ADVERTISEMENT

ಮೊದಲ ಟ್ವೆಂಟಿ–20 ಪಂದ್ಯ: ವೆಸ್ಟ್‌ ಇಂಡೀಸ್‌ ವಿರುದ್ಧ ರೋಹಿತ್ ಪಡೆಗೆ ಗೆಲುವು

ಖಲೀಲ್ ಅಹಮ್ಮದ್‌, ಕೃಣಾಲ್ ಪಾಂಡ್ಯಗೆ ಚೊಚ್ಚಲ ವಿಕೆಟ್‌

ಏಜೆನ್ಸೀಸ್
Published 4 ನವೆಂಬರ್ 2018, 19:27 IST
Last Updated 4 ನವೆಂಬರ್ 2018, 19:27 IST
ಕೀರನ್ ಪೊಲಾರ್ಡ್ ಅವರ ವಿಕೆಟ್ ಕಬಳಿಸಿದ ಕೃಣಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ಎಎಫ್‌ಪಿ ಚಿತ್ರ
ಕೀರನ್ ಪೊಲಾರ್ಡ್ ಅವರ ವಿಕೆಟ್ ಕಬಳಿಸಿದ ಕೃಣಾಲ್ ಪಾಂಡ್ಯ ಸಂಭ್ರಮಿಸಿದ ರೀತಿ ಎಎಫ್‌ಪಿ ಚಿತ್ರ   

ಕೋಲ್ಕತ್ತ: ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ಆತಂಕದಿಂದ ಪಾರಾಯಿತು. ಚೊಚ್ಚಲ ಪಂದ್ಯ ಆಡಿದ ಕೃಣಾಲ್‌ ಪಾಂಡ್ಯ ತಂಡಕ್ಕೆ ಆಸರೆಯಾದರು. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು ಐದು ವಿಕೆಟ್‌ಗಳ ಗೆಲುವು ಸಾಧಿಸಿದರು.

ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಯುವ ಮತ್ತು ಅನುಭವಿ ಬೌಲರ್‌ಗಳ ಮುಂದೆ ಬ್ಯಾಟಿಂಗ್ ವೈಫಲ್ಯ ಕಂಡ ವಿಶ್ವ ಚಾಂಪಿಯನ್ನರು 109 ರನ್‌ಗಳಿಗೆ ಆಲೌಟಾದರು.

ಗುರಿ ಬೆನ್ನತ್ತಿದ ಭಾರತ ತಂಡವೂ ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದು ಕೊಂಡು ಆತಂಕಕ್ಕೆ ಒಳಗಾಯಿತು. 45 ರನ್ ಗಳಿಸುಷ್ಟರಲ್ಲಿ ರೋಹಿತ್ ಶರ್ಮಾ, ಶಿಖರ್‌ ಧವನ್‌, ರಿಷಭ್ ಪಂತ್ ಮತ್ತು ಕೆ.ಎಲ್‌.ರಾಹುಲ್ ಔಟಾದರು. ಈ ಹಂತದಲ್ಲಿ ಒತ್ತಡಕ್ಕೆ ಒಳಗಾದ ತಂಡಕ್ಕೆ ಮನೀಷ್ ಪಾಂಡೆ ಮತ್ತು ವಿಕೆಟ್ ಕೀಪರ್‌ ದಿನೇಶ್ ಕಾರ್ತಿಕ್ ಆಸರೆಯಾದರು. ಐದನೇ ವಿಕೆಟ್‌ಗೆ ಇವರಿಬ್ಬರು 38 ರನ್ ಸೇರಿಸಿದರು. ಮನೀಷ್ ಔಟಾದ ನಂತರ ದಿನೇಶ್ ಕಾರ್ತಿಕ್‌ ಜೊತೆಗೂಡಿ ಕೃಣಾಲ್ ಪಾಂಡ್ಯ ತಂಡವನ್ನು ಗೆಲುವಿನ ದಡ ಸೇರಿಸಿದರು.

ADVERTISEMENT

ಬೆದರಿದ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳು: ಭಾರತದ ಯುವ ಮತ್ತು ಅನುಭವಿ ಬೌಲರ್‌ಗಳಿಗೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ಬೆದರಿದರು. ತಂಡ 16 ರನ್ ಗಳಿಸಿದ್ದಾಗ ದಿನೇಶ್‌ ರಾಮ್ದಿನ್ ಅವರನ್ನು ಉಮೇಶ್ ಯಾದವ್ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೆ ಆರು ರನ್ ಸೇರಿಸುವಷ್ಟರಲ್ಲಿ ಶಾಯ್ ಹೋಪ್‌ ರನ್ ಔಟಾದರು. ಸ್ಫೋಟಕ ಬ್ಯಾಟ್ಸ್‌ಮನ್‌ ಶಿಮ್ರಾನ್ ಹೆಟ್ಮೆಯರ್ ಪೆವಿಲಿಯನ್‌ಗೆ ಮರಳಿದಾಗ ತಂಡದ ಮೊತ್ತ ಕೇವಲ 28 ಆಗಿತ್ತು. ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯ ಆಡಿದ ಎಡಗೈ ಸ್ಪಿನ್ನರ್‌ ಕೃಣಾಲ್ ಪಾಂಡ್ಯ, ಅಪಾಯಕಾರಿ ಬ್ಯಾಟ್ಸ್‌ಮನ್‌ ಕೀರನ್ ಪೊಲಾರ್ಡ್ ವಿಕೆಟ್ ಕಬಳಿಸಿದರು. ಫ್ಯಾಬಿಯೆನ್ ಅಲೆನ್‌ ಅವರನ್ನು ಔಟ್ ಮಾಡುವುದರೊಂದಿಗೆ ಖಲೀಲ್ ಅಹಮ್ಮದ್ ಟ್ವೆಂಟಿ–20ಯಲ್ಲಿ ಮೊತ್ತ ಮೊದಲ ವಿಕೆಟ್ ಗಳಿಸಿದರು. ಮೂರು ವಿಕೆಟ್ ಕಬಳಿಸಿ ಎಡಗೈ ಸ್ಪಿನ್ನರ್ ಕುಲ ದೀಪ್ ಯಾದವ್‌ ಬೆಳಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.