ADVERTISEMENT

ಮಿಥಾಲಿ ರಾಜ್‌: ಭಾರತದ ಕ್ರಿಕೆಟ್‌ನಲ್ಲಿ ಒಂದು ಯುಗವನ್ನೇ ಸೃಜಿಸಿದ ದಂತಕಥೆ

ಗಿರೀಶದೊಡ್ಡಮನಿ
Published 11 ಜೂನ್ 2022, 19:30 IST
Last Updated 11 ಜೂನ್ 2022, 19:30 IST
ಬಾಲ್ಯದಲ್ಲಿ ಮಿಥಾಲಿ ರಾಜ್‌ –ಟ್ವಿಟರ್‌ ಚಿತ್ರ
ಬಾಲ್ಯದಲ್ಲಿ ಮಿಥಾಲಿ ರಾಜ್‌ –ಟ್ವಿಟರ್‌ ಚಿತ್ರ   

ಎರಡೂವರೆ ದಶಕಗಳ ಹಿಂದೆ ಇನ್ನೂ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಟ್ಟಿರಲಿಲ್ಲ. ಸಾಮಾಜಿಕ ಜಾಲತಾಣಗಳ ಬಗ್ಗೆ ಗೊತ್ತೇ ಇರಲಿಲ್ಲ. ಆ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಮಿಥಾಲಿ ರಾಜ್ ಈಚೆಗೆ ನಿವೃತ್ತಿ ಘೋಷಿಸಿದರು. ವಿದಾಯ ಹೇಳಿ ನಾಲ್ಕು ದಿನ ಕಳೆದರೂಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾಧನೆಗಳ ಕಥೆಗಳು ಹರಿದಾಡುತ್ತಲೇ ಇವೆ. ಭಾರತದಲ್ಲಿ ಮಹಿಳಾ ಕ್ರಿಕೆಟ್‌ಗೆ ಜನಪ್ರಿಯತೆ, ಗೌರವ ಮತ್ತು ವರ್ಚಸ್ಸು ತಂದುಕೊಟ್ಟ ನಾಯಕತ್ವ ಮಿಥಾಲಿ ಅವರದ್ದು.

ಇವತ್ತು ಸಣ್ಣ, ದೊಡ್ಡ ನಗರಗಳ ಕ್ರಿಕೆಟ್ ಅಕಾಡೆಮಿಗಳಲ್ಲಿ ಹೆಣ್ಣುಮಕ್ಕಳ ದಂಡು ಕಾಣಿಸುತ್ತಿರುವುದರ ಹಿಂದೆ ಮಿಥಾಲಿಯ ಪ್ರಭಾವಳಿ ಇದೆ. ಅವರ ನಾಯಕತ್ವದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವಕಪ್‌ನಲ್ಲಿ ಎರಡು ಬಾರಿ ರನ್ನರ್ಸ್ ಅಪ್ ಆಯಿತು. ತಂಡವು 2005ರಲ್ಲಿ ಫೈನಲ್‌ ತಲುಪಿದಾಗಲೇ ಭಾರತದ ವನಿತೆಯರ ತಾಕತ್ತು ಏನೆಂಬುದು ಜಗತ್ತಿಗೆ ತಿಳಿದಿತ್ತು. ಮಹಿಳಾ ಕ್ರಿಕೆಟ್ ಎಂದರೇ ಮೂಗು ಮುರಿಯುವವರ ಕಣ್ಣುಗಳೂ ಮೆಚ್ಚುಗೆ ಬೀರಲು ಆರಂಭಿಸಿದ ಹೊತ್ತು ಅದು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವ್ಯಾಪ್ತಿಗೆ ಮಹಿಳಾ ಕ್ರಿಕೆಟ್ ಸೇರಲು ಕಾರಣವಾಗಿದ್ದು ಕೂಡ ಈ ಸಾಧನೆ. ಇದರಿಂದಾಗಿ ಹಣ, ಹೆಸರು ಮತ್ತು ಜನಪ್ರಿಯತೆಗಳು ಮಹಿಳಾ ಕ್ರಿಕೆಟ್‌ನತ್ತಲೂ ಮುಖ ಮಾಡಿದವು. ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರ ಅಸ್ಮಿತೆಯ ಪ್ರತೀಕವಾಗಿ ಮಿಥಾಲಿ ಗಮನ ಸೆಳೆದರು.

ಹೆಣ್ಣುಮಕ್ಕಳನ್ನು ನೃತ್ಯ, ಸಂಗೀತ, ಅಡುಗೆ, ಹೊಲಿಗೆ ಕೌಶಲಗಳಿಗೆ ಸೀಮಿತಗೊಳಿಸುವ ಕಾಲದಲ್ಲಿಯೇ ಮಗಳನ್ನು ಕ್ರಿಕೆಟ್‌ ಆಟಗಾರ್ತಿಯನ್ನಾಗಿ ರೂಪಿಸಲು ಪಣತೊಟ್ಟ ಅಪ್ಪ ದೊರೈರಾಜ್ ಅನುಕರಣೀಯರಾಗುತ್ತಾರೆ. ತಮಿಳುನಾಡು ಮೂಲದ ಕುಟುಂಬದಲ್ಲಿ ಜನಿಸಿದ ಮಿಥಾಲಿಗೆ ಸಹಜವಾಗಿಯೇ ನೃತ್ಯದ ಅಭಿರುಚಿ ಇತ್ತು. ಭರತನಾಟ್ಯದ ಕಲಿಕೆಯಲ್ಲಿ ಆಸಕ್ತಿ ಕೂಡ ಇತ್ತು. ಆದರೆ ವಾಯುಸೇನೆ ಅಧಿಕಾರಿಯಾಗಿದ್ದ ದೊರೈರಾಜ್ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು.

ADVERTISEMENT

ಆದರೆ, ಮಿಥಾಲಿಗೇನೂ ಕ್ರಿಕೆಟ್ ಕ್ರೇಜ್‌ ಇರಲಿಲ್ಲ. ಅದರಲ್ಲೂ ಬೆಳಗಿನ ಜಾವ ನಿದ್ದೆ ಬಿಟ್ಟೇಳುವುದೆಂದರೆ ಕಡುಕೋಪ.

ಬಾಲ್ಯದಲ್ಲಿ ಮಿಥಾಲಿ ರಾಜ್‌ -ಟ್ವಿಟರ್‌ ಚಿತ್ರ

‘ನಾನು ಬಾಲ್ಯದಲ್ಲಿ ಸ್ವಲ್ಪ ಆಲಸಿಯಾಗಿದ್ದೆ. ಬೆಳಗಿನ ಜಾವ ಏಳುವುದೆಂದರೆ ಆಗುತ್ತಿರಲಿಲ್ಲ. ಆದರೂ ಅಪ್ಪನಿಗೆ ಹೆದರಿ ಕ್ರಿಕೆಟ್ ಕಿಟ್ ಹಿಡಿದು ಅಕಾಡೆಮಿಗೆ ಓಡುತ್ತಿದ್ದೆ. ಆರಂಭದಲ್ಲಿ ಯಾರಿಗಪ್ಪ ಬೇಕು ಕ್ರಿಕೆಟ್ ಎನ್ನುತ್ತಿದ್ದೆ. ಅಪ್ಪನ ಮೇಲೆ ಸಿಟ್ಟು ಬರುತ್ತಿತ್ತು. ದಿನಕಳೆದಂತೆ ಆಟ ಆಸಕ್ತಿ ಮೂಡಿಸಿತು. ಈಗ ಹೆಸರು, ಹಣ, ಅಭಿಮಾನಿಗಳ ಪ್ರೀತಿ ಅನುಭವಿಸುವಾಗ ಅಪ್ಪ ಅವತ್ತು ಬಿಗಿ ನಿಲುವು ತಾಳದಿದ್ದರೆ ನಾನು ಈ ಮಟ್ಟಕ್ಕೇರುತ್ತಿರಲಿಲ್ಲ ಅನಿಸುತ್ತೆ. ಅಪ್ಪನಿಗೆ ಥ್ಯಾಂಕ್ಸ್‌’ ಎಂದು ಮಿಥಾಲಿ ಟಿ.ವಿ. ಸಂದರ್ಶನವೊಂದರಲ್ಲಿ ಕೆಲವು ವರ್ಷಗಳ ಹಿಂದೆಯೇ ಹೇಳಿದ್ದರು.

ಮಿಥಾಲಿ ಪುಸ್ತಕಪ್ರೀತಿ: ಮಿಥಾಲಿಗೆ ಕ್ರಿಕೆಟ್ ಬಿಟ್ಟರೆ ಅಚ್ಚುಮೆಚ್ಚಿನ ಹವ್ಯಾಸವೆಂದರೆ ಪುಸ್ತಕಗಳನ್ನು ಓದುವುದು. ಅವರು ಕ್ರಿಕೆಟ್‌ ಸರಣಿ ಆಡಲು ಹೊರಟರೆ ಕ್ರಿಕೆಟ್ ಕಿಟ್, ಬಟ್ಟೆಯ ಸೂಟ್‌ಕೇಸ್‌ ಜೊತೆಗೆ ಪುಸ್ತಕಗಳ ಒಂದು ಚೀಲವೂ ಇರುತ್ತಿತ್ತು. ಮಿಥಾಲಿ ತಮ್ಮ ತಂಡದ ಆರಂಭಿಕ ಆಟಗಾರ್ತಿಯರು ಬ್ಯಾಟಿಂಗ್ ಮಾಡುವುದನ್ನು ಪೂರ್ತಿಯಾಗಿ ಯಾವಾಗಲೂ ನೋಡಿಯೇ ಇಲ್ಲ. ಅತ್ತ ಮೈದಾನದಲ್ಲಿ ಆಟ ನಡೆಯುತ್ತಿದ್ದರೆ, ತಮ್ಮ ಬ್ಯಾಟಿಂಗ್‌ ಸರದಿ ಬರುವವರೆಗೂ ಪುಸ್ತಕದಲ್ಲಿ ಮುಳುಗಿರುತ್ತಿದ್ದರು ಮಿಥಾಲಿ. ಅಭ್ಯಾಸದ ನಡುವೆ, ವಿಶ್ರಾಂತಿ ಸಮಯದಲ್ಲಿ ಕೈಯಲ್ಲಿ ಪುಸ್ತಕ ಇರಲೇಬೇಕು.

‘ಹೌದು. ಮಿಥಾಲಿಯವರಿಗೆ ಪುಸ್ತಕ ಓದಿನ ಹವ್ಯಾಸ ಬಹಳಷ್ಟಿತ್ತು. ನಾನು ಕೂಡ ಬಹಳಷ್ಟು ಪುಸ್ತಕ ಓದುವುದರಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದೆ. ನಮಗೆ ಹೊರಗೆ ಸುತ್ತಾಡಲು ಹೋಗುವ, ಗಾಸಿಪ್‌ ಮಾಡುವಂತಹ ಹವ್ಯಾಸಗಳು ಇರಲಿಲ್ಲ. ಒಳ್ಳೆಯ ಕೃತಿಗಳ ಓದಿನಿಂದ ನಮ್ಮ ಮನೋಬಲ ಗಟ್ಟಿಯಾಗುತ್ತಿತ್ತು. ಅದರಿಂದಾಗಿಯೇ ಮೆಂಟಲ್ ಕೋಚ್ ಇಲ್ಲದ ಕಾಲದಲ್ಲಿಯೂ ಮಿಥಾಲಿ ಎಲ್ಲ ಬಗೆಯ ಒತ್ತಡಗಳನ್ನು ಮೀರಿ ನಾಯಕಿ ಮತ್ತು ಬ್ಯಾಟರ್ ಆಗಿ ಯಶಸ್ವಿಯಾದರು’ ಎಂದು ಅವರೊಂದಿಗೆ ಆಡಿದ್ದ ಕರುಣಾ ಜೈನ್ ನೆನಪಿಸಿಕೊಳ್ಳುತ್ತಾರೆ.

ಪದಾರ್ಪಣೆ ಪಂದ್ಯದಲ್ಲಿಯೇ ಶತಕ, ಏಕದಿನ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್‌ ಗಳಿಸಿದ ಮೊದಲ ಆಟಗಾರ್ತಿ, ಎಲ್ಲ ಮಾದರಿ ಸೇರಿ ಹತ್ತು ಸಾವಿರಕ್ಕೂ ಹೆಚ್ಚು ರನ್‌ಗಳು, ಎರಡು ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ ದಾಖಲೆಗಳು ಅವರ ಹೆಸರಿನಲ್ಲಿವೆ. ಮೂರು ಮಾದರಿಗಳಲ್ಲಿಯೂ ಮಿಂಚಿದ ಅವರಿಗೆ ಅವರೇ ಸಾಟಿ. ಮಿಥಾಲಿ ಆಟದಿಂದ ಪ್ರಭಾವಿತರಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂದಾನ, ಶಫಾಲಿ ವರ್ಮಾ ಅವರಂತಹ ಪ್ರತಿಭಾನ್ವಿತೆಯರು ಈಗ ಭಾರತ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಪುರುಷರ ವಿಭಾಗದ ತಾರೆಯರಷ್ಟೇ ವರ್ಚಸ್ಸು ಗಳಿಸಿಕೊಂಡಿರುವ ಮಿಥಾಲಿಯ ಬಯೋಪಿಕ್ ‘ಶಾಭಾಷ್ ಮೀತು’ ಇನ್ನೇನು ತೆರೆಕಾಣಲು ಸಿದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.