೆ ಇರುವಂತೆ ಎ ವರ್ಗ, ಬಿ ವರ್ಗ ಮತ್ತು ಸಿ ವರ್ಗ ಮತ್ತು ಎಲ್ಲಾ ಆಟಗಾರರಿಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತಿದೆ. ಆದ್ದರಿಂದ ಅವರು ವರ್ಷದ ಎಲ್ಲಾ 365 ದಿನವೂ ಕ್ರಿಕೆಟ್ ಆಡಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ಆಟಗಾರರು ನಾಗೇಶ್ ಟ್ರೋಫಿಯಂತಹ ಸರಣಿ ಅಥವಾ ದೇಶೀಯ ಋತುವಿಗೆ ಸ್ವಲ್ಪ ಮೊದಲು ಆಡುತ್ತಿದ್ದಾರೆ. ಇದು ಇಲ್ಲಿ ದೊಡ್ಡ ಪಂದ್ಯಾವಳಿಯಾಗಿದೆ. ಆದರೆ ಪಾಕಿಸ್ತಾನದಲ್ಲಿ ಅವರು ವರ್ಷಪೂರ್ತಿ ಆಡುತ್ತಾರೆ. ಪಾಕಿಸ್ತಾನ ಕ್ರಿಕೆಟಿಗರು ಗುತ್ತಿಗೆ ಆಟಗಾರರು ಮತ್ತು ಅವರ ಫಿಟ್‌ನೆಸ್ ಮಟ್ಟ, ಅವರ ಶಕ್ತಿ, ಅವರ ಆಟವನ್ನು ನಾನು ನೋಡಿದ್ದೇನೆ’ ಎಂದು ಇಬ್ರಾಹಿಂ ಹೇಳಿದರು.

ಭಾರತ ಅಂಧರ ಕ್ರಿಕೆಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂಧ ಕ್ರಿಕೆಟಿಗರಿಗೆ ಮೆಚ್ಚುಗೆ ಮತ್ತು ಮಾನ್ಯತೆ ಹೆಚ್ಚಾಗಿದೆ. ಅಂಧರ ತಂಡದ ಮಾಜಿ ನಾಯಕ ಶೇಖರ್ ನಾಯಕ್ ಅವರಿಗೆ ಪದ್ಮಶ್ರೀ ಮತ್ತು  ಅಜಯ್ ರೆಡ್ಡಿಗೆ  ಅರ್ಜುನ ಪ್ರಶಸ್ತಿ ನೀಡಲಾಯಿತು ಎಂದರು.  

‘ಪಾಕಿಸ್ತಾನ, ಆಸ್ಟ್ರೇಲಿಯಾ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಜಿಂಬಾಬ್ವೆಯಂತಹ ಇತರ ದೇಶಗಳಂತೆ ಬಿಸಿಸಿಐ ಶೀಘ್ರದಲ್ಲೇ ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡಲಿದೆ ಎಂದು ಭಾವಿಸುತ್ತೇನೆ. ಆಟಗಾರರು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಂದ ಆರ್ಥಿಕ ಅನುದಾನ ಪಡೆಯುತ್ತಿದ್ದಾರೆ. ಕೆಲವರು ಹರಿಯಾಣ, ಕೇರಳ, ಒಡಿಶಾದಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದಿದ್ದಾರೆ. ಇನ್ನೂ ಕೆಲವು ಆಟಗಾರರು ಉದ್ಯೋಗ ನಿರೀಕ್ಷೆಯಲ್ಲಿ ಇದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.